ಸಾರಾಂಶ
‘ಪತಿ - ಪತ್ನಿ ನಡುವಿನ ಫೋನ್ ಸಂಭಾಷಣೆಯನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಳ್ಳುವುದು ವಿಚ್ಛೇದನ ಪ್ರಕರಣದಲ್ಲಿ ಸ್ವೀಕಾರ್ಹ ಸಾಕ್ಷಿಯಾಗಿ ಪರಿಗಣನೆಯಾಗುತ್ತದೆ. ಇದು ದಂಪತಿಗಳ ನಡುವಿನ ವೈವಾಹಿಕ ಸಂಬಂಧ ಅಷ್ಟೊಂದು ಬಲವಾಗಿಲ್ಲ ಎಂಬುದನ್ನು ಬಿಂಬಿಸುತ್ತದೆ’
ನವದೆಹಲಿ : ‘ಪತಿ - ಪತ್ನಿ ನಡುವಿನ ಫೋನ್ ಸಂಭಾಷಣೆಯನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಳ್ಳುವುದು ವಿಚ್ಛೇದನ ಪ್ರಕರಣದಲ್ಲಿ ಸ್ವೀಕಾರ್ಹ ಸಾಕ್ಷಿಯಾಗಿ ಪರಿಗಣನೆಯಾಗುತ್ತದೆ. ಇದು ದಂಪತಿಗಳ ನಡುವಿನ ವೈವಾಹಿಕ ಸಂಬಂಧ ಅಷ್ಟೊಂದು ಬಲವಾಗಿಲ್ಲ ಎಂಬುದನ್ನು ಬಿಂಬಿಸುತ್ತದೆ’ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾ। ಬಿ.ವಿ ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ನೇತೃತ್ವದ ದ್ವಿಸದ್ಯ ಪೀಠ ಈ ಆದೇಶ ನೀಡಿದೆ,
ಪಂಜಾಬ್ ಮತ್ತು ಹರ್ಯಾಣದ ಹೈಕೋರ್ಟ್, ವಿಚ್ಛೇದನ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಪತಿ- ಪತ್ನಿ ಫೋನ್ ರೆಕಾರ್ಡಿಂಗ್ ವಿಚ್ಛೇದನಕ್ಕೆ ಆಧಾರವಾಗಿ ಪರಿಗಣನೆ ಆಗುವುದಿಲ್ಲ. ಅದು ಗೌಪ್ಯತೆ ಉಲ್ಲಂಘನೆ ಎಂದು ತೀರ್ಪು ನೀಡಿತ್ತು.
ಈ ಸಂಬಂಧ ಸಲ್ಲಿಕೆಯಾಗಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಉಚ್ಚ ನ್ಯಾಯಾಲಯದ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿ, ರೆಕಾರ್ಡಿಂಗ್ ಕೂಡ ಡೈವೋರ್ಸ್ ಪ್ರಕರಣದಲ್ಲಿ ಸಾಕ್ಷ್ಯಕ್ಕಾಗಿ ಪರಿಗಣಿಸಬಹುದು ಎಂದು ಹೇಳಿ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದೆ.ವಿಚಾರದಲ್ಲಿ ಇನ್ನು ಕೆಲ ಅಭಿಪ್ರಾಯ ವ್ಯಕ್ತ ಪಡಿಸಿರುವ ಸುಪ್ರೀಂ ‘ದಂಪತಿ ತಮ್ಮ ನಡುವಿನ ಸಂಭಾಷಣೆಯನ್ನು ಸಾಕ್ಷಿಗಾಗಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಇಬ್ಬರ ನಡುವಿನ ಸಂಬಂಧ ಸರಿ ಹಾದಿಯಲ್ಲಿ ಸಾಗುತ್ತಿಲ್ಲ ಎನ್ನುವುದಕ್ಕೆ ಸಾಕ್ಷಿ, ಹೀಗಾಗಿ ಅದನ್ನು ಕಾನೂನು ಪ್ರಕ್ರಿಯೆಗೆ ಪ್ರಯೋಗಿಸಬಹುದು’ ಎಂದಿದೆ
ಇನ್ನು ಹೈಕೋರ್ಟ್ ತೀರ್ಪಿಗೆ ಆಕ್ಷೇಪಿಸಿರುವ ನ್ಯಾ। ನಾಗರತ್ನ ಅವರು,‘ಅಂತಹ ಸಾಕ್ಷ್ಯಗಳನ್ನು ಅನುಮತಿಸುವುದರಿಂದ ಸಾಮರಸ್ಯ ಮತ್ತು ವೈವಾಹಿಕ ಸಂಬಂಧಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ಕೆಲವು ವಾದಗಳನ್ನು ಮಂಡಿಸಲಾಗುತ್ತಿದೆ. ಇದನ್ನು ತಮ್ಮ ಸಂಗಾತಿ ಮೇಲೆ ಕಣ್ಣಿಡಲು ಬಳಸಲಾಗುತ್ತಿದೆ ಎನ್ನಲಾಗಿದೆ. ಆದರೆ ಅಂತಹ ವಾದ ಸಮರ್ಥನೀಯ ಎಂದು ನಾನು ಭಾವಿಸುವುದಿಲ್ಲ. ದಾಂಪತ್ಯವು ಸಂಗಾತಿಗಳು ಪರಸ್ಪರ ಸಕ್ರಿಯವಾಗಿ ಕಣ್ಣಿಡುವ ಹಂತವನ್ನು ತಲುಪಿದ್ದರೆ ಅದು ಮುರಿದ ಸಂಬಂಧದ ಲಕ್ಷಣ ಮತ್ತು ನಂಬಿಕೆಯ ಕೊರತೆ ಸೂಚಿಸುತ್ತದೆ’ ಎಂದಿದ್ದಾರೆ.
ಏನಿದು ಪ್ರಕರಣ?
ಭಟಿಂಡಾದಲ್ಲಿ ವಿಚ್ಛೇದನಕ್ಕೆ ಮುಂದಾಗಿದ್ದ ಪತಿಯೊಬ್ಬ ತನ್ನ ಹೆಂಡತಿ ಜತೆಗಿನ ಪೋನ್ ಸಂಭಾಷಣೆಯನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಸಿಕೊಂಡಿದ್ದ. ಪತ್ನಿಯು ಇದು ತನಗೆ ಅರಿವಿಲ್ಲದೆ ಮಾಡಿರುವುದು, ಗೌಪ್ಯತೆಗೆ ಧಕ್ಕೆ ಎಂದು ವಾದಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಳು. ವಾದ ಆಲಿಸಿದ್ದ ಹೈಕೋರ್ಟ್ ಫೋನ್ ಸಂಭಾಷಣೆ ಸಾಕ್ಷಿಯಾಗಿ ಪರಿಗಣಿಸಲು ಸೂಕ್ತವಲ್ಲ. ರಹಸ್ಯವಾಗಿ ದಾಖಲಿಸುವುದು ಗೌಪ್ಯತೆಯ ಉಲ್ಲಂಘನೆ. ಕಾನೂನುಬದ್ಧವಾಗಿ ನ್ಯಾಯಸಮ್ಮತವಲ್ಲ ಎಂದು ತೀರ್ಪು ನೀಡಿತ್ತು.