ಸಾರಾಂಶ
ನವದೆಹಲಿ: ಉದ್ಯಮಿ ಗೌತಮ್ ಅದಾನಿ ಒಡೆತನದ ಅದಾನಿ ಸಮೂಹದ ವಿರುದ್ಧ ಅಮೆರಿಕದ ಹಿಂಡನ್‌ಬರ್ಗ್ ಸಂಸ್ಥೆ ಮಾಡಿದ್ದ ಅವ್ಯವಹಾರ ಆರೋಪದ ಕುರಿತ ತನಿಖೆಯನ್ನು ಸೆಬಿಯಿಂದ ಎಸ್‌ಟಿಐಗೆ ಅಥವಾ ಸಿಬಿಐಗೆ ವರ್ಗಾಯಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಅಲ್ಲದೆ ಅದಾನಿ ಸಮೂಹದ ವಿರುದ್ಧದ ತನಿಖೆ ನಡೆಸಲು ‘ಸೆಬಿ’ಯೇ ಸಮರ್ಥವಾಗಿದೆ. 24 ಪ್ರಕರಣಗಳ ಪೈಕಿ ಬಾಕಿ ಇರುವ 2 ಪ್ರಕರಣಗಳ ತನಿಖೆಯನ್ನು ಇನ್ನು 3 ತಿಂಗಳಲ್ಲಿ ಸೆಬಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ. ಇದರೊಂದಿಗೆ ಗಂಭೀರ ಆರೋಪ ಎದುರಿಸುತ್ತಿರುವ ಅದಾನಿ ಸಮೂಹಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದೆ.
ನ್ಯಾಯಾಲಯದ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿರುವ ಗೌತಮ್ ಅದಾನಿ, ’ಸತ್ಯಮೇವ ಜಯತೆ’ ಎಂದಿದ್ದಾರೆ.ಕೋರ್ಟ್ ಹೇಳಿದ್ದೇನು?:
ಅದಾನಿ ಷೇರುಪೇಟೆ ಹಾಗೂ ಉದ್ಯಮದಲ್ಲಿ ಅಕ್ರಮ ಎಸಗಿದ್ದಾರೆ ಎಂದು ಅಮೆರಿಕದ ಹಿಂಡನ್‌ಬರ್ಗ್ ಸಂಸ್ಥೆ ಆರೋಪಿಸಿತ್ತು. ಈ ಬಗ್ಗೆ ಷೇರುಪೇಟೆ ನಿಯಂತ್ರಣ ಪ್ರಾಧಿಕಾರವಾದ ‘ಸೆಬಿ’ ತನಿಖೆ ನಡೆಸುತ್ತಿದೆ. ಆದರೆ ಸೆಬಿ ಬದಲು ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಥವಾ ಸಿಬಿಐ ತನಿಖೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಸೇರಿ ಅನೇಕರು ಜನರು ಅರ್ಜಿಗಳನ್ನು ಸಲ್ಲಿಸಿದ್ದರು.ಈ ಬಗ್ಗೆ ಆದೇಶ ಪ್ರಕಟಿಸಿದ ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ. ಚಂದ್ರಚೂಡ ನೇತೃತ್ವದ ತ್ರಿಸದಸ್ಯ ಪೀಠ, ‘ಸೆಬಿಗೆ ಇರುವ ನೀತಿ ಅಧಿಕಾರ ವ್ಯಾಪ್ತಿಯಲ್ಲಿ ತಾನು ಮೂಗು ತೂರಿಸುವುದು ಸರಿಯಲ್ಲ. ಪ್ರಕರಣದ ಅಂಶಗಳು ತನಿಖೆಯನ್ನು ಸೆಬಿಯಿಂದ ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸುವ ಅವಶ್ಯಕತೆಯನ್ನು ಪ್ರತಿಪಾದಿಸುತ್ತಿಲ್ಲ’ ಎಂದು ಹೇಳಿತು.
‘ಅದಾನಿ ಸಮೂಹದ ಮೇಲೆ ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್ ಮಾಡಿದ್ದ 24 ಆರೋಪಗಳ ಪೈಕಿ 22ರಲ್ಲಿ ತನಿಖೆ ಪೂರ್ಣಗೊಳಿಸಿದೆ. 2 ಪ್ರಕರಣದ ತನಿಖೆ ಮಾತ್ರ ಬಾಕಿ ಇದೆ. 24 ಪ್ರಕರಣಗಳ ತನಿಖಾ ಸ್ಥಿತಿಗತಿ ವರದಿ ಗಮನಿಸಿದಾಗ ಸೆಬಿ ತನಿಖೆ ಸೂಕ್ತ ದಿಶೆಯ್ಲಿ ಸಾಗಿದೆ ಎನ್ನಿಸುತ್ತಿದೆ. ಇದರ ಜೊತೆಗೆ ಸೆಬಿ ಪರವಾಗಿ ಸಾಲಿಸಿಟರಲ್ ಜನರಲ್ ಕೂಡಾ ಭರವಸೆ ನೀಡಿದ್ದಾರೆ. ಹೀಗಾಗಿ ಉಳಿದ 2 ಪ್ರಕರಣಗಳ ತನಿಖೆಯನ್ನು ಸಾಧ್ಯವಾದಲ್ಲಿ 3 ತಿಂಗಳಲ್ಲಿ ಕಾನೂನಿಗೆ ಅನ್ವಯವಾಗಿ ಪೂರ್ಣಗೊಳಿಸಿ ತಾರ್ಕಿಕ ಅಂತ್ಯ ಮುಟ್ಟಿಸಬೇಕು’ ಎಂದು ಸೂಚಿಸಿತು.ಜೊತೆಗೆ ಪ್ರಕರಣದ ತನಿಖೆಯಲ್ಲಿ ಸೆಬಿ ನಿರ್ಲಕ್ಷ್ಯ ತೋರಿದೆ ಎಂಬುದಕ್ಕೆ ಅರ್ಜಿದಾರರು ಸಲ್ಲಿಸಿದ್ದ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ (ಒಸಿಸಿಆರ್‌ಪಿ)ಯನ್ನು ಪರಿಗಣಿಸಲು ನ್ಯಾಯಾಲಯ ನಿರಾಕರಿಸಿತು. ಆರೋಪಗಳ ಸಾಚಾತನವನ್ನು ಒರೆಗೆ ಹಚ್ಚದೇ ಮೂರನೇ ಸಂಘಟನೆಯೊಂದು ಸಿದ್ಧಪಡಿಸಿದ ವರದಿಯನ್ನು ಪ್ರಕರಣದಲ್ಲಿ ನಿರ್ಣಾಯಕ ಸಾಕ್ಷ್ಯ ಎಂದು ಪರಿಗಣಿಸಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.‘ಹೀಗಾಗಿ ಪ್ರಕರಣದಲ್ಲಿ ಲಭ್ಯವಿರುವ ಅಂಶಗಳನ್ನು ಪರಿಗಣಿಸಿದಾಗ ತನಿಖೆಯನ್ನು ಸೆಬಿಯಿಂದ ಎಸ್‌ಐಟಿಗೆ ಅಥವಾ ಸಿಬಿಐಗೆ ವರ್ಗಾಯಿಸುವ ಅವಶ್ಯಕತೆ ಕಂಡುಬರುತ್ತಿಲ್ಲ. ಅರ್ಹ ಸಂಸ್ಥೆಯೊಂದು ಸೂಕ್ತ ರೀತಿಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವಾಗ ಅದನ್ನು ಎಸ್‌ಐಟಿಗೆ ವರ್ಗಾಯಿಸುವ ಅಧಿಕಾರವನ್ನು ನ್ಯಾಯಾಲಯ ಹೊಂದಿಲ್ಲ’ ಎಂದಿತು.ಜೊತೆಗೆ ಪ್ರಕರಣದ ತನಿಖೆ ನ್ಯಾಯಾಲಯ ನೇಮಿಸಿರುವ ಸಮಿತಿಯ ಕೆಲ ಸದಸ್ಯರು ಹಿತಾಸಕ್ತಿಯ ವೈರುದ್ಧ್ಯ ಹೊಂದಿದ್ದಾರೆ ಎಂಬ ಕೆಲ ಅರ್ಜಿದಾರರ ವಾದವನ್ನು ನ್ಯಾಯಾಲಯ ತಳ್ಳಿಹಾಕಿತು.
ಷೇರು ಏರಿಕೆ:ಅದಾನಿ ಸಮೂಹದ ವಿರುದ್ಧ ಎಸ್‌ಐಟಿ ಅಥವಾ ಸಿಬಿಐ ತನಿಖೆ ಆಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಅದಾನಿ ಕಂಪನಿಯ ಷೇರುಗಳು ಸರಾಸರಿ ಶೇ.10ರಷ್ಟು ಏರಿಕೆಯಾಗಿವೆ.
ಏನಿದು ಪ್ರಕರಣ?ಅಮೆರಿಕದ ಹಿಂಡನ್‌ಬರ್ಗ್ ಸಮೂಹವು ಕಳೆದ ವರ್ಷ ಅದಾನಿ ಸಮೂಹವು ಷೇರುಪೇಟೆಯಲ್ಲಿ ಹಾಗೂ ಉದ್ಯಮದಲ್ಲಿ ಮೋಸಮಾರ್ಗದಲ್ಲಿ ಹಣ ಗಳಿಸುತ್ತಿದೆ. ಕೃತಕವಾಗಿ ಷೇರು ಬೆಲೆಗಳನ್ನು ಏರಿಳಿಸಿ ಲಾಭ ಮಾಡಿಕೊಳ್ಳುತ್ತಿದೆ ಎಂದು ಆರೋಪ ಮಾಡಿತ್ತು. ಆದರೆ ಈ ಆರೋಪಗಳನ್ನು ಕಂಪನಿ ಸ್ಪಷ್ಟವಾಗಿ ತಳ್ಳಿಹಾಕಿತ್ತು. ಬಳಿಕ ಆರೋಪದ ಬಗ್ಗೆ ಸೆಬಿಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಸೂಚಿಸಿತ್ತು. ಅಲ್ಲದೆ, ಕೋರ್ಟು, ನಿವೃತ್ತ ನ್ಯಾ। ಎ.ಎಂ.ಸಪ್ರೆ ನೇತೃತ್ವದ ತಜ್ಞರ ಸಮಿತಿ ರಚಿಸಿ ಷೇರುಪೇಟೆಯ ವ್ಯವಹಾರಗಳ ತನಿಖೆಗೆ ಆದೇಶಿಸಿತ್ತು. ಈ ಸಮಿತಿ ಕಳೆದ ಮೇನಲ್ಲಿ ನೀಡಿದ್ದ ಮಧ್ಯಂತರ ವರದಿಯಲ್ಲಿ ಹಿಂಡನ್‌ಬರ್ಗ್ ಸಮೂಹ ಮಾಡಿದ್ದ ಆರೋಪ ಸಾಬೀತುಪಡಿಸುವ ಯಾವುದೇ ಅಂಶಗಳೂ ಕಂಡುಬಂದಿಲ್ಲ ಎಂದು ಕ್ಲೀನ್‌ಚಿಟ್ ನೀಡಿತ್ತು. ಮತ್ತೊಂದೆಡೆ ಸೆಬಿ ತನಿಖೆ ಮುಂದುವರಿದಿತ್ತು.ಸತ್ಯಮೇವ ಜಯತೆ
ಸತ್ಯ ಮೇಲುಗೈ ಸಾಧಿಸಿದೆ. ಸತ್ಯಮೇವ ಜಯತೇ. ಈ ಹಂತದಲ್ಲಿ ನಮ್ಮ ಜೊತೆಗೆ ಬೆನ್ನಲುಬಾಗಿ ನಿಂತವರಿಗೆ ನಾವು ಧನ್ಯವಾದ ಸಲ್ಲಿಸುತ್ತೇವೆ. ನಾವು ಭಾರತದ ಅಭಿವೃದ್ಧಿಗೆ ನಮ್ಮ ಕಾಣಿಕೆಯನ್ನು ನೀಡುವುದನ್ನು ಮುಂದುವರೆಸುತ್ತೇವೆ. ಜೈ ಹಿಂದ್.- ಗೌತಮ್ ಅದಾನಿ, ಉದ್ಯಮಿ