ಬ್ಯಾಂಕ್‌-ಬಿಲ್ಡರ್‌ ಸೇರಿ ವಂಚನೆ: ಸಿಬಿಐ ತನಿಖೆಗೆ ಸುಪ್ರೀಂ ಸೂಚನೆ

| Published : Apr 30 2025, 12:31 AM IST

ಬ್ಯಾಂಕ್‌-ಬಿಲ್ಡರ್‌ ಸೇರಿ ವಂಚನೆ: ಸಿಬಿಐ ತನಿಖೆಗೆ ಸುಪ್ರೀಂ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ನಿರ್ಮಾಣ ಕಾಮಗಾರಿಯಲ್ಲಿನ ವಿಳಂಬ ಮತ್ತು ಗ್ರಾಹಕರಿಗೆ ಫ್ಲ್ಯಾಟ್‌ಗಳ ವಿತರಣೆಯಲ್ಲಾಗುತ್ತಿರುವ ವಿಳಂಬದ ಹಿನ್ನೆಲೆಯಲ್ಲಿ

- ಫ್ಲ್ಯಾಟ್‌ ಕೈ ಸೇರದಿದ್ರೂ ಗ್ರಾಹಕರಿಂದ ಇಎಂಐ ವಸೂಲಿ

ನವದೆಹಲಿ: ನಿರ್ಮಾಣ ಕಾಮಗಾರಿಯಲ್ಲಿನ ವಿಳಂಬ ಮತ್ತು ಗ್ರಾಹಕರಿಗೆ ಫ್ಲ್ಯಾಟ್‌ಗಳ ವಿತರಣೆಯಲ್ಲಾಗುತ್ತಿರುವ ವಿಳಂಬದ ಹಿನ್ನೆಲೆಯಲ್ಲಿ

ಬಿಲ್ಡರ್‌ಗಳು ಮತ್ತು ಬ್ಯಾಂಕುಗಳ ನಡುವಿನ ಅಪವಿತ್ರ ಒಪ್ಪಂದ ಕುರಿತು ಸುಪ್ರೀಂ ಕೋರ್ಟ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸಹಾಯಧನ ಯೋಜನೆಯಡಿ ದೆಹಲಿಯ ಎನ್‌ಸಿಆರ್‌ನ ಸೂಪರ್‌ ಟೆಕ್‌ ಬಿಲ್ಡರ್‌ ಸೇರಿ ಕೆಲ ಬಿಲ್ಡರ್‌ಗಳ ವಿರುದ್ಧ ತನಿಖೆ ಆರಂಭಿಸುವಂತೆ ನ್ಯಾಯಾಲಯವು ಸಿಬಿಐಗೆ ಸೂಚಿಸಿದೆ.

ನ್ಯಾಯಮೂರ್ತಿ ಸೂರ್ಯಕಾಂತ್‌ ಮತ್ತು ನ್ಯಾ. ಎನ್‌.ಕೋಟೀಶ್ವರ್‌ ಸಿಂಗ್‌ ಅವರು ನೋಯ್ಡಾ, ಗುರುಗಾಂವ್‌, ಯಮುನಾ ಎಕ್ಸ್‌ಪ್ರೆಸ್‌ವೇ, ಗ್ರೇಟರ್‌ ನೋಯ್ಡಾ, ಮೊಹಾಲಿ, ಮುಂಬೈ, ಕೊಲ್ಕತಾ ಮತ್ತು ಅಲಹಾಬಾದ್‌ನಲ್ಲಿ ಪ್ರಮುಖ ಬ್ಯಾಂಕುಗಳು ಮತ್ತು ಬಿಲ್ಡರ್‌ಗಳ ನಡುವೆ ಅಕ್ರಮ ಲಿಂಕ್‌ ಇರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಏಳು ಪ್ರಾಥಮಿಕ ತನಿಖೆ ದಾಖಲಿಸಿ, ಎಸ್‌ಐಟಿ ರಚಿಸುವಂತೆ ಸಿಬಿಐಗೆ ನಿರ್ದೇಶನ ನೀಡಿದೆ.

ಅಕ್ರಮದ ಕುರಿತು ತನಿಖೆ ನಡೆಸಲು ಸಿಬಿಐ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆಗೆ ಉತ್ತರಪ್ರದೇಶ, ಹರ್ಯಾಣ ರಾಜ್ಯಗಳ ಡಿಜಿಪಿಗಳು ಡಿಎಸ್ಪಿಗಳು, ಇನ್ಸ್‌ಪೆಕ್ಟರ್‌ಗಳು, ಕಾನ್ಸ್‌ಟೆಬಲ್‌ಗಳ ಪಟ್ಟಿ ನೀಡುವಂತೆ ಸೂಚಿಸಿದೆ. ತನಿಖೆಯ ಪ್ರಗತಿಯನ್ನು ಪ್ರತಿ ತಿಂಗಳು ಪರಿಶೀಲಿಸುವುದಾಗಿಯೂ ಹೇಳಿದೆ.

ಸಹಾಯಧನ ಯೋಜನೆಯಡಿ ಬ್ಯಾಂಕುಗಳು ನೇರವಾಗಿ ಬಿಲ್ಡರ್‌ಗಳ ಖಾತೆಗೆ ಸಾಲದ ಹಣ ಹಾಕುತ್ತಿದ್ದು, ಬಿಲ್ಡರ್‌ಗಳು ಹಣ ಪಾವತಿಸಲು ವಿಫಲರಾದಾಗ ಗ್ರಾಹಕರಿಂದ ಇಎಂಐ ವಸೂಲಿ ಮಾಡಲಾಗುತ್ತಿತ್ತು. ಈ ಮೂಲಕ ಮನೆ ಕೈಸೇರದಿದ್ದರೂ ಬ್ಯಾಂಕುಗಳು ಗ್ರಾಹಕರಿಂದ ಶೇ.60ರಿಂದ 70ರಷ್ಟು ಸಾಲ ವಸೂಲಿ ಮಾಡಿವೆ ಎಂದು ಆರೋಪಿಸಲಾಗಿದೆ.