ಬಿಜೆಪಿ ವಕ್ತಾರನಂತಿದೆ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ವರ್ತನೆ : ಮಲ್ಲಿಕಾರ್ಜುನ ಖರ್ಗೆ ಕಿಡಿ

| Published : Dec 12 2024, 12:30 AM IST / Updated: Dec 12 2024, 04:56 AM IST

ಬಿಜೆಪಿ ವಕ್ತಾರನಂತಿದೆ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ವರ್ತನೆ : ಮಲ್ಲಿಕಾರ್ಜುನ ಖರ್ಗೆ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

‘ರಾಜ್ಯಸಭೆಯ ಸ್ಪೀಕರ್‌ ಆಗಿರುವ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಬಿಜೆಪಿ ಸರ್ಕಾರದ ವಕ್ತಾರರಂತೆ ಕೆಲಸ ಮಾಡುತ್ತಿದ್ದು, ಸದಾ ವಿಪಕ್ಷಗಳಿಗೆ ಉಪದೇಶ ಮಾಡುತ್ತಾ ಶಾಲೆಯ ಮುಖ್ಯೋಪಾಧ್ಯಾಯರಂತೆ ವರ್ತಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.

ನವದೆಹಲಿ: ‘ರಾಜ್ಯಸಭೆಯ ಸ್ಪೀಕರ್‌ ಆಗಿರುವ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಬಿಜೆಪಿ ಸರ್ಕಾರದ ವಕ್ತಾರರಂತೆ ಕೆಲಸ ಮಾಡುತ್ತಿದ್ದು, ಸದಾ ವಿಪಕ್ಷಗಳಿಗೆ ಉಪದೇಶ ಮಾಡುತ್ತಾ ಶಾಲೆಯ ಮುಖ್ಯೋಪಾಧ್ಯಾಯರಂತೆ ವರ್ತಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.

ಪ್ರತಿಪಕ್ಷಗಳು ಧನಕರ್‌ ವಿರುದ್ಧ ಅವಿಶ್ವಾಸ ನಿರ್ಣಯದ ನೋಟಿಸ್‌ ನೀಡಿರುವ ಬಗ್ಗೆ ದಿಲ್ಲಿಯ ಸಂವಿಧಾನ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಧನಕರ್‌ ವರ್ತನೆ ಅವರ ಹುದ್ದೆಗಿರುವ ಘನತೆಗೆ ವ್ಯತಿರಿಕ್ತವಾಗಿದೆ. ಪಕ್ಷಪಾತಿಯಂತೆ ವರ್ತಿಸುತ್ತಿರುವ ಅವರು ವಿಪಕ್ಷಗಳನ್ನು ಗುರಿಯಾಗಿಸಿಕೊಂಡು ಬಿಜೆಪಿಯನ್ನು ಹೊಗಳುತ್ತಾರೆ’ ಎಂದು ಆರೋಪಿಸಿದರು.

ಅವಿಶ್ವಾಸ ನಿರ್ಣಯದ ಬಗ್ಗೆ ಮಾತನಾಡಿದ ಖರ್ಗೆ, ‘1952ರಿಂದ ಈವರೆಗೆ ಯಾವುದೇ ಉಪರಾಷ್ಟ್ರಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆಗಿರಲಿಲ್ಲ. ಆದರೆ ಇಂದು ಆಗಿದೆ. ಇದು ವೈಯಕ್ತಿಕ ಅಥವಾ ರಾಜಕೀಯ ದ್ವೇಷದಿಂದ ತೆಗೆದುಕೊಂಡ ನಿರ್ಧಾರವಲ್ಲ. ಬದಲಿಗೆ ಅವರ ವರ್ತನೆಯಿಂದ ಬೇಸತ್ತು ಅವರನ್ನು ತೆಗೆದುಹಾಕುವಂತೆ ಮನವಿ ಮಾಡಿದ್ದೇವೆ’ ಎಂದು ಸ್ಪಷ್ಟನೆ ನೀಡಿದರು.

ಜಾಟರಿಗೆ ಅಮಮಾನ- ಬಿಜೆಪಿ ತಿರುಗೇಟು

ಅವಿಶ್ವಾಸ ನಿರ್ಣಯ ಮಂಡನೆಗೆ ಟ್ವೀಟರ್‌ನಲ್ಲಿ ಬಿಜೆಪಿ ಕಿಡಿಕಾರಿದೆ. ‘ಜಾರ್ಜ್ ಸೊರೊಸ್ ಜೊತೆ ಗಾಂಧಿ ಕುಟುಂಬದ ನಂಟು ಇದೆ. ಹೀಗಾಗಿ ಸಾರ್ವಜನಿಕರ ಗಮನವನ್ನು ಈ ವಿಷಯದಿಂದ ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಉಪರಾಷ್ಟ್ರಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದೆ. ಈ ಮೂಲಕ ಧನಕರ್‌ ಅವರನ್ನು ಮಾನಹಾನಿ ಮಾಡಲು ಮತ್ತು ಜಾಟ್ ಸಮುದಾಯವನ್ನು ಅವಮಾನಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ’ ಎಂದು ಕಿಡಿಕಾರಿದೆ.

ಅವಿಶ್ವಾಸ ನಿರ್ಣಯ, ಸೊರೋಸ್‌ ಗಲಾಟೆ: ರಾಜ್ಯಸಭೆ ಕಲಾಪ ಮತ್ತೆ ಮುಂದೂಡಿಕೆ

ನವದೆಹಲಿ: ಬುಧವಾರ ರಾಜ್ಯಸಭೆ ಕಲಾಪದ ವೇಳೆ ಉಪರಾಷ್ಟ್ರಪತಿ, ಸ್ಪೀಕರ್‌ ಜಗದೀಪ್‌ ಧನಕರ್‌ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯ ಹಾಗೂ ಸೊರೋಸ್‌ ವಿಷಯ ಮುನ್ನೆಲೆಗೆ ಬಂದಿದ್ದು, ಇದರಿಂದಾಗಿ ಕಲಾಪವನ್ನು ಮತ್ತೆ ದಿನದ ಮಟ್ಟಿಗೆ ಮುಂದೂಡಲಾಗಿದೆ.ಅಧಿವೇಶನ ಶುರುವಾಗುತ್ತಿದ್ದಂತೆ, ಧನಕರ್‌ ವಿರುದ್ಧ ಕಾಂಗ್ರೆಸ್‌ ಮಂಡಿಸಿರುವ ಅವಿಶ್ವಾಸ ನಿರ್ಣಯವನ್ನು ವಿರೋಧಿಸಿದ ಬಿಜೆಪಿ ನಾಯಕ ಜೆ.ಪಿ. ನಡ್ಡಾ, ‘ಅಮೆರಿಕದ ಉದ್ಯಮಿ ಸೊರೋಸ್‌ ಅವರೊಂದಿಗೆ ಸೇರಿ ದೇಶದಲ್ಲಿ ಅಸ್ಥಿರತೆ ಸೃಷ್ಟಿಸಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಸೊರೋಸ್‌ ಹಾಗೂ ಸೋನಿಯಾ ಗಾಂಧಿಯವರ ನಡುವಿನ ಸಂಬಂಧದ ಬಗ್ಗೆ ಜನ ಪ್ರಶ್ನಿಸುತ್ತಿದ್ದಾರೆ. ಈ ವಿಷಯದಿಂದ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್‌ ಸ್ಪೀಕರ್‌ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ. ಇದು ಖಂಡನೀಯ’ ಎಂದರು.

ಆ ವೇಳೆ ಉಂಟಾದ ಗದ್ದಲದಿಂದಾಗಿ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.

ತಮ್ಮ ‘ಇಂಡಿಯಾ’ ನಾಯಕತ್ವಕ್ಕೆ ಬೆಂಬಲ: ಮಮತಾ ಧನ್ಯವಾದ

ಕೋಲ್ಕತಾ: ಇಂಡಿಯಾ ಕೂಟದ ನಾಯಕತ್ವ ವಹಿಸಿಕೊಳ್ಳುವ ತಮ್ಮ ಇಚ್ಛೆಗೆ ಬೆಂಬಲ ವ್ಯಕ್ತಪಡಿಸಿದವರಿಗೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕೃತಜ್ಞತೆ ಸಲ್ಲಿಸಿದ್ದಾರೆ.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ನನಗೆ ತೋರಿದ ಗೌರವಕ್ಕಾಗಿ ನಾನು ಎಲ್ಲರಿಗೂ ಕೃತಜ್ಞಳಾಗಿದ್ದೇನೆ. ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಪ್ರತಿಯೊಬ್ಬರ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಅವರು ಚೆನ್ನಾಗಿರಲು ಮತ್ತು ಅವರ ಪಕ್ಷಗಳು ಚೆನ್ನಾಗಿ ನಡೆಯಬೇಕೆಂದು ನಾನು ಬಯಸುತ್ತೇನೆ. ಇಂಡಿಯಾ ಕೂಟ ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ನಾನು ಬಯಸುತ್ತೇನೆ’ ಎಂದರು.

ಮಮತಾ ನಾಯಕತ್ವಕ್ಕೆ ಎನ್‌ಸಿಪಿ ನಾಯಕರಾದ ಶರದ್‌ ಪವಾರ್‌, ಸುಪ್ರಿಯಾ ಸುಳೆ, ಆಪ್‌ ನೇತಾರ ಅರವಿಂದ ಕೇಜ್ರಿವಾಲ್ ಸೇರಿ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಡತದಿಂದ ಬಿಜೆಪಿಗರ ಹೇಳಿಕೆ ತೆಗೆಯಿರಿ: ರಾಹುಲ್ ಮನವಿ

ನವದೆಹಲಿ: ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಬುಧವಾರ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಭೇಟಿಯಾಗಿ ತಮ್ಮ ವಿರುದ್ಧ ಬಿಜೆಪಿ ಸಂಸದರು ನೀಡಿರುವ ಮಾನಹಾನಿಕರ ಹೇಳಿಕೆಗಳನ್ನು ಕಡತದಿಂದ ತೆಗೆದುಹಾಕುವಂತೆ ಮತ್ತು ಸುಗಮ ಕಲಾಪಕ್ಕೆ ಅ‍ವಕಾಶ ಮಾಡಿಕೊಡುವಂತೆ ಕೋರಿ ಮನವಿ ಸಲ್ಲಿಸಿದ್ದಾರೆ.ಇತ್ತೀಚೆಗೆ ಭಾರತ ವಿರೋಧಿ ಅಮೆರಿಕ ಉದ್ಯಮಿ ಜಾರ್ಜ್‌ ಸೊರೋಸ್‌ಗೂ ಗಾಂಧಿ ಕುಟುಂಬಕ್ಕೂ ನಂಟಿದೆ ಎಂದು ಬಿಜೆಪಿ ಸಂಸದರು ಆರೋಪಿಸಿ, ‘ರಾಹುಲ್‌ ದೇಶದ್ರೋಹಿ’ ಎಂಬ ಪದ ಬಳಸಿದ್ದರು.

ಈ ಸಂಬಂಧ ಬಿರ್ಲಾಗೆ ದೂರು ನೀಡಿದ ರಾಹುಲ್, ‘ಬಿಜೆಪಿ ಸಂಸದರು ತಮ್ಮ ವಿರುದ್ಧ ಆಧಾರಹಿತ ಆರೋಪ ಮಾಡುತ್ತಿದ್ದಾರೆ. ಈ ಮೂಲಕ ಅದಾನಿ ವಿಚಾರದಿಂದ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ಅವರು ಎಷ್ಟೇ ಆರೋಪಗಳನ್ನು ಮಾಡಲಿ ನಾವು ಮಾತ್ರ ಬಿಜೆಪಿ ಪ್ರಚೋದನೆಗಳಿಗೆ ಬಲಿಯಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.ಜತೆಗೆ ಡಿ.13ರಂದು ಲೋಕಸಭೆಯಲ್ಲಿ ಸಂವಿಧಾನದ ಕುರಿತು ಚರ್ಚೆ ನಡೆಯಬೇಕೆಂದು ತಾವು ಹಾಗೂ ಕಾಂಗ್ರೆಸ್‌ ಬಯಸುತ್ತಿದೆ ಎಂದ ಅವರು, ನಮ್ಮ ಜಬಾಬ್ದಾರಿ ಅಲ್ಲದಿದ್ದರೂ ಕಲಾಪವು ಸುಗಮವಾಗಿ ನಡೆಯಲು ಸಹಕಾರ ನೀಡುತ್ತೇವೆ. ಕಲಾಪ ನಡೆಯಬೇಕೆಂಬುದು ನಮ್ಮ ಬಯಕೆಯೂ ಆಗಿದೆ’ ಎಂದು ತಿಳಿಸಿದರು.

"ನಾನು ಸ್ಪೀಕರ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ನನ್ನ ವಿರುದ್ಧ ಬಿಜೆಪಿ ಸಂಸದರು ಮಾಡಿರುವ ಮಾನಹಾನಿಕರ ಹೇಳಿಕೆಗಳನ್ನು ಕಡತದಿಂದ ತೆಗೆದುಹಾಕುವಂತೆ ನಮ್ಮ ಪಕ್ಷ ಆಗ್ರಹಿಸುತ್ತಿದೆ ಎಂದು ತಿಳಿಸಿದ್ದೇನೆ. ಈ ಕುರಿತು ಪರಿಶೀಲನೆ ನಡೆಸುವುದಾಗಿ ಸ್ಪೀಕರ್‌ ಹೇಳಿದ್ದಾರೆ. ಅವರು ನನ್ನ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಲೇ ಇರಲಿ. ನಾವು ಮಾತ್ರ ಕಲಾಪ ಸುಗಮವಾಗಿ ನಡೆಯಲಿ ಎಂಬ ನಿರ್ಧಾರಕ್ಕೆ ಬಂದಿದ್ದೇವೆ'''''''' ಎಂದು ಸ್ಪೀಕರ್‌ ಭೇಟಿ ಬಳಿಕ ಮಾಧ್ಯಮಗಳಿಗೆ ತಿಳಿಸಿದರು.

ಗುಲಾಬಿ, ರಾಷ್ಟ್ರ ಧ್ವಜ ಹಿಡಿದು ಸಂಸತ್‌ಗೆ ಬಿಜೆಪಿಗರ ಸ್ವಾಗತಿಸಿದ ರಾಹುಲ್‌!

ನವದೆಹಲಿ: ಸಂಸತ್‌ ಅಧಿವೇಶನ ಆರಂಭವಾದ ದಿನದಿಂದಲೂ ಅದಾನಿ ಹಗರಣದ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ಇಂಡಿಯಾ ಕೂಟ ಬುಧವಾರ ವಿಭಿನ್ನವಾಗಿ ಪ್ರತಿಭಟಿಸಿದೆ. ಒಂದು ಕೈಯಲ್ಲಿ ತ್ರಿವರ್ಣ ಧ್ವಜ ಮತ್ತು ಮತ್ತೊಂದು ಕೈಯಲ್ಲಿ ಕೆಂಪು ಗುಲಾಬಿ ಹಿಡಿದು ಬಿಜೆಪಿ ಸಂಸದರನ್ನು ಸಂಸತ್‌ಗೆ ಸ್ವಾಗತಿಸಿದೆ.

 ಅಲ್ಲದೇ ಸದನವನ್ನು ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದೆ.ಕಾಂಗ್ರೆಸ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಇಂಡಿಯಾ ಕೂಟದ ಸಂಸದರು ಭಾಗಿ ಸಂಸತ್‌ನ ಮಕರ ದ್ವಾರದಲ್ಲಿ ನಿಂತು ಬಿಜೆಪಿ ಸದಸ್ಯರಿಗೆ ಗುಲಾಬಿ, ತ್ರಿವರ್ಣ ಧ್ವಜದ ಕಾರ್ಡ್‌ ನೀಡಿ ಸ್ವಾಗತಿಸಿದರು. ಈ ವೇಳೆ, ಸದನಕ್ಕೆ ಆಗಮಿಸುತ್ತಿದ್ದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರಿಗೂ ರಾಹುಲ್ ಗಾಂಧಿ ರಾಷ್ಟ್ರ ಧ್ವಜ, ಕೆಂಗುಲಾಬಿ ನೀಡಿ ಸ್ವಾಗತಿಸಿದ ಪ್ರಸಂಗವೂ ನಡೆಯಿತು. ‘ದೇಶವನ್ನು ಮಾರಲು ಬಿಡಬೇಡಿ’ ಎಂಬ ಘೋಷಣಾ ಫಲಕಗಳನ್ನು ಹಲವು ಸಂಸದರು ಹಿಡಿದಿದ್ದರು.