ಜಾತಿ ಆಧರಿಸಿ ಜೈಲುಗಳಲ್ಲಿ ಕೆಲಸ ಹಂಚಿಕೆ ಹಾಗೂ ಬ್ಯಾರಕ್‌ ಹಂಚಿಕೆ : ಅಸ್ಪೃಶ್ಯತೆಗೆ ಸುಪ್ರೀಂ ಕೆಂಡ

| Published : Oct 04 2024, 01:03 AM IST / Updated: Oct 04 2024, 04:08 AM IST

ಸಾರಾಂಶ

ಜಾತಿ ಆಧರಿಸಿ ಜೈಲುಗಳಲ್ಲಿ ಕೆಲಸ ಹಂಚಿಕೆ ಮಾಡುವ ಹಾಗೂ ಬ್ಯಾರಕ್‌ ಹಂಚಿಕೆ ಮಾಡುವ ಕಾರಾಗೃಹಗಳ ಕೈಪಿಡಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, 11 ರಾಜ್ಯಗಳಲ್ಲಿ ಇದ್ದ ಇಂತಹ ಜೈಲು ಕೈಪಿಡಿಯನ್ನು ಬದಿಗೊತ್ತಿದೆ.

 ನವದೆಹಲಿ : ಜಾತಿ ಆಧರಿಸಿ ಜೈಲುಗಳಲ್ಲಿ ಕೆಲಸ ಹಂಚಿಕೆ ಮಾಡುವ ಹಾಗೂ ಬ್ಯಾರಕ್‌ ಹಂಚಿಕೆ ಮಾಡುವ ಕಾರಾಗೃಹಗಳ ಕೈಪಿಡಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, 11 ರಾಜ್ಯಗಳಲ್ಲಿ ಇದ್ದ ಇಂತಹ ಜೈಲು ಕೈಪಿಡಿಯನ್ನು ಬದಿಗೊತ್ತಿದೆ. ಜೈಲುಗಳಲ್ಲಿ ಜಾತಿ ಆಧರಿತ ತಾರತಮ್ಯ ತೊಡೆದು ಹಾಕಲು ಹಲವಾರು ಕ್ರಮಗಳನ್ನು ಪ್ರಕಟಿಸಿದೆ. ಮುಂದಿನ ಮೂರು ತಿಂಗಳಲ್ಲಿ ರಾಜ್ಯಗಳು ತಮ್ಮ ಕಾರಾಗೃಹ ಕೈಪಿಡಿಯನ್ನು ಪರಿಷ್ಕರಿಸಿ, ಇಂತಹ ಆಚರಣೆಗಳನ್ನು ಕೈಬಿಡಬೇಕು ಎಂದು ತಾಕೀತು ಮಾಡಿದೆ.

ಜೈಲುಗಳಲ್ಲಿ ಜಾತಿ ಆಧರಿಸಿ ಕೆಲಸ, ಬ್ಯಾರಕ್‌ ಹಂಚಿಕೆ ಮಾಡುವುದು ಅಸಾಂವಿಧಾನಿಕ ಎಂದು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಂಡ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠ ಹೇಳಿತು.

ಜೈಲುಗಳಲ್ಲಿ ಕೈದಿಗಳಿಗೆ ಅಮಾನವೀಯವಾಗಿ ಕೆಲಸ ನೀಡಿದರೆ, ಅಮಾನವೀಯವಾಗಿ ನಡೆಸಿಕೊಂಡರೆ ರಾಜ್ಯಗಳನ್ನೇ ಹೊಣೆ ಮಾಡಬೇಕಾಗುತ್ತದೆ. ಕೈದಿಗಳ ನಡುವೆ ತಾರತಮ್ಯ ಇರಬಾರದು. ಜಾತಿ ಆಧರಿಸಿ ಅವರನ್ನು ವಿಂಗಡಣೆ ಮಾಡುವುರಿಂದ ಅವರ ಪುನಾವಸತಿ ಆಗುವುದಿಲ್ಲ. ತುಳಿತಕ್ಕೊಳಗಾದವರಿಗೆ ಸ್ವಚ್ಛತೆ ಹಾಗೂ ಕಸ ಗುಡಿಸುವ ಕೆಲಸವನ್ನು ಹಂಚಿಕೆ ಮಾಡುವುದು, ಸವರ್ಣೀಯರಿಗೆ ಅಡುಗೆ ಕೆಲಸ ನೀಡುವುದು ಜಾತಿ, ಧರ್ಮ ಆಧರಿತ ತಾರತಮ್ಯವನ್ನು ನಿರ್ಬಂಧಿಸುವ ಸಂವಿಧಾನದ 15ನೇ ಪರಿಚ್ಛೇದಕ್ಕೆ ವಿರುದ್ಧವಾದುದು ಎಂದು ನ್ಯಾಯಪೀಠ ತಿಳಿಸಿತು.