ಸಾರಾಂಶ
ವೆಸ್ಟ್ ಪಾಮ್ ಬೀಚ್ (ಅಮೆರಿಕ): ಇರಾನ್ ಬೆಂಬಲಿತ ಯೆಮೆನ್‌ನ ಹೌತಿ ಉಗ್ರರ ನೆಲೆಗಳ ಮೇಲೆ ಅಮೆರಿಕ ಶನಿವಾರ ರಾತ್ರಿ ಮತ್ತು ಭಾನುವಾರ ಹೌತಿ ನೆಲೆಗಳ ಮೇಲೆ ವಾಯುದಾಳಿ ನಡೆಸಿದೆ. ಘಟನೆಯಲ್ಲಿ 31 ಜನರು ಹತರಾಗಿದ್ದಾರೆ.
ಯೆಮೆನ್ ರಾಜಧಾನಿ ಸನಾ, ಸಾದಾ ಮತ್ತು ಸೌದಿ ಅರೇಬಿಯಾದ ಗಡಿ ಭಾಗದಲ್ಲಿ ಅಮೆರಿಕದ ಪಡೆಗಳು ಭೀಕರ ವಾಯುದಾಳಿ ನಡೆಸಿವೆ. ಈ ವೇಳೆ 100ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ ಎಂದು ಹೌತಿ ಆರೋಗ್ಯ ಇಲಾಖೆ ಹೇಳಿದೆ. ಮತ್ತೊಂದೆಡೆ ಅಮೆರಿಕದ ದಾಳಿಗೆ ಪ್ರತಿಕಾರ ತೆಗೆದುಕೊಳ್ಳುವುದಾಗಿ ಹೌತಿ ಹೇಳಿದೆ.
ದಾಳಿಗೆ ಕಾರಣವೇನು?
ಇಸ್ರೇಲ್ ಹಮಾಸ್ ನಡುವೆ ಯುದ್ಧ ಆರಂಭವಾದ ಬಳಿಕ ಹೌತಿ ಉಗ್ರರು ಇಸ್ರೇಲ್ ಪರವಾಗಿದ್ದ ರಾಷ್ಟ್ರಗಳ ಹಡಗುಗಳ ಮೇಳೆ ದಾಳಿ ಮಾಡುತ್ತಿದ್ದರು. ಅಡೇನ್ ಕೊಲ್ಲಿ ಮೂಲಕ ಕೆಂಪು ಸಮುದ್ರಕ್ಕೆ ಹೋಗುವ ಹಡಗುಗಳ ಮೇಳೆ ದಾಳಿ ಮಾಡಿ ನಾವಿಕರಿಗೆ ತೊಂದರೆ ಕೊಡುತ್ತಿದ್ದರು. ಈ ಮೂಲಕ ಹಮಾಸ್‌ಗೆ ಬೆಂಬಲ ನೀಡುತ್ತಿದ್ದರು. ಅಮೆರಿಕದ ಹಡಗುಗಳ ಮೇಲೆಯೂ ದಾಳಿ ಮಾಡಿದ್ದರು. ಇದರ ಪ್ರತಿಕಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾಯುದಾಳಿಗೆ ಸಮ್ಮತಿಸಿದ್ದರು.