ಸಾರಾಂಶ
ಭಾನುವಾರ ಛೋಟಿ ದೀಪಾವಳಿಯ ಸಂದರ್ಭದಲ್ಲಿ, ರಾಮನ ನಗರಿ ಅಯೋಧ್ಯೆ ಮಣ್ಣಿನ ದೀಪಗಳಿಂದ ಪ್ರಜ್ವಲಿಸಿ 2 ವಿಶ್ವದಾಖಲೆ ನಿರ್ಮಿಸಿದೆ. ಏಕಕಾಲಕ್ಕೆ 26 ಲಕ್ಷ (26,17,215) ದೀಪಗಳನ್ನು ಬೆಳಗಿದ್ದು, ಮೊದಲ ದಾಖಲೆಯಾದರೆ 2128 ಜನರು ಏಕಕಾಲಕ್ಕೆ ಸರಯೂ ನದಿ ತಟದಲ್ಲಿ ನಿಂತು ಆರತಿ
ಅಯೋಧ್ಯೆ: ಭಾನುವಾರ ಛೋಟಿ ದೀಪಾವಳಿಯ ಸಂದರ್ಭದಲ್ಲಿ, ರಾಮನ ನಗರಿ ಅಯೋಧ್ಯೆ ಮಣ್ಣಿನ ದೀಪಗಳಿಂದ ಪ್ರಜ್ವಲಿಸಿ 2 ವಿಶ್ವದಾಖಲೆ ನಿರ್ಮಿಸಿದೆ. ಏಕಕಾಲಕ್ಕೆ 26 ಲಕ್ಷ (26,17,215) ದೀಪಗಳನ್ನು ಬೆಳಗಿದ್ದು, ಮೊದಲ ದಾಖಲೆಯಾದರೆ 2128 ಜನರು ಏಕಕಾಲಕ್ಕೆ ಸರಯೂ ನದಿ ತಟದಲ್ಲಿ ನಿಂತು ಆರತಿ ಬೆಳಗಿದ್ದು, ಇನ್ನೊಂದು ದಾಖಲೆ ಆಗಿದೆ.
2024ರಲ್ಲಿ 25 ಲಕ್ಷ ದೀಪಗಳನ್ನು ಅಯೋಧ್ಯೆಯಲ್ಲಿ ಬೆಳಗಿ ದಾಖಲೆ ನಿರ್ಮಿಸಲಾಗಿತ್ತು. ಈಗ ತನ್ನದೇ ದಾಖಲೆಯನ್ನು ಅಯೋಧ್ಯೆ ಮುರಿದಿದೆ.
ಡ್ರೋನ್‌ಗಳನ್ನು ಬಳಸಿಕೊಂಡು ದೀಪಗಳ ಎಣಿಕೆಯನ್ನು ಪರಿಶೀಲಿಸಿದ ನಂತರ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಪ್ರತಿನಿಧಿಗಳು ಈ ಘೋಷಣೆ ಮಾಡಿದ್ದಾರೆ ಎಂದು ಸರ್ಕಾರಿ ಹೇಳಿಕೆ ತಿಳಿಸಿದೆ.
ಉತ್ತರ ಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜೈವೀರ್ ಸಿಂಗ್ ಮತ್ತು ಪ್ರಧಾನ ಕಾರ್ಯದರ್ಶಿ ಅಮೃತ್ ಅಭಿಜಾತ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಗಿನ್ನೆಸ್ ಪ್ರಮಾಣಪತ್ರವನ್ನು ಪ್ರದಾನ ಮಾಡಿದರು.
ಸನಾತನಿಗಳ ಹೋರಾಟದಿಂದ ರಾಮ ವಿರಾಜಮಾನ: ಯೋಗಿ
ಅಯೋಧ್ಯೆ: ‘ಕಾಂಗ್ರೆಸ್‌ನವರು ರಾಮನನ್ನು ಕಾಲ್ಪನಿಕ ಎಂದಿದ್ದರು. ಸಮಾಜವಾದಿ ಪಕ್ಷದವರು ರಾಮಭಕ್ತರತ್ತ ಗುಂಡು ಹಾರಿಸಿದ್ದರು. 500 ವರ್ಷಗಳ ಸನಾತನ ಧರ್ಮೀಯರ ಹೋರಾಟದಿಂದ ಇಂದು ರಾಮ ವಿರಾಜಮಾನನಾಗಿದ್ದಾನೆ. ನಾವಿಂದು ಅದೇ ಸ್ಥಳದಲ್ಲಿ ದೀಪ ಬೆಳಗಿಸುತ್ತಿದ್ದೇವೆ’ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಾಂಗ್ರೆಸ್‌ಗೆ ಚಾಟಿ ಬೀಸಿದ್ದಾರೆ.
ಅಯೋಧ್ಯಾ ಧಾಮದಲ್ಲಿ ನಡೆಯುತ್ತಿರುವ 9ನೇ ದೀಪೋತ್ಸವದಲ್ಲಿ ಮಾತನಾಡಿದ ಅವರು. ‘ಅಯೋಧ್ಯೆಯಲ್ಲಿ ಲಕ್ಷಾಂತರ ದೀಪಗಳಯ ಪ್ರಜ್ವಲಿಸುತ್ತಿರುವ ಈ ಹೊತ್ತಿನಲ್ಲಿ, ನಾವು ರಾಮಜನ್ಮಭೂಮಿ ಚಳವಳಿ ಮರೆಯಬಾರದು. ಶ್ರೀರಾಮ ಕಾಲ್ಪನಿಕ ಎಂದು ಅಂದು ಕಾಂಗ್ರೆಸ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅತ್ತ ಇದೇ ಅಯೋಧ್ಯೆಯಲ್ಲಿ ಸಮಾಜವಾದಿ ಪಕ್ಷದವರು ರಾಮಾರಾಧಕರ ಮೇಲೆ ಗುಂಡು ಹಾರಿಸಿದ್ದರು’ ಎಂದು ವಾಗ್ದಾಳಿ ನಡೆಸಿದರು,‘ಬಾಬರನ ಸಮಾಧಿ ಬಳಿ ಹೋಗಿ ಪ್ರಾರ್ಥಿಸುವ ಇವರೆಲ್ಲ, ಬಾಲರಾಮ ಪ್ರತಿಷ್ಠಾಪನೆಯ ಆಹ್ವಾನವನ್ನು ತಿರಸ್ಕರಿಸಿದ್ದರು’ ಎಂದು ಹರಿಹಾಯ್ದಿಯ್ದರು.
ಅಯೋಧ್ಯೆ ದೀಪಗಳಿಗೆ ಏಕೆ ಖರ್ಚು ಮಾಡಬೇಕು?: ಅಖಿಲೇಶ್ ವಿವಾದ
ಲಖನೌ: ‘ಅಯೋಧ್ಯೆಯಲ್ಲಿ ದೀಪಾವಳಿಗೆ ಏಕೆ ದೀಪಗಳ ಮೇಲೆ ಹಣ ವ್ಯಯಿಸಬೇಕು. ಅದರ ಬದಲು ಕ್ರಿಸ್‌ಮಸ್ ಹಬ್ಬವನ್ನು ನೋಡಿ ಕಲಿತುಕೊಳ್ಳಿ’ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಖಿಲೇಶ್, ‘ಕ್ರಿಸ್ಮಸ್ ಹಬ್ಬವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಅಂದು ಪ್ರತಿ ನಗರಗಳ ಗಲ್ಲಿ ಗಲ್ಲಿಗಳನ್ನು ಝಗಮಗಿಸುವಂತೆ ಮಾಡುತ್ತಾರೆ. ಅದನ್ನು ನೋಡಿ ಕಲಿಯಬೇಕು. ಸುಮ್ಮನೇ ಅಯೋಧ್ಯೆಯಲ್ಲಿ ದೀಪಗಳ ಮೇಲೆ ಹಣ ವ್ಯಯಿಸಬಾರದು’ ಎಂದು ಹೇಳಿದ್ದಾರೆ.
ಇದರ ಬೆನ್ನಲ್ಲೇ ಬಿಜೆಪಿ ಮುಗಿಬಿದ್ದಿದ್ದು, ‘ಅಖಿಲೇಶ್ ಅವರಿಗೆ ತಮ್ಮ ಸ್ವಂತ ದೇಶದ ಆಚರಣೆಗಿಂತ ವಿದೇಶದ ಸಡಗರಗಳೇ ಹೆಚ್ಚು ಆನಂದ ಕೊಡುತ್ತದೆ. ಕ್ರಿಮಿನಲ್‌ಗಳೇ ತುಂಬಿದ್ದ ಇವರ ಸಂಪುಟದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?’ ಎಂದು ತಿರುಗೇಟು ನೀಡಿದೆ.