ಮಹಾರಾಷ್ಟ್ರದಲ್ಲಿ ಬಿಜೆಪಿ ಗೆಲ್ಲಿಸಲು 60 ಸಾವಿರ ‘ಸಜಗ್‌ ರಹೋ’ ಸಭೆ ನಡೆಸಿದ್ದ ಆರ್‌ಎಸ್‌ಎಸ್‌!

| Published : Nov 25 2024, 01:06 AM IST / Updated: Nov 25 2024, 04:29 AM IST

ಸಾರಾಂಶ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ಯ ಅಭೂತಪೂರ್ವ ಗೆಲುವಿಗೆ ರಾಷ್ಟ್ರೀಯ ಸ್ವಯಂ ಸೇವಕ (ಆರ್‌ಎಸ್‌ಎಸ್‌) ಸಂಘದ ಕೊಡುಗೆಯೂ ದೊಡ್ಡದಿದೆ ಎಂಬ ವಿಶ್ಲೇಷಣೆಗಳು ಇವೆ.

 ನಾಗಪುರ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ಯ ಅಭೂತಪೂರ್ವ ಗೆಲುವಿಗೆ ರಾಷ್ಟ್ರೀಯ ಸ್ವಯಂ ಸೇವಕ (ಆರ್‌ಎಸ್‌ಎಸ್‌) ಸಂಘದ ಕೊಡುಗೆಯೂ ದೊಡ್ಡದಿದೆ ಎಂಬ ವಿಶ್ಲೇಷಣೆಗಳು ಇವೆ. ಹಾಗಿದ್ದರೆ, ಮಹಾರಾಷ್ಟ್ರದಲ್ಲಿ ಬಿಜೆಪಿ ಗೆಲ್ಲಿಸಲು ಆರ್‌ಎಸ್‌ಎಸ್‌ ಮಾಡಿದ್ದು ಏನು?

ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟರೆ, ಹಲವಾರು ಕಾರ್ಯತಂತ್ರಗಳು ಅನಾವರಣಗೊಳ್ಳುತ್ತವೆ. ಲೋಕಸಭೆ ಚುನಾವಣೆ ವೇಳೆ ಬಿಜೆಪಿ-ಆರ್‌ಎಸ್‌ಎಸ್‌ ನಡುವೆ ಅಂತರ ಕಾಣಿಸಿಕೊಂಡು, ಅದು ಫಲಿತಾಂಶದಲ್ಲಿ ಗೋಚರವಾಗಿತ್ತು. ಬಳಿಕ ಎರಡೂ ಸಂಸ್ಥೆಗಳು ಒಂದಾಗಿದ್ದವು. ಹೀಗಾಗಿ ಬಿಜೆಪಿಯನ್ನು ಗೆಲ್ಲಿಸಲೇಬೇಕು ಎಂದು ಹಟಕ್ಕೆ ಬಿದ್ದ ಆರ್‌ಎಸ್‌ಎಸ್‌ ತನ್ನ ಕಾರ್ಯಕರ್ತರನ್ನು ಜಮಾವಣೆ ಮಾಡಿ ಮತದಾರರ ಜತೆ 60 ಸಾವಿರ ಸಭೆಗಳನ್ನು ನಡೆಸಿತ್ತು. ಪ್ರತಿಪಕ್ಷಗಳ ಅಪಪ್ರಚಾರವನ್ನು ಮಣಿಸಲು ಹಾಗೂ ಹಿಂದು ಮತಗಳನ್ನು ಒಗ್ಗೂಡಿಸಲು ‘ಸಜಗ್‌ ರಹೋ’ (ಎಚ್ಚರವಾಗಿರಿ) ಎಂಬ ಅಭಿಯಾನವನ್ನೇ ನಡೆಸಿತು.

ಪ್ರತಿಪಕ್ಷಗಳು ಮಾಡುತ್ತಿರುವ ಅಪಪ್ರಚಾರವನ್ನು ತಡೆಯುವಂತೆ ಆರ್‌ಎಸ್‌ಎಸ್‌ ನೆರವನ್ನು ಬಿಜೆಪಿ ಕೋರಿತ್ತು ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರೇ ಚುನಾವಣಾ ಪೂರ್ವದಲ್ಲಿ ತಿಳಿಸಿದ್ದುಂಟು.

ಪ್ರತಿಪಕ್ಷಗಳ ಕೂಟ ಮಹಾ ಅಘಾಡಿ ಜಾತಿ ಹಾಗೂ ಸಮುದಾಯಗಳ ಆಧಾರದಲ್ಲಿ ಹಿಂದು ಮತಗಳನ್ನು ವಿಭಜಿಸಲು ಯತ್ನಿಸಿತ್ತು. ಇದನ್ನು ಆರ್‌ಎಸ್‌ಎಸ್‌ ಸೂಕ್ತವಾಗಿ ತಪ್ಪಿಸುವ ಮೂಲಕ ಹಿಂದು ಮತಗಳನ್ನು ಕ್ರೋಢೀಕರಿಸಿತು. ಜತೆಗೆ ವಿಶ್ವ ಹಿಂದು ಪರಿಷತ್‌ನಂತಹ ಸಂಘಟನೆಗಳು ಜನರು ಮತದಾನದಿಂದ ದೂರ ಉಳಿಯದಂತೆ ಹಾಗೂ ಹಿಂದುಗಳ ಹಿತ ಕಾಯುವಂತಹ ಪಕ್ಷಗಳಿಗೆ ಬೆಂಬಲ ನೀಡುವಂತೆ ಮನವಿ ಮಾಡಿದವು. ಇದಕ್ಕಾಗಿ ಬೀದಿ ನಾಟಕ, ಕರಪತ್ರ ಹಂಚಿಕೆಯಂತಹ ಕಾರ್ಯಕ್ರಮಗಳನ್ನು ನಡೆಸಿದವು ಎಂದು ವರದಿಗಳು ತಿಳಿಸಿವೆ.

- ಲೋಕಸಭೆ ಚುನಾವಣೆಯಲ್ಲಿ ವಿರಸದಿಂದ ನಷ್ಟ । ಈ ಸಲ ಮುನ್ನೆಚ್ಚರಿಕೆ

- ಹಿಂದುಗಳ ಮತ ಒಗ್ಗೂಡಿಸಲು ಕಾರ್ಯತಂತ್ರ । ವಿಎಚ್‌ಪಿ ಕೂಡ ಸಾಥ್‌

- ಕಳೆದ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರ ಬಿಜಪಿ, ಆರೆಸ್ಸೆಸ್‌ ನಡುವೆ ಭಿನ್ನಮತ

- ಪರಿಣಾಮ, ರಾಜ್ಯದಲ್ಲಿ ಅತಿಹೆಚ್ಚು ಸೀಟು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್‌

- ವಿಧಾನಸಭೆ ಚುನಾವಣೆಯಲ್ಲಿ ಹಾಗಾಗಬಾರದು ಎಂದು ಆರೆಸ್ಸೆಸ್‌ ನೆರವು ಕೋರಿದ್ದ ಬಿಜೆಪಿ

- ಹಿಂದುಗಳ ಮತ ಕ್ರೋಢೀಕರಿಸಲು ತಳಮಟ್ಟದಲ್ಲಿ ಆರೆಸ್ಸೆಸ್‌ ‘ಸಜಗ್‌ ರಹೋ’ ಅಭಿಯಾನ

- ಮತದಾನದಿಂದ ದೂರ ಉಳಿಯದಂತೆ ಬೀದಿ ನಾಟಕ, ಕರಪತ್ರ ಹಂಚಿಕೆ ಮೂಲಕ ಪ್ರಚಾರ