ಆರೆಸ್ಸೆಸ್‌ ಈ ಹಿಂದೆ ಮೀಸಲು ವಿರೋಧಿಸಿತ್ತು: ರಾಹುಲ್

| Published : Apr 29 2024, 01:39 AM IST / Updated: Apr 29 2024, 04:59 AM IST

ಸಾರಾಂಶ

‘ಆರ್‌ಎಸ್‌ಎಸ್ ಈಗ ತಾನು ಮೀಸಲಾತಿಯ ವಿರುದ್ಧ ಅಲ್ಲ ಎಂದು ಹೇಳುತ್ತಿದ್ದರೂ, ಅದರ ನಾಯಕರು ಈ ಹಿಂದೆ ಮೀಸಲು ವಿರೋಧಿಸುವ ಬಗ್ಗೆ ಮಾತನಾಡಿದ್ದರು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.

 ದಮನ್‌ :  ‘ಆರ್‌ಎಸ್‌ಎಸ್ ಈಗ ತಾನು ಮೀಸಲಾತಿಯ ವಿರುದ್ಧ ಅಲ್ಲ ಎಂದು ಹೇಳುತ್ತಿದ್ದರೂ, ಅದರ ನಾಯಕರು ಈ ಹಿಂದೆ ಮೀಸಲು ವಿರೋಧಿಸುವ ಬಗ್ಗೆ ಮಾತನಾಡಿದ್ದರು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.

ಕೇಂದ್ರಾಡಳಿತ ಪ್ರದೇಶವಾದ ದಮನ್, ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿಯಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಆರ್‌ಎಸ್‌ಎಸ್ ಮತ್ತು ಬಿಜೆಪಿ ತಮ್ಮ ನಾಯಕರನ್ನು ದೇಶದ ‘ರಾಜ’ರನ್ನಾಗಿ (ಏಕಚಕ್ರಾಧಿಪತ್ಯ) ಮಾಡಲು ಸಂವಿಧಾನ ಮತ್ತು ವಿವಿಧ ಸಂಸ್ಥೆಗಳನ್ನು ನಾಶಮಾಡಲು ಪ್ರಯತ್ನಿಸುತ್ತಿವೆ’ ಎಂದು ಆರೋಪಿಸಿದರು.

ಗಮನಾರ್ಹವಾಗಿ, ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇದೇ ದಿನ ಹೈದರಾಬಾದ್‌ನಲ್ಲಿ ಮಾತನಾಡಿ, ‘ಸಂಘಟನೆಯು ಸಂವಿಧಾನದ ಪ್ರಕಾರ ಮೀಸಲಾತಿಯನ್ನು ಯಾವಾಗಲೂ ಬೆಂಬಲಿಸುತ್ತದೆ. ಎಂದೂ ಅದನ್ನು ವಿರೋಧಿಸಿರಲಿಲ್ಲ’ ಎಂದಿದ್ದರು.

ಇದಕ್ಕೆ ತಿರುಗೇಟು ನೀಡಿದ ರಾಹುಲ್‌, ‘ಇಂದು ಆರೆಸ್ಸೆಸ್ ಇಂದು ಮೀಸಲಾತಿಗೆ ವಿರುದ್ಧವಾಗಿಲ್ಲ ಎಂದು ಹೇಳುತ್ತಿದೆ. ಆದರೆ ಈ ಮೊದಲು ಅವರು ಮೀಸಲಾತಿಯನ್ನು ವಿರೋಧಿಸುತ್ತೇವೆ ಎಂದು ಹೇಳಿದ್ದರು. ತಳಹದಿಯ ಮಟ್ಟದಲ್ಲಿ, ನಮ್ಮ ಹಾಗೂ ಆರೆಸ್ಸೆಸ್‌ ಸಿದ್ಧಾಂತಗಳ ನಡುವಿನ ವ್ಯತ್ಯಾಸವೆಂದರೆ ನಾವು ಸಂವಿಧಾನವನ್ನು ಮತ್ತು ಅದು ದೇಶಕ್ಕೆ ನೀಡಿರುವ ಎಲ್ಲವನ್ನೂ ರಕ್ಷಿಸುತ್ತಿದ್ದೇವೆ. ಮತ್ತೊಂದೆಡೆ, ಆರೆಸ್ಸೆಸ್ ಮತ್ತು ಬಿಜೆಪಿಯ ಗುರಿ ಸಂವಿಧಾನವನ್ನು ಹೇಗಾದರೂ ನಾಶಪಡಿಸುವುದು’ ಎಂದು ಟೀಕಿಸಿದರು.

‘ಸಂವಿಧಾನವು ದೇಶದ ಅಡಿಪಾಯವಾಗಿ ಕಾರ್ಯನಿರ್ವಹಿಸಿದೆ. ಅದರ ಬೀಜಗಳಿಂದ ಇಂದು ಸಾಂವಿಧಾನಿಕ ಸಂಸ್ಥೆಗಳು ಬೆಳೆದು ನಿಂತಿವೆ. ಆದರೆ ಅವರು (ಬಿಜೆಪಿ-ಆರೆಸ್ಸೆಸ್‌) ಸಂವಿಧಾನವನ್ನು, ಪ್ರಜಾಪ್ರಭುತ್ವವನ್ನು ಮತ್ತು ವಿವಿಧ ಸಂಸ್ಥೆಗಳನ್ನು ನಾಶಮಾಡಲು ಬಯಸುತ್ತಾರೆ ಮತ್ತು ತಮ್ಮ ನಾಯಕರನ್ನು ರಾಜರನ್ನಾಗಿ ಮಾಡಲು ಬಯಸುತ್ತಾರೆ’ ಎಂದು ಕಿಡಿಕಾರಿದರು.