ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಗ್ರಹಿಕೆ ಬದಲು : ನಟ ಸೈಫ್‌ ಅಲಿ ಖಾನ್ ಮೆಚ್ಚುಗೆ

| Published : Sep 28 2024, 01:19 AM IST / Updated: Sep 28 2024, 05:18 AM IST

ಸಾರಾಂಶ

ಬಾಲಿವುಡ್ ನಟ ಸೈಫ್ ಅಲಿ ಖಾನ್ ರಾಹುಲ್ ಗಾಂಧಿಯವರ ಕೆಲಸವನ್ನು ಶ್ಲಾಘಿಸಿದ್ದಾರೆ, ಜನರ ಗ್ರಹಿಕೆಯನ್ನು ಬದಲಾಯಿಸಲು ಅವರು ಶ್ರಮಿಸಿದ್ದಾರೆ ಎಂದು ಹೇಳಿದ್ದಾರೆ.  

ಮುಂಬೈ: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಷ್ಟಪಟ್ಟು ಕೆಲಸ ಮಾಡುವ ಮೂಲಕ ಜನರಲ್ಲಿ ಅವರ ಬಗ್ಗೆ ಇರುವ ಗ್ರಹಿಕೆಯನ್ನು ಬದಲಾಯಿಸಿದ್ದಾರೆ’ ಎಂದು ಬಾಲಿವುಡ್‌ ನಟ ಸೈಫ್‌ ಅಲಿಖಾನ್ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಇಂಡಿಯಾ ಟುಡೇ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ನನ್ನ ಪ್ರಕಾರ ರಾಹುಲ್ ಗಾಂಧಿ ಈಗ ಏನು ಮಾಡಿದ್ದಾರೋ ಅದು ಬಹಳ ಪ್ರಭಾವಶಾಲಿಯಾಗಿದೆ. ಯಾಕೆಂದರೆ ಒಂದು ಸಮಯದಲ್ಲಿ ಜನರು ಅವರು ಹೇಳುತ್ತಿರುವ ಮಾತಿಗೆ ಮನ್ನಣೆ ನೀಡುತ್ತಿರಲಿಲ್ಲ ಮತ್ತು ಅವರು ಮಾಡುತ್ತಿರುವ ಕೆಲಸಗಳನ್ನು ಅಗೌರವಿಸುವ ಕಾಲವೊಂದಿತ್ತು. ಆದರೆ ಕಷ್ಟಪಟ್ಟುಕೆಲಸ ಮಾಡುವ ಮೂಲಕ ಆ ಭಾವನೆಯನ್ನು ಬದಲಿಸಿದ್ದಾರೆ’ ಎಂದು ಹೇಳಿದ್ದಾರೆ.

==

ಬಿಹಾರದಲ್ಲಿ 20ನೇ ಸೇತುವೆ ಕುಸಿತ: ಪಿಲ್ಲರ್‌ ಕುಸಿದು ಅವಘಡ

ಭಾಗಲ್ಪುರ: ಬಿಹಾರದಲ್ಲಿ ಸೇತುವೆ ಕುಸಿತದ ಪ್ರಕರಣಗಳು ಮುಂದುವರೆದಿದ್ದು, ಶುಕ್ರವಾರ ಭಾಗಲ್ಪುರ ಜಿಲ್ಲೆಯ ಸೇತುವೆಯೊಂದರ ಪಿಲ್ಲರ್‌ ಕುಸಿದು ಬಿದ್ದಿದೆ. ಇದರಿಂದ ಆ ಸೇತುವೆ ಮೇಲಿನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ ಸಾವು ನೋವು ಸಂಭವಿಸಿಲ್ಲ.ಇತ್ತೀಚೆಗೆ ಬಿಹಾರದಲ್ಲಿ ಕಳೆದ 2 ತಿಂಗಳಿನಿಂದ 15ಕ್ಕೂ ಹೆಚ್ಚು ಸೇತುವೆಗಳು ಕುಸಿದಿದ್ದವು. ಈ ತಿಂಗಳು ಮತ್ತೆ 5 ಕುಸಿದಿವೆ. ಇದರಿಂದ ಕುಸಿದ ಸೇತುವ ಸಂಖ್ಯೆ 20ಕ್ಕೇರಿದೆ.

ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾಕ್ನ ಎಂಬಲ್ಲಿ ಈ ಘಟನೆ ಸಂಭವಿಸಿದ್ದು, ಪಿರ್ಪೌತಿ-ಬಾಬುಪುರ ಪ್ರದೇಶವನ್ನು ಬಖರ್‌ಪುರ ರಸ್ತೆಯೊಂದಿಗೆ ಸಂಪರ್ಕಿಸುವ ರಸ್ತೆಯ ನಡುವಿನ ಸಣ್ಣ ಸೇತುವೆಯ ಪಿಲ್ಲರ್‌ ಕುಸಿದಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಸ್‌ ತಿಳಿಸಿದ್ದಾರೆ. ಘಟನೆ ಬಳಿಕ ಸೇತುವೆ ಮೇಲಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ತಾಂತ್ರಿಕ ತಜ್ಞರು ಹಾನಿಯನ್ನು ಸರಿಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

==

ಮಹಾಕಾಲ ದೇವಾಲಯದ ಗೋಡೆ ಕುಸಿತ, 2 ಸಾವು

ಭೋಪಾಲ್‌: ಭಾರೀ ಮಳೆಯಿಂದಾಗಿ ಉಜ್ಜಯಿನಿ ಮಹಾಕಾಲ ದೇವಾಯಲದ ಸುತ್ತಲಿನ ಗೋಡೆ ಕುಸಿದಿದ್ದು, 2 ಜನ ಸಾವನ್ನಪ್ಪಿ 4 ಜನ ಗಾಯಗೊಂಡಿದ್ದಾರೆ. ಇನ್ನೂ ಅನೇಕರು ಅವಶೇಷಗಳ ಅಡಿ ಸಿಲುಕಿರುವ ಶಂಕೆಯಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಘಟನೆ ಕುರಿತು ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್‌ ನಾಥ್‌ ಸಂತಾಪ ಸೂಚಿಸಿದ್ದು, ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

==

ಅಗ್ನಿವೀರರಿಗೆ ಮೀಸಲು; ಬ್ರಹ್ಮೋಸ್‌ ಮೊದಲ ಕಂಪನಿ

ನವದೆಹಲಿ: ಸೇನೆಯಲ್ಲಿ ನಾಲ್ಕು ವರ್ಷಗಳ ಅಲ್ಪಾವಧಿ ಸೇವೆ ಸಲ್ಲಿಸಿ ನಿವೃತ್ತರಾಗುವ ಅಗ್ನಿವೀರರಿಗೆ ಮೀಸಲು ನೀಡಲು ಭಾರತ- ರಷ್ಯಾ ಜಂಟಿ ಪಾಲುದಾರಿಕೆಯ ಕ್ಷಿಪಣಿ ಉತ್ಪಾದನಾ ಖಾಸಗಿ ಕಂಪನಿಯಾದ ಬ್ರಹ್ಮೋಸ್‌ ಮೀಸಲು ನೀಡಲು ನಿರ್ಧರಿಸಿದೆ. ಈ ಮೂಲಕ ಅಗ್ನಿವೀರರಿಗೆ ಮೀಸಲು ನೀಡಿದ ಭಾರತದ ಮೊದಲ ಕಂಪನಿಯಾಗಿ ಹೊರಹೊಮ್ಮಿದೆ.ಕಂಪನಿಯ ನಿರ್ಧಾರದ ಅನ್ವಯ ತಾಂತ್ರಿಕ ಕ್ಷೇತ್ರದ ಹುದ್ದೆಗಳ ಪೈಕಿ ಶೆ.15ರಷ್ಟು ಮತ್ತು ಆಡಳಿತ ಹಾಗೂ ಇತರೆ ವಿಭಾಗಗಳಲ್ಲಿ ಅಗ್ನಿವೀರರಿಗೆ ಶೇ.50ರಷ್ಟು ಮೀಸಲು ನೀಡಲಾಗುವುದು. ಇದಲ್ಲದೆ ತನ್ನ ಉದ್ಯಮ ಪಾಲುದಾರರಿಗೆ ಶೇ.15ರಷ್ಟು ಮೀಸಲು ನೀಡುವಂತೆ ಪ್ರೋತ್ಸಾಹ ನೀಡಲು ನಿರ್ಧರಿಸಿದೆ.

ಬ್ರಹ್ಮೋಸ್‌ ಕಂಪನಿ ವಿಶ್ವದಲ್ಲೇ ಅತ್ಯಂತ ವೇಗದ ಸೂಪರ್‌ಸಾನಿಕ್‌ ಕ್ಷಿಪಣಿಗಳನ್ನು ಉತ್ಪಾದಿಸಿ ವಿವಿಧ ದೇಶಗಳಿಗೆ ರಫ್ತು ಮಾಡುತ್ತದೆ.

==

ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್‌ ಸೋಂಕು ದೃಢ

ತಿರುವನಂತಪುರಂ: ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್‌ ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ರೋಗದ ಗುಣಲಕ್ಷಣ ಕಾಣಿಸಿಕೊಂಡವರು ಚಿಕಿತ್ಸೆಗೆ ಒಳಪಡಬೇಕೆಂದು ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ.

ದೇಶದಲ್ಲಿ ಎಂಪಾಕ್ಸ್‌ನ ಹೊಸ ತಳಿ 1ಬಿನ ಮೊದಲ ಪ್ರಕರಣ ಯುಎಇ ಇಂದ ಬಂದಿದ್ದ 38 ವರ್ಷದ ಮಲಪ್ಪುರಂ ನಿವಾಸಿಯಲ್ಲಿ ಪತ್ತೆಯಾಗಿತ್ತು. ಈಗ ಇನ್ನೊಂದು ಪ್ರಕರಣ ವರದಿಯಾಗಿದೆ.ಈ ಸಂಬಂಧ ಪರಿಸ್ಥಿತಿಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆ ನಡೆಸಿದ್ದು, ಸೊಂಕಿತನ ಸಂಪರ್ಕಕ್ಕೆ ಬಂದವರ ಪಟ್ಟಿ ತಯಾರಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೊಗ್ಯ ಸಚಿವೆ ವೀಣಾ ಜಾರ್ಜ್‌ ತಿಳಿಸಿದ್ದಾರೆ. ಜೊತೆಗೆ ವಿದೇಶದಿಂದ ಬಂದವರಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ಇಲಾಖೆಯನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.

ಎಲ್ಲಾ ಜಿಲ್ಲೆಗಳಲ್ಲೂ ಐಸೋಲೆಷನ್ ವ್ಯವಸ್ಥೆ ಮಾಡಲಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾದಲ್ಲಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.

==

ಚಿನ್ನದ ಬೆಲೆ ₹78,300ಕ್ಕೆ ಏರಿಕೆ: ಹೊಸ ದಾಖಲೆ

ನವದೆಹಲಿ: ಸತತ 3 ದಿನಗಳಿಂದಲೂ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನದ ದರ ಶುಕ್ರವಾರ 50 ರು. ಏರಿಕೆಯಾಗಿದೆ. ಇದರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 78,300 ರು.ಗೆ ತಲುಪಿ ಹೊಸ ದಾಖಲೆ ಸೃಷ್ಟಿಸಿದೆ. ಅದೇ ರೀತಿ ಚೆನ್ನೈನಲ್ಲಿ ಬೆಳ್ಳಿ ದರ ಕೇಜಿಗೆ 1000 ರು. ಏರಿಕೆಯಾಗಿ 1,02,000 ರು. (1.02 ಲಕ್ಷ ರು) ತಲುಪಿದೆ. ದಿಲ್ಲಿಯಲ್ಲಿ 500 ರು. ಏರಿದ ಬೆಳ್ಳಿ ದರ ಕೇಜಿಗೆ 94,500 ರು ನಷ್ಟಿದೆ.ಅದೇ ರೀತಿ ಬೆಂಗಳೂರು, ಚೆನ್ನೈ, ಮುಂಬೈ ಹಾಗೂ ಕೋಲ್ಕತಾದಲ್ಲಿ 24 ಕ್ಯಾರೆಟ್‌ ಚಿನ್ನದ ದರ ಪ್ರತಿ 10 ಗ್ರಾಂಗೆ 77,450 ರು. ನಷ್ಟಿದೆ. ಇನ್ನೂ ಬೆಳ್ಳಿ ದರ ಪ್ರತಿ ಕೇಜಿಗೆ ಮುಂಬೈ ಹಾಗೂ ಕೋಲ್ಕತಾದಲ್ಲಿ 96,000 ರು. ಹಾಗೂ ಬೆಂಗಳೂರಿನಲ್ಲಿ 90,000 ರು. ನಷ್ಟಿದೆ.

ಗುರುವಾರ ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 78,250 ರು. ಹಾಗೂ ಚೆನ್ನೈನಲ್ಲಿ ಬೆಳ್ಳಿ ದರ 1,01,000 ರು.ನಷ್ಟಿತ್ತು.