ಸಾರಾಂಶ
ತಿರುವನಂತಪುರಂ : ಕೇರಳದ ವಯನಾಡಿನಲ್ಲಿ ಭಾರೀ ಗುಡ್ಡ ಕುಸಿತದಿಂದ ನಲುಗಿರುವ ದುರಂತ 4 ಹಳ್ಳಿಗಳ ಸ್ಥಳದ ಅಕ್ಕಪಕ್ಕದಲ್ಲೇ ಸುರಕ್ಷಿತವಾದ ಜಾಗದಲ್ಲಿ ಸಂತ್ರಸ್ತರಿಗಾಗಿ ಹೊಸ ಟೌನ್‌ಶಿಪ್ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಲು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂತ್ರಸ್ತರ ರಕ್ಷಣೆ ಕಾರ್ಯ ಬಹುತೇಕ ಕೊನೆಯ ಹಂತಕ್ಕೆ ಬಂದಿದೆ. ಇನ್ನು ಪುನರ್‌ನಿರ್ಮಾಣದ ಬಗ್ಗೆ ಗಮನ ಹರಿಸುತ್ತೇವೆ. ಸಂತ್ರಸ್ತರಿಗೆ ಪರಿಹಾರ ಪ್ಯಾಕೇಜ್ ರೂಪಿಸಲಾಗುತ್ತಿದೆ. ಮನೆ ಕಳೆದುಕೊಂಡವರಿಗಾಗಿ ಸುಸಜ್ಜಿತ ಟೌನ್‌ಶಿಪ್ ನಿರ್ಮಾಣ ಮಾಡುತ್ತೇವೆ. ಸಾಧ್ಯವಾದಷ್ಟು ಬೇಗ ಅದರ ಕಾಮಗಾರಿ ಪೂರ್ಣಗೊಳಿಸುತ್ತೇವೆ’ ಎಂದು ಹೇಳಿದರು.
ಜಗತ್ತಿನ ನಾನಾ ಭಾಗಗಳಿಂದ ವಯನಾಡು ಸಂತ್ರಸ್ತರಿಗಾಗಿ ಮುಖ್ಯಮಂತ್ರಿಗಳ ನಿಧಿಗೆ ನೆರವು ಹರಿದುಬರುತ್ತಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಲಾ 100 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಶೋಭಾ ರಿಯಲ್ ಎಸ್ಟೇಟ್ ಕಂಪನಿ 50 ಮನೆ, ವಿಶ್ವ ಮಲಯಾಳಿ ಮಂಡಳಿ 14 ಮನೆ, ಕೋಟಕ್ಕಲ್ ಆರ್ಯವೈದ್ಯಶಾಲಾದವರು 10 ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದಾರೆ. ಜನರು ದೇಣಿಗೆ ನೀಡುವುದಕ್ಕೆ ಹೊಸ ವೆಬ್‌ಸೈಟ್ ಕೂಡ ರೂಪಿಸಲಾಗಿದೆ ಎಂದು ತಿಳಿಸಿದರು.
‘ಶಿಕ್ಷಣ ಸಚಿವರು ದುರಂತ ಸ್ಥಳದಲ್ಲಿನ ಶಾಲೆಗಳಿಗೆ ಶೀಘ್ರದಲ್ಲೇ ಭೇಟಿ ನೀಡಿ ಮಕ್ಕಳ ಶಿಕ್ಷಣಕ್ಕೆ ಏನೂ ತೊಂದರೆಯಾಗದಂತೆ ಗಮನ ಹರಿಸಲಿದ್ದಾರೆ’ ಎಂದೂ ಸಿಎಂ ಮಾಹಿತಿ ನೀಡಿದರು.
;Resize=(128,128))
;Resize=(128,128))
;Resize=(128,128))
;Resize=(128,128))