ಸಾರಾಂಶ
ಸತಾರಾ: ಚುನಾವಣೆಯಲ್ಲಿ ನಮ್ಮನ್ನು ನೇರವಾಗಿ ಎದುರಿಸಲಾಗದ ಪ್ರತಿಪಕ್ಷಗಳು ತಂತ್ರಜ್ಞಾನದ ದುರ್ಬಳಕೆಯ ಮೂಲಕ ಬಿಜೆಪಿಯನ್ನು ಹತ್ತಿಕ್ಕಲು ಸಂಚು ರೂಪಿಸುತ್ತಿವೆ. ಅದರ ಭಾಗವಾಗಿ ಮುಂದಿನ ತಿಂಗಳು ದೊಡ್ಡ ಘಟನೆ ಸೃಷ್ಟಿಗೆ ತಯಾರಿ ನಡೆದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ಕರಾಡ್‌ನಲ್ಲಿ ಚುನಾವಣಾ ಪ್ರಚಾರ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘21ನೇ ಶತಮಾನವು ತಂತ್ರಜ್ಞಾನದ ಶತಮಾನವಾಗಿದೆ. ಆದರೆ ಪ್ರತಿಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ.
ಪ್ರಮುಖವಾಗಿ ಎಐ ಆಧಾರಿತ ಡೀಪ್‌ಫೇಕ್ ತಂತ್ರಜ್ಞಾನದಿಂದ ಜನತೆಗೆ ಸುಳ್ಳುಸುದ್ದಿ ಹಬ್ಬಿಸಿ ದಾರಿ ತಪ್ಪಿಸುತ್ತಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ. ಜೊತೆಗೆ ಜನತೆಯೂ ಈ ಕುರಿತಾಗಿ ಎಚ್ಚರದಿಂದಿದ್ದು, ಸುಳ್ಳುಸುದ್ದಿ ಇರುವ ವಿಡಿಯೋ ಕಂಡಕೂಡಲೇ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡುತ್ತೇನೆ.’ ಎಂದಿದ್ದಾರೆ.
ಜೊತೆಗೆ ಈ ಸಂಚಿನ ಭಾಗವಾಗಿ ಮುಂದಿನ ತಿಂಗಳು ದೊಡ್ಡ ಘಟನೆ ಸೃಷ್ಟಿಗೆ ಯೋಜನೆ ರೂಪಿಸಲಾಗಿದೆ. ನಾನು ಇದನ್ನು ಅತ್ಯಂತ ಗಂಭೀರವಾಗಿ ಹೇಳುತ್ತಿದ್ದೇನೆ. ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಆಟ ಆಡಲಾಗುತ್ತಿದೆ. ಇಂಥ ನಕಲಿ ವಿಡಿಯೋಗಳಿಂದ ಸಮಾಜವನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ’ ಎಂದರು.
ಜನಪರ ಯೋಜನೆಗಳ ಮಾಹಿತಿ ನೇರವಾಗಿ ಜನರನ್ನು ತಲುಪಲಿ ಎಂದು ನಾನು ಸಾಮಾಜಿಕ ಜಾಲತಾಣಗಳನ್ನು ಬಳುಸುತ್ತಿದ್ದೇನೆ. ಆದರೆ ನನ್ನದೂ, ಅಮಿತ್ ಶಾ ಮತ್ತು ನಡ್ಡಾ ಅವರ ಹೇಳಿಕೆಗಳನ್ನು ತಿರುಚಿ ಪ್ರಸಾರ ಮಾಡಲಾಗುತ್ತಿದೆ ಎಂದು ಮೋದಿ ದೂರಿದರು.