ಸಾರಾಂಶ
ನವದೆಹಲಿ : ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಕೋಟಾಗಳನ್ನು ಶೇ.50 ರಿಂದ ಶೇ.65ಕ್ಕೆ ಹೆಚ್ಚಿಸಲು ಬಿಹಾರದ ನಿತೀಶ್ ಕುಮಾರ್ ಸರ್ಕಾರ ಕೈಗೊಂಡಿದ್ದ ನಿರ್ಧಾರವನ್ನು ರದ್ದು ಮಾಡಿದ್ದ ಪಟನಾ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಇದರಿಂದ ಬಿಹಾರ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ಮುಖ್ಯ ನ್ಯಾ। ಡಿವೈ ಚಂದ್ರಚೂಡ್ ಮತ್ತು ನ್ಯಾ। ಜೆ.ಬಿ. ಪರ್ದಿವಾಲಾ ಮತ್ತು ನ್ಯಾ। ಮನೋಜ್ ಮಿಶ್ರಾ ಅವರಿದ್ದ ಪೀಠವು ತಡೆ ನೀಡಲು ಮತ್ತು ಸಂಬಂಧಿಸಿದವರಿಗೆ ನೋಟಿಸ್ ಕೊಡಲು ನಿರಾಕರಿಸಿತು. ಆದರೆ ಹೈಕೋರ್ಟ್ ತೀರ್ಪಿನ ವಿರುದ್ಧ ಬಿಹಾರ ಸರ್ಕಾರ ಸಲ್ಲಿಸಿರುವ 10 ಅರ್ಜಿಗಳನ್ನು ಆಲಿಸಲು ಒಪ್ಪಿತು ಮತ್ತು ಸೆಪ್ಟೆಂಬರ್‌ನಲ್ಲಿ ಅರ್ಜಿಗಳ ವಿಚಾರಣೆ ನಡೆಸುವುದಾಗಿ ಹೇಳಿತು.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, ‘ಛತ್ತೀಸ್‌ಗಢದ ಇದೇ ರೀತಿಯ ಪ್ರಕರಣದಲ್ಲಿ ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಬಿಹಾರ ವಿಚಾರದಲ್ಲೂ ತಡೆ ನೀಡಬೇಕು’ ಎಂದು ಕೇಳಿದರು. ಆದರೆ ಇದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿತು.ಕಳೆದ ವರ್ಷ ನವೆಂಬರ್‌ನಲ್ಲಿ ರಾಜ್ಯದ ಉಭಯ ಸದನಗಳು ಮೀಸಲನ್ನು ಶೇ.50ರಿಂದ 65ಕ್ಕೆ ಹೆಚ್ಚಿಸಲು ಸರ್ವಾನುಮತದಿಂದ ತಿದ್ದುಪಡಿ ಕಾಯ್ದೆ ಅಂಗೀಕರಿಸಿದ್ದವು. ಆದರೆ, ‘ಮೀಸಲು ಹೆಚ್ಚಳವು ಸಂವಿಧಾನಕ್ಕೆ ಮಾರಕ. ಅಲ್ಟ್ರಾ ವೈರಸ್ ಇದ್ದ ಹಾಗೆ. ಸಮಾನತೆಯ ಹಕ್ಕಿನ ಉಲ್ಲಂಘನೆ’ ಎಂದಿದ್ದ ಹೈಕೋರ್ಟ್, ಜೂ.20ರಂದು ಶೇ.65 ಮೀಸಲನ್ನು ರದ್ದು ಮಾಡಿತ್ತು.