ಸುಪ್ರೀಂನಲ್ಲಿ ತಮಿಳ್ನಾಡಿಗೆ ಮುಖಭಂಗ

| Published : Feb 28 2024, 02:33 AM IST

ಸಾರಾಂಶ

ಅಕ್ರಮ ಮರಳು ಗಣಿಗಾರಿಕೆ ಪ್ರಕರಣದ ಜಾರಿ ನಿರ್ದೇಶನಾಲಯದ (ಇ.ಡಿ.) ವಿಚಾರಣೆಗೆ ತಮಿಳುನಾಡಿನ 5 ಜಿಲ್ಲಾಧಿಕಾರಿಗಳು ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ.

ನವದೆಹಲಿ: ಅಕ್ರಮ ಮರಳು ಗಣಿಗಾರಿಕೆ ಪ್ರಕರಣದ ಜಾರಿ ನಿರ್ದೇಶನಾಲಯದ (ಇ.ಡಿ.) ವಿಚಾರಣೆಗೆ ತಮಿಳುನಾಡಿನ 5 ಜಿಲ್ಲಾಧಿಕಾರಿಗಳು ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ. ಅಲ್ಲದೆ ವಿಚಾರಣೆಗೆ ಹಾಜರಾಗುವುದಕ್ಕೆ ತಡೆ ನೀಡಿದ್ದ ಮದ್ರಾಸ್‌ ಹೈಕೋರ್ಟ್‌ ಆದೇಶವನ್ನೂ ಸುಪ್ರೀಂಕೋರ್ಟ್‌ ತೆರವುಗೊಳಿಸಿದೆ.ತಮಿಳುನಾಡಿನಲ್ಲಿ ನಡೆದ ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯ ಕುರಿತು ತನಿಖೆ ನಡೆಸುತ್ತಿರುವ ಇ.ಡಿ, ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ವೆಲ್ಲೂರು, ತಿರುಚಿರಾಪಳ್ಳಿ, ಕರೂರ್‌, ತಂಜಾವೂರು ಮತ್ತು ಅರಿಯಲೂರು ಜಿಲ್ಲಾಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿತ್ತು. ಆದರೆ ಇದನ್ನು ಜಿಲ್ಲಾಧಿಕಾರಿಗಳು ಮತ್ತು ಸ್ವತಃ ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ವೇಳೆ ಅಧಿಕಾರಿಗಳ ಹಾಜರಿಗೆ ಹೈಕೋರ್ಟ್‌ ತಡೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇ.ಡಿ. ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು.ಈ ಅರ್ಜಿಯ ಕುರಿತು ಮಂಗಳವಾರ ತೀರ್ಪು ನೀಡಿದ್ದ ನ್ಯಾ. ಬೇಲ ಎಂ. ತ್ರಿವೇದಿ ಮತ್ತು ನ್ಯಾ. ಪಂಕಜ್‌ ಮಿತ್ತಲ್‌ ಅವರನ್ನೊಳಗೊಂಡ ನ್ಯಾಯಪೀಠ, ಇ.ಡಿ. ಸಮನ್ಸ್‌ ವಿರುದ್ಧ ಜಿಲ್ಲಾಧಿಕಾರಿಗಳು ಮತ್ತು ತಮಿಳುನಾಡು ಸರ್ಕಾರದ ಅರ್ಜಿ ವಿಚಿತ್ರ ಮತ್ತು ಅಸಹಜವಾಗಿದೆ. ಇ.ಡಿ. ಸಮನ್ಸ್‌ ಸಂಬಂಧ ವಿಚಾರಣೆಯ ಮುಂದಿನ ದಿನಾಂಕದಂದು ಎಲ್ಲಾ ಅಧಿಕಾರಿಗಳು ಹಾಜರಾಗಬೇಕು ಎಂದು ಸೂಚಿಸಿತು.