ಮಥುರಾ ಶಾಹಿ ಮಸೀದಿ ಸರ್ವೇ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

| Published : Jan 17 2024, 01:48 AM IST / Updated: Jan 17 2024, 09:25 AM IST

ಸಾರಾಂಶ

ಮಥುರಾದ ಕೃಷ್ಣ ಮಂದಿರವನ್ನು ಅತಿಕ್ರಮಿಸಿ ಕಟ್ಟಲಾಗಿದೆ ಎನ್ನಲಾದ ಶಾಹಿ ಮಸೀದಿಯನ್ನು ಸರ್ವೇಕ್ಷಣೆ ಮಾಡಬೇಕು ಎಂಬ ಅಲಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ನವದೆಹಲಿ: ಕೃಷ್ಣ ಜನ್ಮಸ್ಥಾನವಾದ ಮಥುರಾದ ಶ್ರೀಕೃಷ್ಣ ದೇವಸ್ಥಾನದ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಗೆ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್‌ ಮಂಗಳವಾರ ತಡೆ ನೀಡಿದೆ.

ಮಸೀದಿಯ ಸಮೀಕ್ಷೆಗೆ ತಡೆ ಕೋರಿ ಶಾಹಿ ಈದ್ಗಾ ಮಸೀದಿ ಟ್ರಸ್ಟ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ।ಸಂಜೀವ್‌ ಖನ್ನ ಮತ್ತು ನ್ಯಾ।ದೀಪಾಂಕರ್‌ ದತ್ತ ಅವರಿದ್ದ ಪೀಠ ಈ ಆದೇಶ ನೀಡಿದೆ. 

ಅಲ್ಲದೇ ಈ ಕುರಿತಾಗಿ ಅಭಿಪ್ರಾಯ ಸಲ್ಲಿಕೆ ಮಾಡುವಂತೆ ಹಿಂದೂ ಸಂಘಟನೆಗಳಿಗೆ ನೋಟಿಸ್‌ ನೀಡಿದ್ದು, ಕಮಿಷನರ್‌ ನೇಮಕದ ಆದೇಶವನ್ನು ಕಾರ್ಯಗತಗೊಳಿಸುವುದಿಲ್ಲ ಎಂದು ಹೇಳಿದೆ. 

ಮಥುರಾದಲ್ಲಿ ನಿರ್ಮಾಣ ಮಾಡಲಾಗಿರುವ ಮಸೀದಿ ಇರುವ ಜಾಗದಲ್ಲಿ ಈ ಮೊದಲು ಕೃಷ್ಣ ದೇವಸ್ಥಾನವಿತ್ತು. ಹೀಗಾಗಿ ಸಮೀಕ್ಷೆಗೆ ಅನುಮತಿ ನೀಡಬೇಕು ಎಂದು ಭಗವಾನ್‌ ಶ್ರೀಕೃಷ್ಣ ವಿರಾಜ್‌ಮಾನ್‌ ಮತ್ತು ಇತರ ಹಿಂದೂ ಸಂಘಟನೆಗಳು ಅಲಹಾಬಾದ್‌ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದವು. 

ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಮೀಕ್ಷೆ ನಡೆಸಲು 2023ರ ಡಿ.14ರಂದು ಆದೇಶ ನೀಡಿತ್ತು. ಈ ಆದೇಶವನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದವು.