ಸಾರಾಂಶ
: ವಿಶ್ವದ ಎಲ್ಲಾ ದೇಶಗಳ ಮೇಲೂ ಪ್ರತಿತೆರಿಗೆ ಹೇರುವ ಅಮೆರಿಕದ ನಿರ್ಧಾರದ ಹಿನ್ನೆಲೆಯಲ್ಲಿ ಭಾರೀ ಕುಸಿತ ಕಂಡಿದ್ದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್, ಮಂಗಳವಾರದ ಹೊತ್ತಿಗೆ ತನ್ನ ಪೂರ್ಣ ನಷ್ಟ ಭರ್ತಿ ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ.
ಏ.2ರಂದು ಇದ್ದ ಮಟ್ಟ ಮತ್ತೆ ತಲುಪಿದ ಸೂಚ್ಯಂಕಕೇವಲ 4 ದಿನಗಳಲ್ಲಿ 3480 ಏರಿಕೆ ಕಂಡ ಸೆನ್ಸೆಕ್ಸ್‌ಮುಂಬೈ: ವಿಶ್ವದ ಎಲ್ಲಾ ದೇಶಗಳ ಮೇಲೂ ಪ್ರತಿತೆರಿಗೆ ಹೇರುವ ಅಮೆರಿಕದ ನಿರ್ಧಾರದ ಹಿನ್ನೆಲೆಯಲ್ಲಿ ಭಾರೀ ಕುಸಿತ ಕಂಡಿದ್ದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್, ಮಂಗಳವಾರದ ಹೊತ್ತಿಗೆ ತನ್ನ ಪೂರ್ಣ ನಷ್ಟ ಭರ್ತಿ ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಟ್ರಂಪ್ ಶಾಕ್‌ನಿಂದ ಪೂರ್ಣ ಹೊರಬಂದ ವಿಶ್ವದ ಮೊದಲ ಪ್ರಮುಖ ಸೂಚ್ಯಂಕವೆಂಬ ಹಿರಿಮೆಗೆ ಪಾತ್ರವಾಗಿದೆ. ಮಂಗಳವಾರ ಸೆನ್ಸೆಕ್ಸ್ 76734 ಅಂಕಗಳಲ್ಲಿ ಮುಕ್ತಾಯವಾಗಿದೆ.
ಅಮೆರಿಕದ ತೆರಿಗೆ ಶಾಕ್ ಹಿನ್ನೆಲೆಯಲ್ಲಿ ಏ.2ರಿಂದ ಏ.7ರ ಅವಧಿಯಲ್ಲಿ ಸೂಚ್ಯಂಕ ಒಟ್ಟಾರೆ 3480 ಅಂಕಗಳ ಭಾರೀ ಕುಸಿತ ಕಂಡಿತ್ತು. ಅದೇ ರೀತಿ ವಿಶ್ವದ ಎಲ್ಲಾ ದೇಶಗಳ ಸೂಚ್ಯಂಕಗಳ ಕೂಡಾ ಕುಸಿತ ಕಂಡಿತ್ತು. ಆದರೆ ಉಳಿದ ದೇಶಗಳಿಗೆ ಹೋಲಿಸಿದರೆ ಭಾರತದ ಮೇಲೆ ಅಮೆರಿಕದ ಪ್ರತಿತೆರಿಗೆ ಹೊಡೆತ ಕಡಿಮೆ ಎಂಬ ವರದಿ, ಜೊತೆಗೆ ಏ.2ರಂದು ಟ್ರಂಪ್ ಭಾರತದ ಸೇರಿದಂತೆ ವಿಶ್ವದ ಎಲ್ಲಾ ದೇಶಗಳಿಗೂ ತೆರಿಗೆ ಮಾತುಕತೆ ನಡೆಸಲು 90 ದಿನಗಳ ವಿನಾಯ್ತಿ ನೀಡಿದ ಸುದ್ದಿ ಹೂಡಿಕೆದಾರರಲ್ಲಿ ದೊಡ್ಡ ವಿಶ್ವಾಸಕ್ಕೆ ಕಾರಣವಾಯ್ತು.ಹೀಗಾಗಿ ಏ.8ರ ಬಳಿಕದ ಕೇವಲ ನಾಲ್ಕು ವಹಿವಾಟು ದಿನಗಳಲ್ಲಿ ಸೂಚ್ಯಂಕ 3480 ಅಂಕಗಳಷ್ಟು ಏರಿಕೆ ಕಂಡಿದೆ. ವಿಶ್ವದಲ್ಲಿ ಇತರೆ ಯಾವುದೇ ದೇಶದ ಸೂಚ್ಯಂಕ ಕೂಡಾ ಇಷ್ಟು ಅಲ್ಪಾವಧಿಯಲ್ಲಿ ಚೇತರಿಸಿಕೊಂಡಿಲ್ಲ.
ಭರ್ಜರಿ ಏರಿಕೆ: ಮಂಗಳವಾರ ಸೆನ್ಸೆಕ್ಸ್ 1577 ಅಂಕಗಳ ಭಾರೀ ಏರಿಕೆ ಕಂಡು 76734 ಅಂಕಗಳಲ್ಲಿ ಮುಕ್ತಾಯವಾಗಿದೆ. ಇನ್ನು ಕಳೆದ ಶುಕ್ರವಾರ ಕೂಡಾ ಸೂಚ್ಯಂಕ 1310 ಅಂಕಗಳಷ್ಟು ಏರಿಕೆ ಕಂಡಿತ್ತು. ಪರಿಣಾಮ ಕೇವಲ 2 ದಿನಗಳಲ್ಲಿ ಹೂಡಿಕೆದಾರರ ಸಂಪತ್ತು 18 ಲಕ್ಷ ಕೋಟಿ ರು.ನಷ್ಟು ಏರಿಕೆ ಕಂಡಿದೆ.