ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ.3.54ಕ್ಕೆ ಕುಸಿತ : ಕಳೆದ 5 ವರ್ಷಗಳಲ್ಲೇ ಅತ್ಯಂತ ಕನಿಷ್ಠ

| Published : Aug 13 2024, 12:46 AM IST / Updated: Aug 13 2024, 08:31 AM IST

ಸಾರಾಂಶ

ಕೇಂದ್ರ ಸರ್ಕಾರ ಜುಲೈ ತಿಂಗಳ ಹಣದುಬ್ಬರದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು, ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ.3.54ಕ್ಕೆ ಕುಸಿದಿದೆ. ಇದು ಕಳೆದ 5 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಪ್ರಮಾಣವಾಗಿದೆ.

 ನವದೆಹಲಿ :  ಕೇಂದ್ರ ಸರ್ಕಾರ ಜುಲೈ ತಿಂಗಳ ಹಣದುಬ್ಬರದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು, ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ.3.54ಕ್ಕೆ ಕುಸಿದಿದೆ. ಇದು ಕಳೆದ 5 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಪ್ರಮಾಣವಾಗಿದೆ.

 ಇದು ಮುಂಬರುವ ದಿನಗಳಲ್ಲಿ ಆರ್‌ಬಿಐ ಸಾಲದ ಮೇಲಿನ ಬಡ್ಡಿದರಗಳನ್ನು ಇಳಿಸಲು ಚಿಂತಿಸುವತ್ತ ಹೆಜ್ಜೆ ಇಡಬಹುದು ಎಂಬ ಆಶಾಭಾವನೆಗೆ ಕಾರಣವಾಗಿದೆ.ಗ್ರಾಹಕ ದರ ಸೂಚ್ಯಂಕ ಆಧರಿತ ಚಿಲ್ಲರೆ ಹಣದುಬ್ಬರ ಪ್ರಮಾಣವು 2023ರ ಜುಲೈನಲ್ಲಿ ಶೇ.7.44ರಷ್ಟು ಇದ್ದರೆ, 2024ರ ಜೂನ್‌ನಲ್ಲಿ ಶೇ.5.08ರಷ್ಟಿತ್ತು. ಇದಕ್ಕೆ ಹೋಲಿಸಿದರೆ 2024ರ ಜುಲೈ ತಿಂಗಳ ಚಿಲ್ಲರೆ ಹಣದುಬ್ಬರ ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡುಬಂದಿದೆ.

ಈ ಪ್ರಮಾಣದ ಆರ್‌ಬಿಐ ಉತ್ತಮ ಎಂದು ನಿಗದಿಪಡಿಸಿರುವ ಶೇ.4ಕ್ಕಿಂತ ಕಡಿಮೆ ಇದೆ ಎಂಬುದು ಆಶಾದಾಯಕ ಬೆಳವಣಿಗೆಯಾಗಿದೆ. ಈ ಹಿಂದೆ 2019ರ ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ.4ಕ್ಕಿಂತ ಕೆಳಗೆ ಇಳಿದಿತ್ತು. ಅದಾದ ನಂತರ ಸತತವಾಗಿ ಏರಿಕೆ ಕಂಡು ದಾಖಲೆ ಮಟ್ಟ ಮುಟ್ಟಿತ್ತು.

ಆಹಾರ ವಸ್ತುಗಳ ಬೆಲೆ ಇಳಿಕೆ ಕಾರಣ: ಗ್ರಾಹಕ ದರ ಸೂಚ್ಯಂಕ ಪಟ್ಟಿಯಲ್ಲಿ ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಕಳೆದ ಜೂನ್‌ನಲ್ಲಿ ಶೇ.9.36ರಷ್ಟಿದ್ದರೆ, ಜುಲೈನಲ್ಲಿ ಅದು ಶೇ.5.42ಕ್ಕೆ ಇಳಿಸಿದೆ.ಇನ್ನು ರಾಷ್ಟ್ರೀಯ ಮಟ್ಟದಲ್ಲಿನ ಸರಾಸರಿ ಹಣದುಬ್ಬರಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲೇ ಚಿಲ್ಲರೆ ಹಣದುಬ್ಬರ ಹೆಚ್ಚು ದಾಖಲಾಗಿದೆ. ಗ್ರಾಮೀಣ ಭಾಗದಲ್ಲಿ ಈ ಪ್ರಮಾಣ ಶೇ.4.1ರಷ್ಟು ಇದ್ದರೆ, ನಗರ ಪ್ರದೇಶಗಳಲ್ಲಿ ಈ ಪ್ರಮಾಣ ಶೇ.2.98ರಷ್ಟು ದಾಖಲಾಗಿದೆ ಎಂದು ಅಂಕಿ-ಅಂಶಗಳು ಹೇಳಿವೆ.ರಾಜ್ಯಗಳಿಗೆ ಹೋಲಿಸಿದರೆ ಬಿಹಾರದಲ್ಲಿ ಅತಿ ಹೆಚ್ಚು ಶೇ.5.87ರಷ್ಟು ದಾಖಲಾಗಿದ್ದರೆ, ಜಾರ್ಖಂಡ್‌ನಲ್ಲಿ ಶೆ.1.72ರಷ್ಟು ದಾಖಲಾಗಿದೆ.