ದೀಪಾವಳಿಗೆ ದೆಹಲಿ, ಎನ್‌ಸಿಆರ್‌ನಲ್ಲಿ ಹಸಿರು ಪಟಾಕಿ ಸಿಡಿಸಲು ಅನುಮತಿ

| N/A | Published : Oct 16 2025, 02:00 AM IST

ದೀಪಾವಳಿಗೆ ದೆಹಲಿ, ಎನ್‌ಸಿಆರ್‌ನಲ್ಲಿ ಹಸಿರು ಪಟಾಕಿ ಸಿಡಿಸಲು ಅನುಮತಿ
Share this Article
  • FB
  • TW
  • Linkdin
  • Email

ಸಾರಾಂಶ

ದೀಪಾವಳಿಗೂ ಮುನ್ನ ದೆಹಲಿ ಮತ್ತು ಎನ್‌ಸಿಆರ್‌ ಪ್ರದೇಶದ ಪಟಾಕಿ ಪ್ರಿಯರಿಗೆ ಸುಪ್ರೀಂಕೋರ್ಟ್‌ನಿಂದ ಖುಷಿಯ ಸುದ್ದಿಯೊಂದು ಹೊರಬಿದ್ದಿದೆ. ದೀಪಾವಳಿ ಅವಧಿಯಲ್ಲಿ ದೆಹಲಿ ಮತ್ತು ಎನ್‌ಸಿಆರ್‌ ಪ್ರದೇಶದಲ್ಲಿ ಹಸಿರುಪಟಾಕಿಗೆ ಸುಪ್ರೀಂ ಕೋರ್ಟ್‌ ಬುಧವಾರ ಷರತ್ತುಬದ್ಧ ಅನುಮತಿ ನೀಡಿದೆ.

ನವದೆಹಲಿ: ದೀಪಾವಳಿಗೂ ಮುನ್ನ ದೆಹಲಿ ಮತ್ತು ಎನ್‌ಸಿಆರ್‌ ಪ್ರದೇಶದ ಪಟಾಕಿ ಪ್ರಿಯರಿಗೆ ಸುಪ್ರೀಂಕೋರ್ಟ್‌ನಿಂದ ಖುಷಿಯ ಸುದ್ದಿಯೊಂದು ಹೊರಬಿದ್ದಿದೆ. ದೀಪಾವಳಿ ಅವಧಿಯಲ್ಲಿ ದೆಹಲಿ ಮತ್ತು ಎನ್‌ಸಿಆರ್‌ ಪ್ರದೇಶದಲ್ಲಿ ಹಸಿರುಪಟಾಕಿಗೆ ಸುಪ್ರೀಂ ಕೋರ್ಟ್‌ ಬುಧವಾರ ಷರತ್ತುಬದ್ಧ ಅನುಮತಿ ನೀಡಿದೆ.

ದೀಪಾವಳಿಗೂ ಒಂದು ದಿನ ಮೊದಲು ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಸಿರುಪಟಾಕಿ ಬಿಡಲು ನಿರ್ದಿಷ್ಟ ಕಾಲಮಿತಿ ನಿರ್ಧರಿಸಿ ಅವಕಾಶ ನೀಡಲಾಗುತ್ತದೆ. ಆದರೆ, ಹಸಿರುಪಟಾಕಿಯ ಮಾರಾಟಕ್ಕೆ ಅ.18ರಿಂದ 21ರ ವರೆಗೆ ಅವಕಾಶವಿರಲಿದೆ ಎಂದು ಪೀಠ ತಿಳಿಸಿದೆ.

ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ಜಂಟಿ ಮನವಿಯನ್ನು ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾ.ಕೆ.ವಿನೋದ್‌ ಚಂದ್ರನ್‌ ಅವರು ಹಸಿರು ಪಟಾಕಿಗಿದ್ದ ನಿರ್ಬಂಧ ಸಡಿಲಗೊಳಿಸಿದರು.

ಹಸಿರು ಪಟಾಕಿಗೆ ಅನುಮತಿ ನೀಡುವ ವಿಚಾರದಲ್ಲಿ ಪರಿಸರದ ವಿಚಾರದಲ್ಲಿ ರಾಜೀಮಾಡಿಕೊಳ್ಳದೆ ಸಮತೋಲಿತ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಅ.18ರಿಂದ 21ರ ವರೆಗೆ ಹಸಿರುಪಟಾಕಿ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಪೊಲೀಸರು ಪಟಾಕಿ ಮಾರಾಟ ಮೇಲೆ ಕಣ್ಣಿಡಲು ಗಸ್ತುತಂಡವನ್ನು ನಿಯೋಜಿಸಬೇಕು. ಕೇವಲ ಅನುಮತಿ ಪಡೆದ ಹಾಗೂ ಕ್ಯೂಆರ್‌ ಕೋಡ್‌ಗಳನ್ನು ಹೊಂದಿರುವ ಉತ್ಪನ್ನಗಳನ್ನಷ್ಟೇ ಮಾರಾಟವಾಗುವಂತೆ ನೋಡಿಕೊಳ್ಳಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ನೋಟಿಸ್‌ ಜಾರಿಗೊಳಿಸಬೇಕು. ಬೆಳಗ್ಗೆ 6ರಿಂದ 7 ಮತ್ತು ರಾತ್ರಿ 8ರಿಂದ 10 ಗಂಟೆವರೆಗೆ ದೀಪಾವಳಿಗೆ ಒಂದು ದಿನ ಮೊದಲು ಮತ್ತು ದೀಪಾವಳಿ ದಿನ ಪಟಾಕಿ ಸಿಡಿಸಲು ಅನುಮತಿ ನೀಡಲಾಗಿದೆ ಎಂದು ಮುಖ್ಯನ್ಯಾಯಮೂರ್ತಿ ಆದೇಶದಲ್ಲಿ ತಿಳಿಸಿದರು.

ಆದರೆ, ಇ-ಕಾಮರ್ಸ್‌ ಮೂಲಕ ಪಟಾಕಿಗಳ ಮಾರಾಟಕ್ಕೆ ಅವಕಾಶ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ, ಈ ಹಿಂದೆ ಪಟಾಕಿಗಳಿಗೆ ಸಂಪೂರ್ಣ ನಿರ್ಬಂಧ ಹೇರಿದ್ದರಿಂದ ಪರಿಸರಕ್ಕೆ ಭಾರೀ ಹೊಗೆಬಿಡುವ ಪಟಾಕಿಗಳ ಕಳ್ಳಸಾಗಣೆಗೆ ದಾರಿ ಮಾಡಿಕೊಟ್ಟಿತ್ತು. ಇದರಿಂದ ಪರಿಸರಕ್ಕೆ ಹೆಚ್ಚಿನ ಹಾನಿಯಾಗಿತ್ತು. ಇದನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

2018ರಲ್ಲಿ ಸುಪ್ರೀಂ ಕೋರ್ಟ್‌ ಪಟಾಕಿಗಳಿಗೆ ಸಂಬಂಧಿಸಿದ ನೀಡಿದ ತೀರ್ಪು ಹಸಿರುಪಟಾಕಿಗಳ ಬಳಕೆಗೆ ದಾರಿ ಮಾಡಿಕೊಟ್ಟಿತು.

ಇದು ಪರಿಸರ ಪ್ರಿಯ ಪಟಾಕಿಗಳಾಗಿದ್ದು, ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್‌ ಸಂಶೋಧನೆ ಸಂಸ್ಥೆಯ ನೆರವಿನೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಕಳೆದ ಆರು ವರ್ಷಗಳಿಂದ ಹಸಿರುಪಟಾಕಿಗಳಿಂದಾಗಿ ಪರಿಸರದ ಮೇಲೆ ಆಗುವ ಪರಿಣಾಮ ತೀವ್ರ ಕಡಿಮೆಯಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Read more Articles on