ಬ್ಯಾಲಟ್‌ ಪತ್ರ ಮರುಜಾರಿ ಇಲ್ಲ: ಸುಪ್ರೀಂ

| Published : Apr 27 2024, 01:25 AM IST / Updated: Apr 27 2024, 05:08 AM IST

ಸಾರಾಂಶ

ದೇಶದ ಚುನಾವಣೆ ವ್ಯವಸ್ಥೆ ಬಗ್ಗೆ ಹಲವು ಅನುಮಾನಗಳು ಹಾಗೂ ಮರಳಿ ಬ್ಯಾಲೆಟ್‌ ಕಾಗದಗಳನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿ ದೇಶದ ಮತಯಂತ್ರಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದ್ದ ಅರ್ಜಿಗಳನ್ನು ಶುಕ್ರವಾರ ದೇಶದ ಸರ್ವೋಚ್ಚ ನ್ಯಾಯಾಲಯ ಸಾರಾಸಗಟಾಗಿ ತಿರಸ್ಕರಿಸಿದೆ.

 ನವದೆಹಲಿ :  ಮಹತ್ವದ ಬೆಳವಣಿಗೆಯೊಂದರಲ್ಲಿ ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ (ಇವಿಎಂ)ನಲ್ಲಿ ಚಲಾವಣೆಯಾದ ಮತಗಳು ಹಾಗೂ ವೋಟರ್‌ ವೆರಿಫೈಯೆಬಲ್‌ ಪೇಪರ್‌ ಆಡಿಟ್‌ ಟ್ರೇಲ್‌ (ವಿವಿಪ್ಯಾಟ್‌)ನ ಎಲ್ಲಾ ಸ್ಲಿಪ್‌ಗಳನ್ನು ಎಣಿಸಿ ತಾಳೆ ಹಾಕಿದ ಬಳಿಕವೇ ಫಲಿತಾಂಶ ಘೋಷಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ. ಅಲ್ಲದೆ, ದೇಶದಲ್ಲಿ ಮತ್ತೆ ಬ್ಯಾಲಟ್‌ ಪೇಪರ್‌ (ಹಳೆಯ ಮತಪೆಟ್ಟಿಗೆ ವ್ಯವಸ್ಥೆ) ಮತದಾನ ವ್ಯವಸ್ಥೆ ಜಾರಿಗೊಳಿಸಬೇಕು ಎಂಬ ಅರ್ಜಿಯನ್ನೂ ತಿರಸ್ಕರಿಸಿದೆ.

‘ವ್ಯವಸ್ಥೆಯ ಯಾವುದೇ ಭಾಗವನ್ನು ಕುರುಡಾಗಿ ಶಂಕಿಸುವುದು ಅನಗತ್ಯ ಸಿನಿಕತೆಗೆ ದಾರಿ ಮಾಡಿಕೊಡುತ್ತದೆ. ಪ್ರಜಾಪ್ರಭುತ್ವವೆಂದರೆ ಎಲ್ಲಾ ಸಂಸ್ಥೆಗಳ ನಡುವೆ ನಂಬಿಕೆ ಹಾಗೂ ಸಾಮರಸ್ಯ ಮೂಡಿಸುವುದಕ್ಕೆ ಇರುವ ವ್ಯವಸ್ಥೆ. ಹೀಗಾಗಿ, ದೇಶದಲ್ಲಿ ಮರಳಿ ಪೇಪರ್‌ ಬ್ಯಾಲಟ್‌ ಮತದಾನ ವ್ಯವಸ್ಥೆ ಜಾರಿಗೆ ತರಬೇಕು ಎಂಬುದೂ ಸೇರಿದಂತೆ ಇವಿಎಂ ಬಗ್ಗೆ ಶಂಕೆ ವ್ಯಕ್ತಪಡಿಸಿ ಸಲ್ಲಿಸಿದ್ದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಲಾಗುತ್ತದೆ’ ಎಂದು ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ತೀರ್ಪು ನೀಡಿದೆ.

‘ಅಲ್ಲದೆ, ಇವಿಎಂಗಳನ್ನು ತಿರುಚಲಾಗದು ಎಂಬುದು ನಮಗೆ ಮನವರಿಕೆಯಾಗಿದೆ. 2019ರಲ್ಲಿ ಒಂದು ಘಟನೆ ಬಿಟ್ಟರೆ ಮಿಕ್ಕ ಯಾವ ಪ್ರಕರಣಗಳಲ್ಲೂ ಮತತಾಳೆ ವ್ಯತ್ಯಾಸ ಆಗಿಲ್ಲ’ ಎಂದು ತೀರ್ಪಿನಲ್ಲಿ ಪೀಠ ಹೇಳಿದೆ.

ವಿವಿಪ್ಯಾಟ್‌ ಸ್ಲಿಪ್‌ ಎಣಿಕೆ, ಬ್ಯಾಲೆಟ್‌ ಪೇಪರ್‌ ಮರುಜಾರಿ ಕೋರಿ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಹಾಗೂ ಕೆಲವು ಸಂಘ ಸಂಸ್ಥೆಗಳವರು ಅರ್ಜಿ ಸಲ್ಲಿಸಿದ್ದರು.

ಸುಪ್ರೀಂನಿಂದ 2 ನಿರ್ದೇಶನ:  ಈ ವೇಳೆ ಸುಪ್ರೀಂಕೋರ್ಟ್‌ 2 ನಿರ್ದೇಶನಗಳನ್ನು ನೀಡಿದೆ.

- ಒಂದು, ಇವಿಎಂಗಳಿಗೆ ಚುನಾವಣೆಯ ಚಿಹ್ನೆಗಳನ್ನು ಲೋಡ್‌ ಮಾಡಲು ಬಳಸಿದ ಯುನಿಟ್‌ಗಳನ್ನು ಚುನಾವಣೆಯ ಕೊನೆಯ ಚರಣ ಮುಗಿದ ನಂತರ ಸೀಲ್‌ ಮಾಡಿ 45 ದಿನಗಳ ಕಾಲ ಸ್ಟ್ರಾಂಗ್‌ ರೂಮ್‌ನಲ್ಲಿ ರಕ್ಷಿಸಿಡಬೇಕು.

- ಎರಡು, ಮತ ಎಣಿಕೆ ವೇಳೆ ಎರಡು ಮತ್ತು ಮೂರನೇ ಸ್ಥಾನ ಪಡೆದ ಅಭ್ಯರ್ಥಿಗಳು ಕೇಳಿದರೆ ಇವಿಎಂ ತಯಾರಿಸುವ ಎಂಜಿನಿಯರ್‌ಗಳು ಮೈಕ್ರೋಕಂಟ್ರೋಲರ್ ಮಷಿನ್‌ಗಳನ್ನು ತಪಾಸಣೆ ನಡೆಸಬೇಕು.

ಫಲಿತಾಂಶ ಪ್ರಕಟವಾದ ಬಳಿಕ ಏಳು ದಿನದೊಳಗೆ ನಿರ್ದಿಷ್ಟ ಶುಲ್ಕ ಪಾವತಿಸಿ ಮೈಕ್ರೋಕಂಟ್ರೋಲರ್‌ಗಳ ತಪಾಸಣೆಗೆ ಅರ್ಜಿ ಸಲ್ಲಿಸಬಹುದು. ತಪಾಸಣೆ ವೇಳೆ ಇವಿಎಂಗೆ ಹಾನಿಯಾಗಿರುವುದು ಕಂಡುಬಂದರೆ ಅಭ್ಯರ್ಥಿ ಸಲ್ಲಿಸಿದ್ದ ಶುಲ್ಕವನ್ನು ವಾಪಸ್‌ ನೀಡಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಇವಿಎಂನಲ್ಲಿ ಮೂರು ಯುನಿಟ್‌ಗಳಿರುತ್ತವೆ - ಬ್ಯಾಲೆಟ್‌ ಯುನಿಟ್‌, ಕಂಟ್ರೋಲ್‌ ಯುನಿಟ್‌ ಹಾಗೂ ವಿವಿಪ್ಯಾಟ್‌. ಈ ಮೂರನ್ನೂ ಮೈಕ್ರೋಕಂಟ್ರೋಲರ್‌ಗೆ ಜೋಡಿಸಿರುತ್ತಾರೆ. ಈ ಮೈಕ್ರೋಕಂಟ್ರೋಲ್‌ ಯಂತ್ರವನ್ನು ತಪಾಸಣೆಗೆ ಒಳಪಡಿಸುವ ಆಯ್ಕೆಯನ್ನು ಅಭ್ಯರ್ಥಿಗಳಿಗೆ ನೀಡಬೇಕು ಎಂದು ಸುಪ್ರೀಂಕೋರ್ಟ್‌ ಸೂಚಿಸಿದೆ.

ಸದ್ಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಐದು ಯಾದೃಚ್ಛಿಕ (ರ್‍ಯಾಂಡಂ) ಇವಿಎಂಗಳ ಮತವನ್ನು ವಿವಿಪ್ಯಾಟ್‌ ಸ್ಲಿಪ್‌ಗಳ ಜೊತೆ ತಾಳೆ ಹಾಕಿ ನೋಡಲಾಗುತ್ತದೆ. ಎಲ್ಲಾ ಇವಿಎಂಗಳನ್ನೂ ವಿವಿಪ್ಯಾಟ್‌ ಸ್ಲಿಪ್‌ ಜೊತೆ ತಾಳೆ ಹಾಕಿ ಫಲಿತಾಂಶ ಪ್ರಕಟಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಅದನ್ನು ಕೋರ್ಟ್‌ ತಿರಸ್ಕರಿಸಿದೆ.

ಇದೇ ವೇಳೆ, ವಿವಿಪ್ಯಾಟ್‌ ಸ್ಲಿಪ್‌ಗಳನ್ನು ಎಣಿಸಲು ಯಾವುದಾದರೂ ಯಂತ್ರ ಬಳಸಬಹುದೇ? ಮತ್ತು ರಾಜಕೀಯ ಪಕ್ಷಗಳಿಗೆ ಚಿಹ್ನೆಯ ಜೊತೆ ಬಾರ್‌ಕೋಡ್‌ ನೀಡಬಹುದೇ ಎಂದೂ ಚುನಾವಣಾ ಆಯೋಗವನ್ನು ಸುಪ್ರೀಂಕೋರ್ಟ್‌ ಪೀಠ ಕೇಳಿದೆ.