ಒತ್ತುವರಿ ಕಟ್ಟಡ ಬುಲ್ಡೋಜರ್‌ ಬಳಸಿ ತೆರವುಗೊಳಿಸುವ ಬುಲ್ಡೋಜರ್‌ ನ್ಯಾಯಕ್ಕೆ ಸುಪ್ರೀಂ ಬ್ರೇಕ್‌

| Published : Nov 14 2024, 12:57 AM IST / Updated: Nov 14 2024, 06:26 AM IST

ಒತ್ತುವರಿ ಕಟ್ಟಡ ಬುಲ್ಡೋಜರ್‌ ಬಳಸಿ ತೆರವುಗೊಳಿಸುವ ಬುಲ್ಡೋಜರ್‌ ನ್ಯಾಯಕ್ಕೆ ಸುಪ್ರೀಂ ಬ್ರೇಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೆಲವು ರಾಜ್ಯಗಳು ಅದರಲ್ಲೂ ವಿಶೇಷವಾಗಿ ಉತ್ತರಪ್ರದೇಶದಲ್ಲಿ ಜಾರಿಯಲ್ಲಿರುವ, ಗಂಭೀರ ಪ್ರಕರಣದ ಆರೋಪಿಗಳ ಒತ್ತುವರಿ ಕಟ್ಟಡಗಳನ್ನು ಬುಲ್ಡೋಜರ್‌ ಬಳಸಿ ತೆರವುಗೊಳಿಸುವ ‘ಬುಲ್ಡೋಜರ್ ನ್ಯಾಯ’ಕ್ಕೆ ಸುಪ್ರೀಂಕೋರ್ಟ್‌ ಬ್ರೇಕ್‌ ಹಾಕಿದೆ.

 ನವದೆಹಲಿ : ಕೆಲವು ರಾಜ್ಯಗಳು ಅದರಲ್ಲೂ ವಿಶೇಷವಾಗಿ ಉತ್ತರಪ್ರದೇಶದಲ್ಲಿ ಜಾರಿಯಲ್ಲಿರುವ, ಗಂಭೀರ ಪ್ರಕರಣದ ಆರೋಪಿಗಳ ಒತ್ತುವರಿ ಕಟ್ಟಡಗಳನ್ನು ಬುಲ್ಡೋಜರ್‌ ಬಳಸಿ ತೆರವುಗೊಳಿಸುವ ‘ಬುಲ್ಡೋಜರ್ ನ್ಯಾಯ’ಕ್ಕೆ ಸುಪ್ರೀಂಕೋರ್ಟ್‌ ಬ್ರೇಕ್‌ ಹಾಕಿದೆ. ಬಲಶಾಲಿಯಾದುದೇ ಸರಿ ಎಂಬ ಕಾನೂನೇ ಇಲ್ಲದ ಸ್ಥಿತಿಗೆ ಈ ಬುಲ್ಡೋಜರ್‌ ನ್ಯಾಯವನ್ನು ಹೋಲಿಕೆ ಮಾಡಿರುವ ನ್ಯಾಯಾಲಯ, ಮುಂಚಿತವಾಗಿ ಶೋಕಾಸ್‌ ನೋಟಿಸ್‌ ಕೊಡದೆ ಯಾವುದೇ ಕಟ್ಟಡವನ್ನೂ ನೆಲಸಮಗೊಳಿಸುವಂತಿಲ್ಲ. ಸಂತ್ರಸ್ತರು ನೋಟಿಸ್‌ಗೆ ಉತ್ತರಿಸಲು 15 ದಿನ ಸಮಾಯಾವಕಾಶವನ್ನೂ ನೀಡಬೇಕು ಎಂದು ಸೂಚಿಸಿ ದೇಶವ್ಯಾಪಿ ಅನ್ವಯವಾಗುವ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಇದೇ ವೇಳೆ ತನ್ನ ಈ ಆದೇಶ ರಸ್ತೆ, ಪಾದಚಾರಿ ಮಾರ್ಗ, ರೈಲು ಹಳಿ, ನದಿ ಅಥವಾ ಜಲಮೂಲಗಳಲ್ಲಿ ನಿರ್ಮಾಣವಾಗಿರುವ ಅನಧಿಕೃತ ಹಾಗೂ ನ್ಯಾಯಾಲಯಗಳು ಈಗಾಗಲೇ ತೆರವಿಗೆ ಆದೇಶಿಸಿರುವ ಕಟ್ಟಡಗಳಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಸುಪ್ರೀಂ ತರಾಟೆ:

ಬುಲ್ಡೋಜರ್‌ ನ್ಯಾಯದ ಬಗ್ಗೆ ಅತ್ಯಂತ ತೀಕ್ಷ್ಣವಾದ ಟೀಕೆ, ಅತೃಪ್ತಿಯನ್ನು ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ ಹಾಗೂ ಕೆ.ವಿ. ವಿಶ್ವನಾಥನ್‌ ಅವರಿದ್ದ ಪೀಠ ವ್ಯಕ್ತಪಡಿಸಿ, ಸರ್ಕಾರಗಳಿಗೆ ಚಾಟಿ ಬೀಸಿದೆ. ಪ್ರಕರಣವೊಂದರಲ್ಲಿ ಒಬ್ಬ ವ್ಯಕ್ತಿ ಆರೋಪಿಯಾಗಿದ್ದಾನೆ ಎಂಬ ಕಾರಣಕ್ಕೆ ಕಾರ್ಯಾಂಗವು ನ್ಯಾಯಾಧೀಶರ ರೀತಿ ವರ್ತನೆ ಮಾಡಿ, ಕಟ್ಟಡ ನೆಲಸಮದಂತಹ ಶಿಕ್ಷೆಯನ್ನು ವಿಧಿಸುವುದು ಅಧಿಕಾರ ವಿಭಾಗೀಕರಣದ ತತ್ವಕ್ಕೇ ವಿರುದ್ಧವಾದುದು. ನಾಗರಿಕರನ್ನು ಶಿಕ್ಷಿಸಲು ಕಾರ್ಯಾಂಗವು ನ್ಯಾಯಾಂಗದ ಅಧಿಕಾರ ವಹಿಸಿಕೊಂಡು ಯಾವುದೇ ನಿಯಮ ಪಾಲನೆ ಮಾಡದೆ ಕಟ್ಟಡ ಧ್ವಂಸ ಮಾಡುವಂತಿಲ್ಲ. ಇವು ಅತಿಯಾದ ಹಾಗೂ ಸ್ವೇಚ್ಛಾಚಾರದ ಕ್ರಮಗಳು. ಕಾನೂನಿನ ಕಠಿಣ ಶಕ್ತಿಯಿಂದ ಇವನ್ನು ಎದುರಿಸಬೇಕಿದೆ ಎಂದು 95 ಪುಟಗಳ ತೀರ್ಪಿನಲ್ಲಿ ಕಿಡಿಕಾರಿದೆ.

ದೇಶವ್ಯಾಪಿ ಮಾರ್ಗಸೂಚಿ:

- ಮುಂಚಿತವಾಗಿಯೇ ನೋಟಿಸ್‌ ನೀಡದೆ ಯಾವುದೇ ನೆಲಸಮ ಕಾರ್ಯಾಚರಣೆಯನ್ನು ನಡೆಸುವಂತಿಲ್ಲ. ಈ ನೋಟಿಸ್‌ಗೆ ಸ್ಥಳೀಯ ಸಂಸ್ಥೆಗಳು ಕಾಲಮಿತಿ ನಿಗದಿಗೊಳಿಸಬೇಕು ಅಥವಾ 15 ದಿನಗಳ ಸಮಯ ನೀಡಬೇಕು.

- ರಿಜಿಸ್ಟರ್ಡ್ ಪೋಸ್ಟ್‌ ಮೂಲಕ ಈ ನೋಟಿಸ್‌ ಅನ್ನು ಕಟ್ಟಡದ ಮಾಲೀಕ ಅಥವಾ ಅದರಲ್ಲಿ ನೆಲೆಸಿರುವವರಿಗೆ ನೀಡಬೇಕು. ಕಟ್ಟಡದ ಹೊರಭಾಗದಲ್ಲಿ ಎದ್ದು ಕಾಣುವಂತೆ ನೋಟಿಸ್‌ ಅಂಟಿಸಬೇಕು.

- ಕಟ್ಟಡ ಧ್ವಂಸಕ್ಕೆ ನೀಡಲಾಗುವ 15 ದಿನಗಳ ಅವಧಿ ನೋಟಿಸ್‌ ಸ್ವೀಕೃತಿಯಾದ ದಿನದಿಂದ ಅನ್ವಯವಾಗಲಿದೆ.

- ಹಳೆಯ ದಿನಾಂಕ ನಮೂದಿಸಿ ನೋಟಿಸ್‌ ನೀಡುವುದನ್ನು ತಪ್ಪಿಸಲು, ಶೋಕಾಸ್‌ ನೋಟಿಸ್‌ ಜಾರಿಯಾದ ಕೂಡಲೇ ಜಿಲ್ಲಾಧಿಕಾರಿಗಳಿಗೆ ಇ-ಮೇಲ್‌ ಮೂಲಕ ಮಾಹಿತಿ ರವಾನಿಸಬೇಕು. ಜಿಲ್ಲಾಧಿಕಾರಿಗಳು ಆಟೋ ಜನರೇಟೆಡ್ ಇ-ಮೇಲ್‌ ಮೂಲಕ ಸ್ವೀಕೃತಿಯನ್ನು ದೃಢೀಕರಿಸಬೇಕು

- ಜಿಲ್ಲಾಧಿಕಾರಿಗಳು ನೋಡಲ್‌ ಅಧಿಕಾರಿಯನ್ನು ನಿಯೋಜಿಸಿ, ಅವರಿಗೆ ಇ-ಮೇಲ್‌ ಹಂಚಿಕೆ ಮಾಡಿ ಅದನ್ನು ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಜತೆ ಇಂದಿನಿಂದ ತಿಂಗಳೊಳಗೆ ಹಂಚಿಕೊಳ್ಳಬೇಕು

- ಅನಧಿಕೃತ ಕಟ್ಟಡಗಳ ಮಾಲೀಕರಿಗೆ ನೀಡಲಾಗುವ ನೋಟಿಸ್‌ನಲ್ಲಿ ಅನಧಿಕೃತ ನಿರ್ಮಾಣ ವಿವರ, ನಿರ್ದಿಷ್ಟ ಉಲ್ಲಂಘನೆ ಹಾಗೂ ನೆಲಸಮ ತೀರ್ಮಾನಕ್ಕೆ ಕಾರಣಗಳನ್ನು ವಿವರಿಸಬೇಕು

- ನೋಟಿಸ್‌ ಪಡೆದವರು ಅದಕ್ಕೆ ಉತ್ತರ ನೀಡುವಾಗ ಸಲ್ಲಿಸಬೇಕಾದ ದಾಖಲೆಗಳ ವಿವರಗಳು, ವಿಚಾರಣೆ ನಡೆಯುವ ದಿನ, ಯಾವ ಅಧಿಕಾರಿ ಎದುರು ವಿಚಾರಣೆಗೆ ಹಾಜರಾಗಬೇಕು, ಎಲ್ಲಿ ಹಾಜರಾಗಬೇಕು ಎಂಬುದೆಲ್ಲವನ್ನೂ ನೋಟಿಸ್‌ನಲ್ಲಿ ತಿಳಿಸಬೇಕು

- ಪ್ರತಿ ನಗರ ಸ್ಥಳೀಯ ಸಂಸ್ಥೆಯೂ ಇಂದಿನಿಂದ ಮೂರು ತಿಂಗಳಿನ ಒಳಗಾಗಿ ಡಿಜಿಟಲ್‌ ಪೋರ್ಟಲ್‌ ತೆರೆಯಬೇಕು. ನೋಟಿಸ್‌ ನೀಡಿರುವುದು/ಅಂಟಿಸಿರುವುದು, ಬಂದಿರುವ ಪ್ರತಿಕ್ರಿಯೆ, ಶೋಕಾಸ್‌ ನೋಟಿಸ್‌, ಜಾರಿಯಾದ ಆದೇಶಗಳು ಅಲ್ಲಿ ಲಭ್ಯವಾಗಬೇಕು

- ನಿಗದಿತ ಪ್ರಾಧಿಕಾರ ನೆಲಸಮ ಮಾಡಬೇಕಿರುವ ಕಟ್ಟಡದ ಮಾಲೀಕನನ್ನು ವಿಚಾರಣೆಗೆ ಒಳಪಡಿಸಬೇಕು. ವಿಚಾರಣೆ ಪೂರ್ಣವಾದ ಬಳಿಕ ಅಂತಿಮ ಆದೇಶ ಹೊರಡಿಸಬೇಕು

- ಇದಾದ ಬಳಿಕ 14 ದಿನದಲ್ಲಿ ಅನಧಿಕೃತ ಕಟ್ಟಡ ತೆರವುಗೊಳಿಸಲು ಅವಕಾಶ ನೀಡಬೇಕು. ಈ ಅವಧಿ ಅವಧಿ ಮುಗಿದ ಬಳಿಕವಷ್ಟೇ ಕಟ್ಟಡ ತೆರವು ಮಾಡಬೇಕು. ಆ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಬೇಕು