ದ್ವಿಭಾಷಾ ಸೂತ್ರದ ಕಾರಣ ನೀಡಿ ಕೇಂದ್ರ ಸರ್ಕಾರದ ಜವಾಹರ್‌ ನವೋದಯ ವಿದ್ಯಾಲಯಗಳ ಸ್ಥಾಪನೆಗೆ ತಡೆ ಒಡ್ಡಿದ್ದ ತಮಿಳುನಾಡು ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ತರಾಟೆ- ನವೋದಯ ಶಾಲೆಗೆ ಅವಕಾಶಕ್ಕೆ ತಾಕೀತು- ಒಕ್ಕೂಟ ವ್ಯವಸ್ಥೆ ಪಾಲಿಸಿ: ಸುಪ್ರೀಂ

---

ನವೋದಯ ಶಾಲೆ ಕೇಸಲ್ಲಿ ಮದ್ರಾಸ್‌ ಹೈಕೋರ್ಟ್‌ ತೀರ್ಪು ವಿರುದ್ಧ ತ.ನಾಡು ಸರ್ಕಾರ ಸುಪ್ರೀಂಗೆ

ನಮ್ಮದು ದ್ವಿಭಾಷಾ, ಕೇಂದ್ರದ್ದು ತ್ರಿಭಾಷಾ ಸೂತ್ರ. ಇದು ನಮ್ಮ ಮೇಲೆ ಹಿಂದಿ ಹೇರಿಕೆ ಎಂದು ವಾದ

ಇದಕ್ಕೆ ಸುಪ್ರೀಂ ಆಕ್ಷೇಪ. ನಮ್ಮ ರಾಜ್ಯ ಅನ್ನಬೇಡಿ. ಒಕ್ಕೂಟ ವ್ಯವಸ್ಥೆ ಪಾಲಿಸಿ ಎಂದು ತಾಕೀತು

ಶಾಲೆ ಸ್ಥಾಪನೆಯನ್ನು ಹಿಂದಿ ಹೇರಿಕೆ ಎಂದು ಪರಿಗಣಿಸಬೇಡಿ ಎಂದು ಡಿಎಂಕೆ ಸರ್ಕಾರಕ್ಕೆ ಸಲಹೆ

ನೀವು ಒಂದು ಹೆಜ್ಜೆ ಮುಂದಿಟ್ಟರೆ, ಕೇಂದ್ರ ಸರ್ಕಾರವೂ ಒಂದು ಮುಂದಿಡುತ್ತೆ ಎಂದು ನ್ಯಾ. ನಾಗರತ್ನ

==ಪಿಟಿಐ ನವದೆಹಲಿ

ದ್ವಿಭಾಷಾ ಸೂತ್ರದ ಕಾರಣ ನೀಡಿ ಕೇಂದ್ರ ಸರ್ಕಾರದ ಜವಾಹರ್‌ ನವೋದಯ ವಿದ್ಯಾಲಯಗಳ ಸ್ಥಾಪನೆಗೆ ತಡೆ ಒಡ್ಡಿದ್ದ ತಮಿಳುನಾಡು ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ‘ನಮ್ಮದು ಒಕ್ಕೂಟ ಸಮಾಜ’ ಎಂದಿರುವ ಅದು, ‘ರಾಜ್ಯದಲ್ಲಿ ನವೋದಯ ವಿದ್ಯಾಲಯಗಳ (ಜೆಎನ್‌ವಿ) ಸ್ಥಾಪನೆ ಕುರಿತು ಕೇಂದ್ರದೊಂದಿಗೆ ಜಂಟಿ ಸಮಾಲೋಚನೆ ನಡೆಸಿ’ ಎಂದು ಸೂಚಿಸಿದೆ.

‘ನವೋದಯ ವಿದ್ಯಾಲಯಗಳ ಮೂಲಕ ಹಿಂದಿ (ತ್ರಿಭಾಷಾ ಸೂತ್ರ) ಹೇರಲಾಗುತ್ತದೆ. ಆದರೆ ತಮಿಳುನಾಡಿನಲ್ಲಿ ದ್ವಿಭಾಷಾ ಸೂತ್ರ ಮಾತ್ರ ಇದೆ’ ಎಂಬ ತಮಿಳುನಾಡಿನ ಅರ್ಜಿ ವಿಚಾರಣೆ ನಡೆಸಿದ ನ್ಯಾ। ಬಿ.ವಿ. ನಾಗರತ್ನ ಮತ್ತು ನ್ಯಾ। ಆರ್. ಮಹಾದೇವನ್ ಅವರ ಪೀಠವು, ರಾಜ್ಯ ಸರ್ಕಾರವು ಪ್ರತಿಕೂಲ ಮನೋಭಾವವನ್ನು ಅಳವಡಿಸಿಕೊಳ್ಳಬಾರದು ಮತ್ತು ಒಕ್ಕೂಟ ವ್ಯವಸ್ಥೆಯಡಿ ಚರ್ಚೆ ನಡೆಯಬೇಕು. ತಮಿಳುನಾಡಿನ ಪ್ರತಿ ಜಿಲ್ಲೆಯಲ್ಲಿ ನವೋದಯ ವಿದ್ಯಾಲಯ ಸ್ಥಾಪಿಸಲು ಅಗತ್ಯವಿರುವ ಭೂಮಿಯ ಪ್ರಮಾಣವನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿತು.

‘ಇದನ್ನು ಭಾಷಾ ಸಮಸ್ಯೆಯನ್ನಾಗಿ ಮಾಡಬೇಡಿ. ನಮ್ಮ ರಾಜ್ಯ ನಮ್ಮ ರಾಜ್ಯ ಎನ್ನಬೇಡಿ. ನಮ್ಮದು ಫೆಡರಲ್ ಸಮಾಜ. ನೀವು ಗಣರಾಜ್ಯದ ಭಾಗ. ನೀವು ಒಂದು ಹೆಜ್ಜೆ ಮುಂದೆ ಬಂದರೆ, ಅವರು ಕೂಡ ಒಂದು ಹೆಜ್ಜೆ ಮುಂದೆ ಬರುತ್ತಾರೆ. ದಯವಿಟ್ಟು ಸಕಾರಾತ್ಮಕ ಮನೋಭಾವವನ್ನು ಹೊಂದಿರಿ’ ಎಂದು ಅವರು ಹೇಳಿತು.

‘ಆಂಧ್ರಪ್ರದೇಶ ವಿಭಜನೆಯ ನಂತರ, ತಮಿಳುನಾಡು ಎಲ್ಲಾ ವೈಭವ ಪಡೆದುಕೊಂಡಿದೆ. ಇದು ದಕ್ಷಿಣ ಭಾರತದ ಅತಿದೊಡ್ಡ ಔದ್ಯಮಿಕ ರಾಜ್ಯವಾಗಿದೆ. ಶಾಲೆ ಸ್ಥಾಪನೆಯನ್ನು (ಹಿಂದಿ) ಹೇರಿಕೆಯಾಗಿ ತೆಗೆದುಕೊಳ್ಳಬೇಡಿ, ಇದು ರಾಜ್ಯದ ವಿದ್ಯಾರ್ಥಿಗಳಿಗೆ ಒಂದು ಅವಕಾಶ. ನಮ್ಮದು ದ್ವಿಭಾಷಾ ನೀತಿ ಎಂದು ನೀವು ಹೇಳಬಹುದು. ಅವರು (ಕೇಂದ್ರ) ಇದನ್ನು ಪರಿಶೀಲಿಸುತ್ತಾರೆ. ಕೇಂದ್ರವು ರಾಜ್ಯದ ನೀತಿಗೆ ಭಂಗ ತರದು’ ಎಂದು ಪೀಠವು ತಮಿಳ್ನಾಡು ಸರ್ಕಾರಕ್ಕೆ ಹೇಳಿದರು.