ಸಾರಾಂಶ
ತುಪ್ಪ ಕಲಬೆರಕೆ ವಿವಾದದ ಹೊರತಾಗಿಯೂ ತಿರುಪತಿ ಲಡ್ಡು ಮಾರಾಟದಲ್ಲಿ ಯಾವುದೇ ಇಳಿಕೆಯಾಗಿಲ್ಲ. ಭಕ್ತರು ಟಿಟಿಡಿಯ ಕೇಂದ್ರಗಳಿಂದ ಶ್ರದ್ಧಾಭಕ್ತಿಯಿಂದ ಲಡ್ಡುಗಳನ್ನು ಖರೀದಿಸುತ್ತಿದ್ದಾರೆ.
ತಿರುಮಲ: ಲಡ್ಡು ತಯಾರಿಗೆ ಬಳಸುವ ತುಪ್ಪ ಕಲಬೆರಕೆಯಾಗಿತ್ತು ಎಂಬ ವಿವಾದದ ಹೊರತಾಗಿಯೂ ತಿರುಪತಿ ಲಡ್ಡು ಮಾರಾಟದಲ್ಲಿ ಯಾವುದೇ ಇಳಿಕೆಯಾಗಿಲ್ಲ. ಭಕ್ತರು ಹಿಂದಿನಂತೆಯೇ ದೇಶದ ವಿವಿಧ ರಾಜ್ಯಗಳಲ್ಲಿರುವ ಟಿಟಿಡಿಯ ಕೆಂದ್ರಗಳಿಂದ ಶ್ರದ್ಧಾಭಕ್ತಿಯಿಂದ ಲಡ್ಡು ಖರೀದಿಸುತ್ತಿದ್ದಾರೆ ಎಂಬ ಅಂಕಿ ಅಂಶ ಲಭ್ಯವಾಗಿದೆ.
ಟಿಟಿಡಿ ವಿಶಾಖಪಟ್ಟಣದ ಋಷಿಕೊಂಡ ಬೆಟ್ಟ, ಗುಂಟೂರು ಜಿಲ್ಲೆಯ ವೆಂಕಟಪಾಲೆಂ, ವಿಜಯವಾಡ, ಹೈದರಾಬಾದ್, ಚೆನ್ನೈ, ಬೆಂಗಳೂರು, ದೆಹಲಿ, ಕುರುಕ್ಷೇತ್ರ, ಜಮ್ಮು ಮತ್ತು ಕಾಶ್ಮೀರ ಮೊದಲಾದ ಪ್ರದೇಶಗಳಲ್ಲಿ ಲಡ್ಡು ಮಾರಾಟ ಮಾಡುತ್ತದೆ.ಟಿಟಿಡಿ ಅಧಿಕಾರಿಗಳು ಈ ಬಗ್ಗೆ ಹೇಳಿಕೆ ನೀಡಿ, ನಿತ್ಯ ದೇಗುಲದಲ್ಲಿ ಸರದಿಯಲ್ಲಿ ನಿಲ್ಲುವ ಭಕ್ತರಿಗೆ ನೀಡುವ ಲಡ್ಡು ಜೊತೆಗೆ, ಸೆ.21ರ ಶನಿವಾರ ವೆಂಕಟಪಾಲೆಂಗೆ 3000, ವಿಶಾಖಪಟ್ಟಣಂಗೆ 4000, ವಿಜಯವಾಡಕ್ಕೆ 2000, ಚೆನ್ನೈಗೆ 10000, ಬೆಂಗಳೂರಿಗೆ 3000, ಹೈದ್ರಾಬಾದ್‌ಗೆ 8000 ಲಡ್ಡು ಪೂರೈಸಲಾಗಿದೆ ಎಂದಿದ್ದಾರೆ.
ವಿಶಾಖಪಟ್ಟಣ ಟಿಟಿಡಿ ಅಧಿಕಾರಿಯೊಬ್ಬರು ಮಾತನಾಡಿ, ‘ನಮಗೆ ಬಂದ ಎಲ್ಲ 4000 ಲಡ್ಡು ಶನಿವಾರ ಮಾರಾಟ ಆದವು’ ಎಂದಿದ್ದಾರೆ.ಇನ್ನು ಭಕ್ತರು ಮಾತನಾಡಿ ‘ಲಡ್ಡು ನಮಗೆ ಅಚ್ಚುಮೆಚ್ಚು. ಈಗ ಕರ್ನಾಟಕದ ಕೆಎಂಎಫ್ ಶುದ್ಧತುಪ್ಪ ಬಳಕೆ ಆಗುತ್ತಿದೆ. ಹೀಗಾಗಿ ನಮಗೆ ಇದರ ಖರೀದಿಗೆ ಹಿಂಜರಿಕೆ ಇಲ್ಲ’ ಎಂದರು.