ಮುಂಬೈನಲ್ಲಿ ನೆಲೆಸಲು ಮರಾಠಿ ಕಡ್ಡಾಯವಲ್ಲ : ಆರೆಸ್ಸೆಸ್‌ ಹಿರಿಯ ಸುರೇಶ್‌ ಭಯ್ಯಾಜಿ ಜೋಶಿ ವಿವಾದ

| N/A | Published : Mar 07 2025, 12:46 AM IST / Updated: Mar 07 2025, 07:17 AM IST

ಸಾರಾಂಶ

ತಮಿಳ‍ುನಾಡು, ಕರ್ನಾಟಕದಲ್ಲಿ ಭಾಷೆ ವಿವಾದ ಭುಗಿಲೆದ್ದಿರುವ ಹೊತ್ತಿನಲ್ಲೇ, ಮುಂಬೈನಲ್ಲಿ ಬದುಕಲು ಮರಾಠಿ ಭಾಷೆ ಗೊತ್ತಿರುವುದು ಅನಿವಾರ್ಯವಲ್ಲ ಎಂದು ಆರೆಸ್ಸೆಸ್‌ ಹಿರಿಯ ನಾಯಕ ಸುರೇಶ್‌ ಭಯ್ಯಾಜಿ ಜೋಶಿ ಹೇಳಿಕೆ ನೀಡಿದ್ದಾರೆ.

ಮುಂಬೈ: ತಮಿಳ‍ುನಾಡು, ಕರ್ನಾಟಕದಲ್ಲಿ ಭಾಷೆ ವಿವಾದ ಭುಗಿಲೆದ್ದಿರುವ ಹೊತ್ತಿನಲ್ಲೇ, ಮುಂಬೈನಲ್ಲಿ ಬದುಕಲು ಮರಾಠಿ ಭಾಷೆ ಗೊತ್ತಿರುವುದು ಅನಿವಾರ್ಯವಲ್ಲ ಎಂದು ಆರೆಸ್ಸೆಸ್‌ ಹಿರಿಯ ನಾಯಕ ಸುರೇಶ್‌ ಭಯ್ಯಾಜಿ ಜೋಶಿ ಹೇಳಿಕೆ ನೀಡಿದ್ದಾರೆ.   

ಅವರ ಈ ಹೇಳಿಕೆಗೆ ವಿಪಕ್ಷಗಳಾದ ಕಾಂಗ್ರೆಸ್‌, ಶಿವಸೇನೆ (ಉದ್ಧವ್‌ ಬಣ), ಎನ್‌ಸಿಪಿ (ಪವಾರ್‌ ಬಣ) ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೀದಿಗಿಳಿದು ಹೋರಾಟ ನಡೆಸಿವೆ. ಜೊತೆಗೆ ಈ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿವೆ. ಅದರ ಬೆನ್ನಲ್ಲೇ ಈ ಕುರಿತು ವಿಧಾನಸಭೆಯಲ್ಲಿ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ‘ಮರಾಠಿಯು ಮುಂಬೈ ಮತ್ತು ಮಹಾರಾಷ್ಟ್ರದ ಭಾಷೆ. ಮಹಾರಾಷ್ಟ್ರದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಮರಾಠಿ ಕಲಿಯಬೇಕು ಮತ್ತು ಮಾತನಾಡಬೇಕು’ ಎಂದು ಹೇಳಿದ್ದಾರೆ.

ಮತ್ತೊಂದೆಡೆ ತಮ್ಮ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಭಯ್ಯಾಜಿ ಜೋಶಿ, ‘ಮರಾಠಿಯು ಮಹಾರಾಷ್ಟ್ರ, ಮುಂಬೈನ ಭಾಷೆ ಎಂಬುದರಲ್ಲಿ ಎರಡು ಮಾತಿಲ್ಲ. ಹೊರಗಿನಿಂದ ಬಂದ, ಬೇರೆ ಭಾಷೆ ಮಾತನಾಡುವ ಜನ ಕೂಡ ಮುಂಬೈನಲ್ಲಿ ಸಾಮರಸ್ಯದಿಂದಿದ್ದಾರೆ. ಅವರೂ ಮರಾಠಿ ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಆಗಿದ್ದೇನು?: ಘಾಟ್ಕೋಪರ್‌ನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಜೋಶಿ, ‘ಮುಂಬೈಗೆ ಒಂದು ಭಾಷೆ ಎಂಬುದಿಲ್ಲ. ಮುಂಬೈನ ಒಂದೊಂದು ಭಾಗ ಒಂದೊಂದು ಭಾಷೆಯನ್ನು ಮಾತನಾಡುತ್ತದೆ. ಘಾಟ್ಕೋಪರ್‌ ಭಾಗದ ಭಾಷೆ ಗುಜರಾತಿಯಾಗಿದೆ. ಮುಂಬೈನಲ್ಲಿ ನೆಲೆಸಿದ್ದರೆ ಮರಾಠಿ ಕಲಿಯುವುದು ಕಡ್ಡಾಯವಲ್ಲ’ ಎಂದು ಹೇಳಿದ್ದರು.

ಜೋಶಿ ಈ ಹೇಳಿಕೆಗೆ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ, ಕಾಂಗ್ರೆಸ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಜೊತೆಗೆ ಇಂಥ ಹೇಳಿಕೆ ನೀಡಿದ ಭಯ್ಯಾಜಿ ಜೋಶಿ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಬೇಕು ಎಂದು ಉದ್ಧವ್ ಠಾಕ್ರೆ ಆಗ್ರಹಿಸಿದ್ದರು. ಅಲ್ಲದೆ ಕರ್ನಾಟಕ, ತಮಿಳುನಾಡು, ಗುಜರಾತ್‌ಗೆ ಹೋಗಿ ಇಂಥ ಹೇಳಿಕೆ ನೀಡಿ ಅವರು ಸುರಕ್ಷಿತವಾಗಿ ಮರಳಿ ಬರಲು ಸಾಧ್ಯವೇ? ಎಂದು ಪ್ರಶ್ನಿಸಿದ್ದರು.

ಜೊತೆಗೆ ಭಯ್ಯಾಜಿ ಜೋಶಿ ಬೆಂಗಳೂರು, ಕೋಲ್ಕತಾ, ಚೆನ್ನೈಗೆ ಹೋಗಿ ಈ ರೀತಿ ಮಾತನಾಡಲು ಸಾಧ್ಯವೇ? ಇಂಥ ಹೇಳಿಕೆ ದೇಶದ್ರೋಹಕ್ಕೆ ಸಮ ಎಂದು ಪಕ್ಷದ ರಾಜ್ಯಸಭಾ ಸಂಸದ ಸಂಜಯ್‌ ರಾವುತ್‌ ಕಿಡಿಕಾರಿದ್ದರು.