ಕೋಲ್ಕತಾ ಆರ್‌ಜಿ ಕರ್‌ ಮೆಡಿಕಲ್ ಕಾಲೇಜಿನ ವೈದ್ಯೆ ರೇಪ್‌ : ಗಲ್ಲಿನಿಂದ ರಾಯ್‌ ಪಾರು

| Published : Jan 21 2025, 12:31 AM IST / Updated: Jan 21 2025, 04:56 AM IST

Sanjay Roy convicted

ಸಾರಾಂಶ

2024ರಲ್ಲಿ ದೇಶದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದ್ದ ಕೋಲ್ಕತಾದ ಆರ್‌ಜಿ ಕರ್‌ ಮೆಡಿಕಲ್ ಕಾಲೇಜಿನಲ್ಲಿ ವೈದ್ಯೆ ಮೇಲೆ ನಡೆದ ರೇಪ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ದೋಷಿ ಸಂಜಯ್‌ ರಾಯ್‌ ಗಲ್ಲು ಶಿಕ್ಷೆಯಿಂದ ಪಾರಾಗಿದ್ದಾನೆ. 

 ಕೋಲ್ಕತಾ : 2024ರಲ್ಲಿ ದೇಶದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದ್ದ ಕೋಲ್ಕತಾದ ಆರ್‌ಜಿ ಕರ್‌ ಮೆಡಿಕಲ್ ಕಾಲೇಜಿನಲ್ಲಿ ವೈದ್ಯೆ ಮೇಲೆ ನಡೆದ ರೇಪ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ದೋಷಿ ಸಂಜಯ್‌ ರಾಯ್‌ ಗಲ್ಲು ಶಿಕ್ಷೆಯಿಂದ ಪಾರಾಗಿದ್ದಾನೆ. ಆತನಿಗೆ ಕೋಲ್ಕತಾ ಕೋರ್ಟ್‌ ಜೀವನಪೂರ್ತಿ ಜೈಲಲ್ಲಿರುವ ಶಿಕ್ಷೆ ವಿಧಿಸಿದೆ.

’ಸಿಬಿಐ ಇದು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದತು. ಆದರೆ ದೋಷಿ ಪರ ವಕೀಲರು ಅಲ್ಲ ಎಂದರು. ನಾನು ಕೂಡ ಇದು ಅಪರೂಪದ ಅಪರೂಪದ ಪ್ರಕರಣವಲ್ಲ ಎಂದು ನಾನು ಭಾವಿಸುತ್ತೇನೆ. ಅದಕ್ಕಾಗಿಯೇ ನೀನು (ರಾಯ್‌) ಸಾಯುವ ತನಕ ಜೈಲಲ್ಲೇ ಇರಬೇಕು ಎಂಬ ಆದೇಶ ನೀಡುತ್ತಿದ್ದೇನೆ’ ಎಂದು ಸಿಯಾಲ್‌ದಹ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಅನಿರ್ಬನ್‌ ದಾಸ್‌ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದರು.

ಅಲ್ಲದೆ, ಪ್ರಕರಣವನ್ನು ಕಾನೂನಿನ ಆಧಾರದಲ್ಲಿ ನೋಡಬೇಕೇ ವಿನಾ ಭಾವನಾತ್ಮಕವಾಗಿ ಅಲ್ಲ ಎನ್ನುವ ಮೂಲಕ ಗಲ್ಲು ಶಿಕ್ಷೆ ನೀಡದ ಬಗ್ಗೆ ಸ್ಪಷ್ಟನೆ ನೀಡಿದರು.

ಅಲ್ಲದೆ, ಕೃತ್ಯ ಎಸಗಿದ್ದಕ್ಕಾಗಿ ಸಂಜಯ ರಾಯ್‌ಗೆ 50 ಸಾವಿರ ರು. ದಂಡ ವಿಧಿಸಿತು ಹಾಗೂ ದಂಡ ಕಟ್ಟದಿದ್ದರೆ 5 ತಿಂಗಳು ಜೈಲುವಾಸ ಅನುಭವಿಸಬೇಕು ಎಂದು ನಿರ್ದೇಶಿಸಿತು. ಇದರ ಜೊತೆಗೆ. ‘ಘಟನೆ ನಡೆದಿರುವುದು ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ವೈದ್ಯೆ ಕರ್ತವ್ಯದಲ್ಲಿ ಇರುವಾಗ. ಹೀಗಾಗಿ ಮೃತ ವೈದ್ಯೆಯ ಕುಟುಂಬಕ್ಕೆ ಸರ್ಕಾರ 17 ಲಕ್ಷ ರು. ಪರಿಹಾರ ನೀಡಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತು.

ಕಳೆದ ವರ್ಷ ಆಗಸ್ಟ್‌ 9 ರಂದು ವೈದ್ಯೆ ಮೇಲೆ ಆಸ್ಪತ್ರೆಯಲ್ಲಿ ಅತ್ಯಾಚಾರ ಹಾಗೂ ಕೊಲೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪೊಲೀಸ್‌ ಸಹಾಯಕ’ ಎಂಬ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಂಜಯ್‌ ರಾಯ್ ಎಂಬಾತನನ್ನು ಕೋಲ್ಕತಾ ಪೊಲೀಸರು ಬಂಧಿಸಿದ್ದರು. ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು ಎಂದು ದೊಡ್ಡ ಮಟ್ಟಿಗಿನ ಆಗ್ರಹ ಕೇಳಿ ಬಂದಿತ್ತು.

ಈ ನಡುವೆ ವಾದ-ಪ್ರತಿವಾದದ ವೇಳೆ ಸಿಬಿಐ ವಕೀಲರು, ‘ಅಪರೂಪದಲ್ಲೇ ಅಪರೂಪದ ಪ್ರಕರಣ ಇದು’ ಎಂದು ಮರಣದಂಡನೆಗೆ ಮನವಿ ಮಾಡಿದ್ದರು. ಆದರೆ ಪ್ರತಿವಾದಿ ವಕೀಲರು ಮರಣದಂಡನೆಯ ಬದಲಿಗೆ ಜೈಲು ಶಿಕ್ಷೆ ನೀಡಬೇಕೆಂದು ಕೋರಿದ್ದರು. ತನ್ನನ್ನು ವಿನಾಕಾರಣ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಬಲವಂತದ ತಪ್ಪೊಪ್ಪಿಗೆ ಹೇಳಿಕೆ ಕೊಡಿಸಲಾಗಿದೆ ಎಂದು ಕೋರ್ಟಲ್ಲಿ ಸಂಜಯ ರಾಯ್‌ ಅಲವತ್ತುಕೊಂಡಿದ್ದ.

ರೇಪಿಸ್ಟ್ ಸಂಜಯ ರಾಯ್‌ಗೆ ಗಲ್ಲು ಏಕಿಲ್ಲ?: ಆಕ್ರೋಶ

ಕೋಲ್ಕತಾ: ಇಲ್ಲಿನ ಆರ್‌ಜಿ ಕರ್‌ ಮೆಡಿಕಲ್ ಕಾಲೇಜಿನಲ್ಲಿ ನಡೆದ ವೈದ್ಯೆ ರೇಪ್ ಮತ್ತು ಕೊಲೆ ಪ್ರಕರಣದ ಆರೋಪಿ ಸಂಜಯ್‌ ರಾಯ್‌ಗೆ ನ್ಯಾಯಾಲಯ ಮರಣದಂಡನೆ ನೀಡದೇ ಕೇವಲ ಜೀವಾವಧಿ ಶಿಕ್ಷೆ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಂತ್ರಸ್ತೆ ಪೋಷಕರು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ ನಾಯಕರು ಸೇರಿ ಹಲವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.ತೀರ್ಪಿಗೆ ಮಮತಾ ಪ್ರತಿಕ್ರಿಯಿಸಿ, ಸಿಬಿಐ ತನಿಖೆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ‘ಎಲ್ಲರೂ ಮರಣ ದಂಡನೆಗೆ ಆಗ್ರಹಿಸುತ್ತಿದ್ದರು. ಆದರೆ ಕೋರ್ಟು ಸಾಯುವ ತನಕ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಪ್ರಕರಣವನ್ನು ಬಲವಂತವಾಗಿ ಬಂಗಾಳ ಪೊಲೀಸರಿಂದ ಕಿತ್ತುಕೊಂಡು ಸಿಬಿಐ ತನಿಖೆ  ವಹಿಸಲಾಗಿತ್ತು. ತನಿಖೆ ಮ್ಮ ಬಳಿ ಇದ್ದರೆ ನಾವು ಗಲ್ಲುಶಿಕ್ಷೆ ವಿಧಿಸಲು ಶ್ರಮಿಸುತ್ತಿದ್ದೆವು’ ಎಂದಿದ್ದಾರೆ.

ಸಂತ್ರಸ್ತೆ ಪೋಷಕರು ಕೂಡ ಈ ತೀರ್ಪಿಗೆ ಬೇಸರ ವ್ಯಕ್ತಪಡಿಸಿ, ನ್ಯಾಯ ಸಿಗುವವರೆಗೂ ಹೋರಾಡುವುದಾಗಿ ಹೇಳಿದ್ದಾರೆ ಹಾಗೂ ನ್ಯಾಯಾಲಯ ಸೂಚಿಸಿರುವ 17 ಲಕ್ಷ ರು. ಪರಿಹಾರ ಹಣವನ್ನು ತೆಗೆದುಕೊಳ್ಳುವುದಿಲ್ಲ ಪೋಷಕರು ಹೇಳಿದ್ದಾರೆ.‘ತನಿಖೆಯನ್ನು ಅರೆಮನಸ್ಸಿನಿಂದ ಮಾಡಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಹಲವು ಅಪರಾಧಿಗಳನ್ನು ರಕ್ಷಿಸಲಾಗಿದೆ. ನ್ಯಾಯಕ್ಕಾಗಿ ಹೈಕೋರ್ಟ್‌ ಮೊರೆ ಹೋಗುತ್ತೇವೆ. ನಾವು ಆಘಾತಕ್ಕೊಳಗಾಗಿದ್ದೇವೆ. ಅಪರೂಪದ ಪ್ರಕರಣಗಳಲ್ಲಿ ಇದು ಹೇಗೆ ಅಪರೂಪವಲ್ಲ? ಕರ್ತವ್ಯನಿರತ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ. ನಾನು ದಿಗ್ಭ್ರಮೆಗೊಂಡಿದ್ದೇವೆ. ಈ ಅಪರಾಧದ ಹಿಂದೆ ದೊಡ್ಡ ಪಿತೂರಿಯಿದೆ’ ಎಂದು ಸಂತ್ರಸ್ತೆ ತಾಯಿ ಹೇಳಿದ್ದಾರೆ.

ಬಿಜೆಪಿ ನಾಯಕ ಅಮಿತ್‌ ಮಾಳವೀಯ ಮಾತನಾಡಿ, ‘ಸಂಜಯ್‌ ರಾಯ್‌ಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ದಂಡ ವಿಧಿಸಿರುವುದು ನ್ಯಾಯದ ಅಪಹಾಸ್ಯವಾಗಿದೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು. ಸಿಎಂ ಮಮತಾ ಬ್ಯಾನರ್ಜಿ ಅಪರಾಧಿಯನ್ನು ರಕ್ಷಿಸುವುದನ್ನು ನಿಲ್ಲಿಸಬೇಕು’ ಎಂದಿದ್ದಾರೆ.