ಷೇರುಪೇಟೆಯಲ್ಲಿ ಕೃತಕ ಏರಿಳಿತ ಸೃಷ್ಟಿಸಿ ಅಕ್ರಮವಾಗಿ 4843 ಕೋಟಿ ರು. ಲಾಭ ಗಳಿಸಿದ ಆರೋಪದ ಮೇರೆಗೆ ಅಮೆರಿಕ ಮೂಲದ ಅಂತಾರಾಷ್ಟ್ರೀಯ ಷೇರು ಟ್ರೇಡಿಂಗ್‌ ಕಂಪನಿ ಜೇನ್‌ ಸ್ಟ್ರೀಟ್‌ನ ಸಹಸಂಸ್ಥೆಗಳ ಮೇಲೆ  ಸೆಬಿ ನಿರ್ಬಂಧ ವಿಧಿಸಿದೆ.  

ನವದೆಹಲಿ: ಷೇರುಪೇಟೆಯಲ್ಲಿ ಕೃತಕ ಏರಿಳಿತ ಸೃಷ್ಟಿಸಿ ಅಕ್ರಮವಾಗಿ 4843 ಕೋಟಿ ರು. ಲಾಭ ಗಳಿಸಿದ ಆರೋಪದ ಮೇರೆಗೆ ಅಮೆರಿಕ ಮೂಲದ ಅಂತಾರಾಷ್ಟ್ರೀಯ ಷೇರು ಟ್ರೇಡಿಂಗ್‌ ಕಂಪನಿ ಜೇನ್‌ ಸ್ಟ್ರೀಟ್‌ನ ಸಹಸಂಸ್ಥೆಗಳ ಮೇಲೆ ಭಾರತೀಯ ಷೇರುಪೇಟೆ ನಿಯಂತ್ರಣ ಸಂಸ್ಥೆಯಾದ ಸೆಬಿ ನಿರ್ಬಂಧ ವಿಧಿಸಿದೆ. ಇಂಡೆಕ್ಸ್‌ ಟ್ರೇಡಿಂಗ್‌ನಲ್ಲಿ ಭಾರೀ ಅಕ್ರಮ ನಡೆಸಿದ ಆರೋಪದಡಿ ಈ ಕ್ರಮ ಕೈಗೊಳ್ಳಲಾಗಿದೆ.

ಸೆಬಿ ನಿರ್ಬಂಧದ ಹಿನ್ನೆಲೆಯಲ್ಲಿ ಮುಂದಿನ ಆದೇಶದ ವರೆಗೆ ಭಾರತೀಯ ಷೇರುಮಾರುಕಟ್ಟೆಯಲ್ಲಿ ಜೇನ್‌ ಸ್ಟ್ರೀಟ್‌ ಕಂಪನಿಯು ಭಾರತೀಯ ಸೆಕ್ಯುರಿಟೀಸ್‌ ಮಾರುಕಟ್ಟೆಯಿಂದ ದೂರವುಳಿಯಬೇಕಿದೆ. ಅಲ್ಲದೆ, ತಾನು ಲಾಭವಾಗಿ ಗಳಿಸಿದ ಹಣವನ್ನು ಎಸ್ಕ್ರೋ ಖಾತೆಯಲ್ಲಿ ಇಡುವಂತೆ ಸೂಚಿಸಲಾಗಿದೆ.

ಆರೋಪ ಏನು?: ಜೇನ್‌ ಸ್ಟ್ರೀಟ್‌ನ ಅಂಗ ಸಂಸ್ಥೆಗಳು ಜ.1,2023 ಮತ್ತು ಮಾ.31, 2025ರ ನಡುವೆ ಇಂಡೆಕ್ಸ್‌ ಆಪ್ಷನ್ಸ್‌, ಫ್ಯೂಚರ್‌ ಟ್ರೇಡ್‌ ಮೂಲಕ ಅಕ್ರಮವಾಗಿ ಸುಮಾರು 42,289 ಕೋಟಿ ರು.ನಷ್ಟು ಲಾಭಗಳಿಸಿದೆ. ಭಾರೀ ಮೊತ್ತದಲ್ಲಿ ಕ್ಯಾಶ್‌ ಮತ್ತು ಫ್ಯೂಚರ್‌ ಮಾರುಕಟ್ಟೆಯಲ್ಲಿ ಭಾರೀ ಖರೀದಿ ಮತ್ತು ಮಾರಾಟ ನಡೆಸಿ ಇಂಡೆಕ್ಸ್‌ ಅನ್ನು ಕೃತಕವಾಗಿ ಮೇಲೇರಿಸಿ, ಇಳಿಸಿ ಲಾಭ ಮಾಡಿಕೊಂಡಿದೆ ಎಂಬ ಆರೋಪ ಸಂಸ್ಥೆ ಮೇಲಿದೆ. ಈ ಮೂಲಕ ಅಕ್ರಮ ಮತ್ತು ನ್ಯಾಯಸಮ್ಮತವಲ್ಲದ ವಹಿವಾಟು ಕ್ರಮಗಳ ನಿಯಮಗಳ ಉಲ್ಲಂಘನೆ, ಮಾರುಕಟ್ಟೆಯ ಭಾಗೀದಾರರು ಅದರಲ್ಲೂ ರಿಟೇಲ್‌ ಟ್ರೇಡರ್‌ಗಳ ದಾರಿ ತಪ್ಪಿಸಿದ ಆರೋಪ ಸಂಸ್ಥೆ ಮೇಲಿದೆ.