ಸಾರಾಂಶ
ನವದೆಹಲಿ: ಚುನಾವಣಾ ಬಾಂಡ್ ಭಾರತದ ಇತಿಹಾಸದಲ್ಲಿ ಅತಿದೊಡ್ಡ ಹಗರಣವಾಗಿದ್ದು, ಇದನ್ನು ಸುಪ್ರೀಂ ಕೋರ್ಟ್ ನಿಗಾದಲ್ಲಿ ತನಿಖೆಗೆ ಒಳಪಡಿಸಬೆಕು ಎಂಬುದಾಗಿ ಕಾಂಗ್ರೆಸ್ ಆಗ್ರಹಿಸಿದೆ.
ಈ ಕುರಿತು ನ್ಯಾಯ ಯಾತ್ರೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ‘ಚುನಾವಣಾ ಬಾಂಡ್ ಎಂಬುದು ಬಿಜೆಪಿಯಿಂದ ಹಲವು ಕಂಪನಿಗಳು ಮತ್ತು ರಾಜಕೀಯ ನಾಯಕರಿಂದ ಹಫ್ತಾ ವಸೂಲಿ ದಂಧೆಯಾಗಿ ಮಾರ್ಪಟ್ಟಿದೆ.
ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುವವರ ಮೇಲೆ ಇಡಿ, ಸಿಬಿಐ, ಆದಾಯ ತೆರಿಗೆ ಮುಂತಾದ ತನಿಖಾ ಸಂಸ್ಥೆಗಳನ್ನು ಬಿಟ್ಟು ಅವರ ಮೂಲಕ ಚುನಾವಣಾ ಬಾಂಡ್ ಖರೀದಿಸುವಂತೆ ಒತ್ತಡ ಹೇರುವುದನ್ನು ಬಿಜೆಪಿ ರೂಢಿಸಿಕೊಂಡಿರುವುದು ಬಯಲಾಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ದಿಕ್ಕು ತಪ್ಪಿಸುವ ಮಾಹಿತಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಟ್ವೀಟ್ ಮಾಡಿ, ‘ಅಮಿತ್ ಶಾ ಎಂದಿನಂತೆ ಜನರಿಗೆ ದಿಕ್ಕು ತಪ್ಪಿಸುವ ಮಾಹಿತಿ ನೀಡಲು ಆರಂಭಿಸಿದ್ದಾರೆ. ಅವರ ಪಾಲಿಗೆ 6 ಸಾವಿರ ಕೋಟಿ ರು. ಬಂದಿದೆ.
ಅದರ ಜೊತೆಗೆ ಎನ್‌ಡಿಎ ಜೊತೆಗೆ ಸಖ್ಯ ಬೆಳೆಸಿಕೊಂಡಿರುವ ಪಕ್ಷಗಳಿಗೂ 2,700 ಕೋಟಿ ರು. ಬಂದಿರುವುದನ್ನು ಮುಚ್ಚಿಟ್ಟು ಇತರರಿಗೆ 14 ಸಾವಿರ ಕೋಟಿ ರು. ಬಂದಿರುವುದಾಗಿ ತಿಳಿಸಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ’ ಎಂದರು.
4 ರೀತಿ ಭ್ರಷ್ಟಾಚಾರ: ಬಿಜೆಪಿ ನಾಲ್ಕು ರೀತಿಯ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದ ಜೈರಾಂ, ‘ಕಂಪನಿಗಳಿಗೆ ಚುನಾವಣಾ ಬಾಂಡ್ ಮೂಲಕ ಚಂದಾ ನೀಡಿ ವ್ಯವಹಾರ ನೀಡುವುದು, ತನಿಖಾ ಸಂಸ್ಥೆಗಳನ್ನು ಬಿಟ್ಟು ಹಫ್ತಾ ವಸೂಲಿ ಮಾಡುವುದು, ಚುನಾವಣಾ ಬಾಂಡ್ ರೀತಿಯಲ್ಲಿ ಲಂಚ ನೀಡಿದ ಬಳಿಕ ಗುತ್ತಿಗೆಗಳನ್ನು ನೀಡುವುದು ಮತ್ತು ನಕಲಿ ಕಂಪನಿಗಳನ್ನು ನಡೆಸುವುದು ಬಿಜೆಪಿಯ ಭ್ರಷ್ಟಾಚಾರದ ವಿಧಗಳಾಗಿವೆ’ ಎಂದು ಕಿಡಿ ಕಾರಿದರು.