ಗಂಭೀರ ಪ್ರಕರಣದ ಆರೋಪಿಗಳ ಮನೆ ಧ್ವಂಸ ಮಾಡುವ ‘ಬುಲ್ಡೋಜರ್ ನ್ಯಾಯ’ಕ್ಕೆ ಸುಪ್ರೀಂ ಕೋರ್ಟ್‌ ತೀವ್ರ ಆಕ್ಷೇಪ

| Published : Sep 03 2024, 01:41 AM IST / Updated: Sep 03 2024, 04:28 AM IST

ಗಂಭೀರ ಪ್ರಕರಣದ ಆರೋಪಿಗಳ ಮನೆ ಧ್ವಂಸ ಮಾಡುವ ‘ಬುಲ್ಡೋಜರ್ ನ್ಯಾಯ’ಕ್ಕೆ ಸುಪ್ರೀಂ ಕೋರ್ಟ್‌ ತೀವ್ರ ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯಾಗಿರುವ ಕಾರಣಕ್ಕೆ ಮನೆ ಧ್ವಂಸ ಮಾಡುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಈ ರೀತಿಯ ಕ್ರಮ ಕೈಗೊಳ್ಳುವ ಮುನ್ನ ನಿಯಮಗಳನ್ನು ಪಾಲಿಸಬೇಕು ಮತ್ತು ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಸೂಚಿಸಿದೆ.

ನವದೆಹಲಿ: ಗಂಭೀರ ಪ್ರಕರಣದ ಆರೋಪಿಗಳ ಮನೆಗೆ ಬುಲ್ಡೋಜರ್‌ ನುಗ್ಗಿಸಿ ಧ್ವಂಸ ಮಾಡುವ ಕೆಲವೊಂದು ರಾಜ್ಯ ಸರ್ಕಾರಗಳ ‘ಬುಲ್ಡೋಜರ್‌ ನ್ಯಾಯ’ ನೀತಿಗೆ ಸುಪ್ರೀಂಕೋರ್ಟ್‌ ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕ್ರಿಮಿನಲ್‌ ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಆರೋಪಿಯಾಗಿದ್ದಾನೆ ಎಂದು ಆತನ ಮನೆಯನ್ನು ಹೇಗೆ ಒಡೆಯಲಾದೀತು? ಒಂದು ವೇಳೆ, ಆತ/ಆಕೆ ಅಪರಾಧಿಯೇ ಆಗಿದ್ದರೂ ಮನೆ ಧ್ವಂಸಕ್ಕೂ ಮುನ್ನ ನಿಯಮ ಪಾಲಿಸಬೇಕು ಎಂದು ಹೇಳಿದೆ.

ಇದೇ ವೇಳೆ, ತಾನು ಯಾವುದೇ ಅನಧಿಕೃತ ಕಟ್ಟಡಗಳಿಗೆ ರಕ್ಷಣೆ ಒದಗಿಸುವುದಿಲ್ಲ. ಕಟ್ಟಡ ಧ್ವಂಸ ವಿಚಾರವಾಗಿ ಮಾರ್ಗಸೂಚಿ ತರುವುದಾಗಿ ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಹಾಗೂ ಕೆ.ವಿ.ವಿಶ್ವನಾಥನ್‌ ಅವರಿದ್ದ ಪೀಠ ಹೇಳಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಷ್ಯಂತ್‌ ದವೆ, ದೇಶಾದ್ಯಂತ ಬುಲ್ಡೋಜರ್‌ ನ್ಯಾಯವನ್ನು ಪಾಲಿಸಲಾಗುತ್ತಿದೆ. ಈ ಸಂಬಂಧ ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಕೋರಿದರು.

ಇದೇ ವೇಳೆ, ವಾದಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾದ ಕಾರಣ ಪ್ರಕರಣದ ಆರೋಪಿಯ ಯಾವುದೇ ಸ್ಥಿರಾಸ್ತಿಯನ್ನು ನೆಲಸಮಗೊಳಿಸಲು ಆಗದು. ಆ ಕಟ್ಟಡ ಅಕ್ರಮವಾಗಿದ್ದರೆ ಮಾತ್ರ ಆ ರೀತಿ ಕಾರ್ಯಾಚರಣೆ ನಡೆಸಬಹುದು. ಆದರೆ ಈ ಪ್ರಕರಣದಲ್ಲಿ ವಾಸ್ತವಾಂಶವನ್ನು ತಿರುಚಲಾಗಿದೆ ಎಂದರು.

ಅಕ್ರಮ ಕಟ್ಟಡವಾಗಿದ್ದರೆ, ಪರವಾಗಿಲ್ಲ. ಆದರೆ ಈ ವಿಚಾರವನ್ನು ಮತ್ತಷ್ಟು ಸರಳಗೊಳಿಸಬೇಕಿದೆ. ಹೀಗಾಗಿ ಮಾರ್ಗಸೂಚಿಗಳನ್ನು ರೂಪಿಸಬೇಕಾಗಿದೆ. ಮುನಿಸಿಪಲ್‌ ಕಾಯ್ದೆಗಳನ್ನು ಉಲ್ಲಂಘಿಸಿದರೆ ಮಾತ್ರ ಕಟ್ಟಡ ನೆಲಸಮ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದೀರಿ. ಆದರೆ ಆ ಸಂಬಂಧ ಮಾರ್ಗಸೂಚಿ ಬೇಕಾಗಿದೆ ಎಂದು ನ್ಯಾಯಪೀಠ ಹೇಳಿತು.

ಈ ರೀತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗುವುದನ್ನು ತಪ್ಪಿಸಲು, ಅಕ್ರಮ ಕಟ್ಟಡಗಳಿಗೆ ಮೊದಲು ನೋಟಿಸ್‌ ನೀಡಿ, ಉತ್ತರಿಸಲು ಸಮಯ ಕೊಡಿ. ಕಾನೂನು ಆಯ್ಕೆಗಳನ್ನು ಪರಿಗಣಿಸಲು ಸಮಯ ನೀಡಿ. ಆ ಬಳಿಕವಷ್ಟೇ ನೆಲಸಮ ಮಾಡಿ ಎಂದೂ ಪೀಠ ಹೇಳಿತು.