ನೀಟ್‌ ರದ್ದು ಕುರಿತ 38 ಅರ್ಜಿ ಇಂದು ಸುಪ್ರೀಂ ವಿಚಾರಣೆ

| Published : Jul 08 2024, 12:36 AM IST / Updated: Jul 08 2024, 05:02 AM IST

ಸಾರಾಂಶ

ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಗಳಿಗೆ ಗುರಿಯಾಗಿರುವ ‘ನೀಟ್‌’ ರದ್ದು ಕೋರಿ ಸಲ್ಲಿಕೆಯಾಗಿರುವ 38 ಅರ್ಜಿಗಳನ್ನು ಸುಪ್ರೀಂಕೋರ್ಟ್‌ ಸೋಮವಾರ ವಿಚಾರಣೆ ನಡೆಸಲಿದೆ.

 ನವದೆಹಲಿ :  ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಗಳಿಗೆ ಗುರಿಯಾಗಿರುವ ‘ನೀಟ್‌’ ರದ್ದು ಕೋರಿ ಸಲ್ಲಿಕೆಯಾಗಿರುವ 38 ಅರ್ಜಿಗಳನ್ನು ಸುಪ್ರೀಂಕೋರ್ಟ್‌ ಸೋಮವಾರ ವಿಚಾರಣೆ ನಡೆಸಲಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದೀವಾಲಾ ಹಾಗೂ ಮನೋಜ್‌ ಮಿಶ್ರಾ ಅವರ ಪೀಠದ ಎದುರು ಅರ್ಜಿಗಳು ವಿಚಾರಣೆಗೆ ಬರಲಿವೆ.

ವ್ಯಾಪಕ ಅಕ್ರಮವಾಗಿರುವ ಕುರಿತು ಯಾವುದೇ ಸಾಕ್ಷ್ಯಗಳಿಲ್ಲ. ಹೀಗಾಗಿ ಇಡೀ ಪರೀಕ್ಷೆಯನ್ನೇ ರದ್ದುಗೊಳಿಸಿದರೆ ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯವೇ ಅಲ್ಲೋಲ ಕಲ್ಲೋಲವಾಗುತ್ತದೆ. ಪರೀಕ್ಷೆ ರದ್ದತಿಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ನೀಟ್‌ ನಡೆಸಿದ್ದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಹಾಗೂ ಕೇಂದ್ರ ಸರ್ಕಾರಗಳು ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿವೆ.

ಎಂಬಿಬಿಎಸ್‌, ಬಿಡಿಎಸ್‌ ಹಾಗೂ ಆಯುಷ್‌ನಂತಹ ಕೋರ್ಸ್‌ಗಳ ಪ್ರವೇಶಕ್ಕಾಗಿ ದೇಶಾದ್ಯಂತ ಮೇ 5ರಂದು ಪರೀಕ್ಷೆ ನಡೆಸಲಾಗಿತ್ತು. ಆದರೆ ಆ ಪರೀಕ್ಷೆಯಲ್ಲಿ ವಿವಿಧೆಡೆ ಅಕ್ರಮಗಳು ನಡೆದಿರುವ ಬಗ್ಗೆ ಆರೋಪ ಕೇಳಿಬಂದು, ಭಾರಿ ವಿವಾದ ಭುಗಿಲೆದ್ದಿತ್ತು.