ಸಾರಾಂಶ
ಸಂಭಲ್ (ಉ.ಪ್ರ.): ಸಂಭಲ್‌ನಲ್ಲಿ ಹಿಂಸಾಚಾರ ನಡೆದಿದ್ದ ಶಾಹಿ ಜಾಮಾ ಮಸೀದಿಯ ಸುತ್ತಮುತ್ತ ಸರ್ಕಾರ ಒತ್ತುವರಿ ತೆರವು ಕಾರ್ಯ ಆರಂಭಿಸಿದೆ. ಈ ವೇಳೆ 46 ವರ್ಷಗಳ ಹಿಂದೆ ಬಂದ್ ಆಗಿದ್ದ ಹಳೆಯ ಶಿವನ ದೇಗುಲವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.ಸ್ಥಳೀಯಾಡಳಿತವು ಅತಿಕ್ರಮಣ ವಿರೋಧಿ ಮತ್ತು ವಿದ್ಯುತ್ ಕಳ್ಳತನ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವಾಗ ದೇವಾಲಯ ಪತ್ತೆಯಾಗಿದೆ.
ಸಂಭಾಲ್‌ನ ಖಗ್ಗು ಸರೈ ಪ್ರದೇಶದಲ್ಲಿ ಶಿವ ದೇವಾಲಯ ಪತ್ತೆಯಾಗಿದ್ದು, ಮತ್ತೆ ದೇಗುಲದ ಬಾಗಿಲನ್ನು ತೆರೆಯಲಾಗಿದೆ. ಈ ದೇವಾಲಯ ಸದ್ಯ ಶಿಥಿಲಾವಸ್ಥೆಯಲ್ಲಿದೆ. 1978ರಲ್ಲಿ ಕೋಮುಗಲಭೆ ಉಂಟಾಗಿ ಹಿಂದೂಗಳು ಗುಳೇ ಹೋಗಿದ್ದರು. ಅಂದಿನಿಂದ ದೇವಾಲಯ ಮುಚ್ಚಿದ ಸ್ಥಿತಿಯಲ್ಲಿಯೇ ಇತ್ತು ಎನ್ನುವ ಮಾಹಿತಿ ದೊರಕಿದೆ.
ದಾದರ್‌ನಲ್ಲಿ ಧ್ವಂಸ ಆಗಬೇಕಿದ್ದ ಹನುಮಾನ್ ಮಂದಿರ ‘ರಕ್ಷಣೆ’
ಮುಂಬೈ: ಮುಂಬೈನ ದಾದರ್ ರೈಲು ನಿಲ್ದಾಣದ ಹೊರಗಿನ ಹನುಮಂತನ ದೇವಸ್ಥಾನವನ್ನು ಧ್ವಂಸ ಮಾಡಲು ಕೇಂದ್ರ ಸರ್ಕಾರ ನೋಟಿಸ್ ನೀಡಿದ್ದಕ್ಕೆ ಉದ್ದವ್ ಠಾಕ್ರೆ ಅವರು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದರ ಬೆನ್ನಲ್ಲೇ ದೇವಸ್ಥಾನ ಧ್ವಂಸ ಆದೇಶವನ್ನು ತಡೆ ಹಿಡಿದಿದ್ದೇವೆ ಎಂದು ಬಿಜೆಪಿ ಹೇಳಿದೆ.ಈ ಬಗ್ಗೆ ಬಿಜೆಪಿ ಶಾಸಕ ಮಂಗಳ್ ಪ್ರಭಾತ್ ಲೋಧಾ ಪ್ರತಿಕ್ರಿಯಿಸಿದ್ದು, ‘ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಲ್ಲಿ ಮಾತನಾಡಿದ್ದು, ದೇವಾಲಯದ ಧ್ವಂಸವನ್ನು ತಡೆಯಲಾಗಿದೆ. ದಾದರ್‌ನಲ್ಲಿರುವ ಹನುಮಾನ್ ಮಂದಿರವನ್ನು ರಕ್ಷಿಸಲಾಗುವುದು’ ಎಂದಿದ್ದಾರೆ.ಡಿ.4 ರಂದು ದೇವಾಲಯದ ಆಡಳಿತ ಮಂಡಳಿಗೆ, ಈ ದೇಗುಲವನ್ನು ಅತಿಕ್ರಮಣ ಮಾಡಲಾಗಿದೆ. ಇದರಿಂದ ರೈಲ್ವೆ ಪ್ರಯಾಣಿಕರಿಗೆ ತೊಡಕಾಗುತ್ತದೆ ಎಂದು ರೈಲ್ವೆ ನೋಟಿಸ್ ನೀಡಿ ವಾರದೊಳಗೆ ತೆಗೆದು ಹಾಕಲು ಸೂಚಿಸಿತ್ತು.
ಬಾಂಗ್ಲಾ ಹಿಂದೂ ದೇಗುಲ ಧ್ವಂಸ ಪ್ರಕರಣ: 4 ಬಂಧನ
ಢಾಕಾ: ಉತ್ತರ ಬಾಂಗ್ಲಾದೇಶದ ಸುನಮ್ಗಂಜ್ ಜಿಲ್ಲೆಯ ಲೋಕನಾಥ ದೇವಸ್ಥಾನ ಸೇರಿದಂತೆ ಹಿಂದೂ ಸಮುದಾಯಕ್ಕೆ ಸೇರಿದ ಮನೆಗೆ ಸೇರಿ ಆಸ್ತಿ ಧ್ವಂಸ ಪ್ರಕರಣದಲ್ಲಿ 4 ಜನರನ್ನು ಬಂಧಿಸಲಾಗಿದೆ.ಬಂಧಿತರನ್ನು ಅಲಿಂ ಹುಸೇನ್, ಸುಲ್ತಾನ್ ಅಹ್ಮದ್ ರಾಜು, ಇಮ್ರಾನ್ ಹುಸೇನ್, ಶಾಜಹಾನ್ ಹುಸೇನ್ ಎಂದು ಗುರುತಿಸಲಾಗಿದೆ. ಈವರೆಗೆ 150ರಿಂದ 170 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, 12 ಜನರ ಹೆಸರನ್ನು ಬಹಿರಂಗಪಡಿಸಲಾಗಿದೆ.
ಡಿ.3ರಂದು ಆಕಾಶ್ ದಾಸ್ ಎಂಬಾತ ಫೇಸ್‌ಬುಕ್‌ನಲ್ಲಿ ಮಾಡಿದ ಪೋಸ್ಟ್ ಒಂದರಿಂದಾಗಿ ಹಿಂಸೆ ಭುಗಿಲೆದ್ದಿತ್ತು. ಕೂಡಲೇ ಆತನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದರು ಹಾಗೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.