ಸಾರಾಂಶ
ನವದೆಹಲಿ
ಕಳೆದ ವರ್ಷ ಚೆನ್ನೈ ಸಮೀಪದ ಕವರೈಪಟ್ಟೈ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ್ದ ಮೈಸೂರು-ದರ್ಭಂಗಾ ಬಾಗ್ಮತಿ ಎಕ್ಸ್‌ಪ್ರೆಸ್ ರೈಲು ದುರಂತ ಅಪಘಾತವಲ್ಲ. ಅದೊಂದು ಉದ್ದೇಶಿಸಿ ದುಷ್ಕೃತ್ಯ ಎಂದು ಘಟನೆ ಕುರಿತು ತನಿಖೆ ನಡೆಸಿದ್ದ ರೈಲ್ವೆ ಸುರಕ್ಷತಾ ಆಯುಕ್ತರು ತನಿಖಾ ವರದಿಯಲ್ಲಿ ಖಚಿತಪಡಿಸಿದ್ದಾರೆ. ಅಲ್ಲದೆ, ‘ರೈಲ್ವೆ ಇಲಾಖೆಯ ಪ್ರಮುಖ ಕೆಲಸಕ್ಕೆ ಗುತ್ತಿಗೆ ನೌಕರರ ಬೇಡ’ ಎಂದು ಶಿಫಾರಸು ಮಾಡಿದ್ದಾರೆ.
ಹಳಿಯ ಇಂಟಲ್‌ಲಾಕ್ ವ್ಯವಸ್ಥೆಯನ್ನು ಕಿಡಿಗೇಡಿಗಳು ಕಿತ್ತಿದ್ದ ಹಿನ್ನೆಲೆಯಲ್ಲಿ ಅ.11, 2024ರಲ್ಲಿ ಮೈಸೂರು-ದರ್ಭಂಗಾ ಬಾಗ್ಮತಿ ಎಕ್ಸ್‌ಪ್ರೆಸ್ ರೈಲು ನಿಂತಿದ್ದ ಮುಖ್ಯ ಹಳಿಬಿಟ್ಟು ಪಕ್ಕದ ಹಳಿಯಲ್ಲಿ ನಿಂತಿದ್ದ ರೈಲಿಗೆ ಡಿಕ್ಕಿಹೊಡೆದಿತ್ತು. ದುರಂತದಲ್ಲಿ 13 ಬೋಗಿಗಳು ಹಳಿತಪ್ಪಿ, 19 ಮಂದಿ ಗಂಭೀರ ಗಾಯಗೊಂಡಿದ್ದರು.
‘ಈ ಅಪಘಾತ ಸ್ವಯಂಚಾಲಿತ ಅಥವಾ ಯಾವುದೇ ಸಾಧನದ ದಿಢೀರ್ ವೈಫಲ್ಯದಿಂದ ಆಗಿಲ್ಲ. ಬದಲಾಗಿ ರೈಲು ಹಳಿಯ ಇಂಟರ್‌ಲಾಕ್ ಕಿತ್ತ ಹಿನ್ನೆಲೆಯಲ್ಲಿ ಸಂಭವಿಸಿದೆ. ಇದೇ ಕಾರಣಕ್ಕೆ ಈ ರೈಲು ಅಪಘಾತವನ್ನು ವಿಧ್ವಂಸಕ ಕೃತ್ಯದ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ’ ಎಂದು ಎಂದು ದಕ್ಷಿಣ ರೈಲ್ವೆ ವಲಯದ ರೈಲ್ವೆ ಸುರಕ್ಷತಾ ವಿಭಾಗದ ಆಯುಕ್ತ ಎ.ಎಂ.ಚೌಧರಿ ತಮ್ಮ ವರದಿಯಲ್ಲಿ ಹೇಳಿದ್ದಾರೆ.
ದುಷ್ಕೃತ್ಯದ ಸಂಚು:‘ರೈಲ್ವೆ ಇಲಾಖೆಯ ಒಳಗಿನವರಿಂದಲೇ ಈ ದುಷ್ಕೃತ್ಯ ನಡೆದಿರುವ ಶಂಕೆ ಇದ್ದು, ರೈಲ್ವೆ ಇಲಾಖೆಯ ಗುಪ್ತಚರ ವಿಭಾಗವು ಈ ಕುರಿತು ಮಾಹಿತಿ ಕಲೆಹಾಕಬೇಕು’ ಎಂದು ಸಿಆರ್‌ಎಸ್ ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ ಸುರಕ್ಷತಾ ಆಯುಕ್ತರು ತಿಳಿಸಿದ್ದಾರೆ.
ಅಲ್ಲದೆ, ‘ರೈಲ್ವೆಯ ಮಹತ್ವದ ಸುರಕ್ಷತಾ ಕೆಲಸಗಳಿಗೆ ಗುತ್ತಿಗೆ ಆಧಾರದಲ್ಲಿ ಉದ್ಯೋಗಿಗಳ ನೇಮಕ ಮಾಡಿಕೊಳ್ಳಬಾರದು. ರೈಲ್ವೆಯ ಸುರಕ್ಷತಾ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಈ ಕುರಿತ ಕೌಶಲ್ಯ ನೀಡುವ ಕೆಲಸ ಜರೂರಾಗಿ ಆಗಬೇಕು’ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.
ಪ್ರಶಸ್ತಿಗೆ ಶಿಫಾರಸು:
‘ಘಟನೆ ವೇಳೆ ಬಾಗ್ಮತಿ ಎಕ್ಸ್‌ಪ್ರೆಸ್ ರೈಲಿನ ಲೋಕೋಪೈಲಟ್ ಜಿ.ಸುಬ್ರಮಣಿ ಅಸಾಧಾರಣ ಸಮಯ ಪ್ರಜ್ಞೆ ಪ್ರದರ್ಶಿಸಿ ತಕ್ಷಣ ತುರ್ತು ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ದುರಂತದ ತೀವ್ರತೆ ಕಡಿಮೆಯಾಯಿತು. ಹೀಗಾಗಿ ಚೈನ್ನೈ ಡಿವಿಜನ್‌ನ ಈ ಲೋಕೋಪೈಲಟ್ ಹೆಸರನ್ನು ಅತಿ ವಿಶಿಷ್ಟ ರೈಲ್ ಸೇವಾ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.