ಸಂದೇಶ್‌ಖಾಲಿಯಲ್ಲಿ ಮತ್ತೆ ಭುಗಿಲೆದ್ದ ಹಿಂಸೆ

| Published : Feb 23 2024, 01:49 AM IST / Updated: Feb 23 2024, 08:39 AM IST

ಸಾರಾಂಶ

ಲೈಂಗಿಕ ದಾಳಿಕೋರರ ವಿರುದ್ಧ ಬೀದಿಗಿಳಿದ ಸಂತ್ರಸ್ತರು, ಪ್ರಮುಖ ಆರೋಪಿ ಶಜಾಹನ್‌ ಸೋದರನ ಮನೆಗೆ ಬೆಂಕಿ ಹಚ್ಚಿದ್ದಾರೆ.

ಕೋಲ್ಕತಾ: ಟಿಎಂಸಿ ನಾಯಕರ ಭೂಕಬಳಿಕೆ ಮತ್ತು ಹಿಂದೂ ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಸುದ್ದಿಯಲ್ಲಿರುವ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಗುರುವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.

ಭೂಕಬಳಿಕೆ ಪ್ರಕರಣದ ಪ್ರಮುಖ ರೂವಾರಿ, ಟಿಎಂಸಿ ನಾಯಕ ಶಜಹಾನ್‌ ಮತ್ತು ಅತ್ಯಾಚಾರಿ ಟಿಎಂಸಿ ಕಾರ್ಯಕರ್ತರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸಾವಿರಾರು ಜನರು ಬೀದಿಗಿಳಿದು ಭಾರೀ ಹೋರಾಟ ನಡೆಸಿದ್ದಾರೆ. 

ಈ ವೇಳೆ ಶಜಹಾನ್‌ನ ಸೋದರ ಸಿರಾಜ್‌ಗೆ ಸೇರಿದ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಶಜಹಾನ್‌ ಮತ್ತು ಸಿರಾಜ್‌ ಸೇರಿ ನಮ್ಮ ಭೂಮಿ ಕಬಳಿಸಿದ್ದಾರೆ. 

ನಮ್ಮ ಮನೆಯ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಪ್ರಕರಣದಲ್ಲಿ ಸ್ಥಳೀಯರಿಗೆ ನೆರವಿನ ಭರವಸೆ ನೀಡಲು ಹೋಗಿದ್ದ 20 ಪರಂಗಣ ಜಿಲ್ಲೆಯ ಟಿಎಂಸಿ ನಾಯಕರು ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾಗಿದ್ದಾರೆ. 

ಘಟನೆ ನಡೆದು ಇಷ್ಟು ದಿನಗಳಾದರೂ ಶಹಜಾನ್‌ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಸಂದೇಶ್‌ಖಾಲಿ ಪರಿಸ್ಥಿತಿ ಕುರಿತು ಮಾತನಾಡಿದ ಸಂದೇಶ್‌ಖಾಲಿ ಟಿಎಂಸಿ ಶಾಸಕ ಸುಕುಮಾರ್ ಮಹ್ತೋ ‘ಹೌದು, ತಪ್ಪುಗಳನ್ನು ಮಾಡಲಾಗಿದೆ. 

ಆದಾಗ್ಯೂ, ಸಂದೇಶಖಾಲಿಯ ಜನರು ಮಮತಾ ಬ್ಯಾನರ್ಜಿಯಲ್ಲಿ ತಮ್ಮ ಸಂಪೂರ್ಣ ವಿಶ್ವಾಸವನ್ನು ಹೊಂದಿದ್ದಾರೆ. ಎಲ್ಲಾ ಕುಂದುಕೊರತೆಗಳನ್ನು ಸರಿಯಾಗಿ ಪರಿಹರಿಸಲಾಗುವುದು’ ಎಂದರು. 

ಈ ನಡುವೆ ಸಂದೇಶ್‌ಖಾಲಿ ಪ್ರವೇಶಿಸಲು ಅನುಮತಿ ಪಡೆದ ಬಳಿಕ ಇದೇ ಮೊದಲ ಬಾರಿಗೆ ಗ್ರಾಮಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್‌, ಶೀಘ್ರವೇ ಶಹಜಹಾನ್‌ರನ್ನು ಬಂಧಿಸಬೇಕೆಂದು ಆಗ್ರಹಿಸಿ ಕಾರ್ಯಕರ್ತರೊಂದಿಗೆ ಸಂದೇಶ್‌ಖಾಲಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.