ಸಾರಾಂಶ
2024ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಫಲಿತಾಂಶ ಪ್ರಕಟವಾಗಿದ್ದು, 1009 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಆ ಪೈಕಿ ಶಕ್ತಿ ದುಬೆ ದೇಶಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.
- ಹರ್ಷಿತಾ ಗೋಯಲ್ ನಂ.2, ಡೋಂಗ್ರೆ ಅರ್ಚಿತ್ ಪರಾಗ್ ನಂ.3
- 9.92 ಲಕ್ಷ ಅಭ್ಯರ್ಥಿಗಳ ಪೈಕಿ 1009 ಮಂದಿ ತೇರ್ಗಡೆನವದೆಹಲಿ: 2024ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಫಲಿತಾಂಶ ಪ್ರಕಟವಾಗಿದ್ದು, 1009 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಆ ಪೈಕಿ ಶಕ್ತಿ ದುಬೆ ದೇಶಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.
ಅಗ್ರ 3ರ ಸ್ಥಾನದಲ್ಲಿ ಇಬ್ಬರು ಮಹಿಳೆಯರಿದ್ದಾರೆ. ಪ್ರಯಾಗ್‌ರಾಜ್ ಮೂಲದ ಶಕ್ತಿ ದುಬೆ ಮೊದಲ ದೇಶಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಉಳಿದಂತೆ ಹರ್ಯಾಣ ಮೂಲದ ಹರ್ಷಿತಾ ಗೋಯಲ್ ಎರಡನೇ ಸ್ಥಾನ, ಪುಣೆಯ ಡೋಂಗ್ರೆ ಅರ್ಚಿತ್ ಪರಾಗ್ 3ನೇ ಸ್ಥಾನ ಪಡೆದಿದ್ದಾರೆ. ಶಕ್ತಿ ದುಬೆ ಅಲಹಾಬಾದ್ ವಿವಿಯಿಂದ ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಇನ್ನು ಹರ್ಷಿತಾ ಬರೋಡಾದ ಎಂಎಸ್ ವಿವಿಯಿಂದ ಬಿ.ಕಾಂ, ಅರ್ಷಿತ್ ವೆಲ್ಲೂರಿನ ವಿಐಟಿಯಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.ಸರ್ಕಾರ ಯುಪಿಎಸ್ಸಿಯಲ್ಲಿ 1129 ಹುದ್ದೆಗಳಿಗೆ ಪರೀಕ್ಷೆ ನಡೆಸಿತ್ತು. ಕಳೆದ ವರ್ಷದ ಜೂನ್ 16ರಂದು ನಡೆದಿದ್ದ ಪ್ರಿಲಿಮನರಿ ಪರೀಕ್ಷೆಯಲ್ಲಿ 9.92 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. ಆ ಪೈಕಿ 14627 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಆಯ್ಕೆಯಾಗಿದ್ದರು. ಅದರಲ್ಲಿ 2845 ಅಭ್ಯರ್ಥಿಗಳು ಈ ವರ್ಷದ ಜನವರಿ 7ರಿಂದ ಏಪ್ರಿಲ್ 17ರವರೆಗೆ ನಡೆದ ಸಂದರ್ಶನಕ್ಕೆ ಆಯ್ಕೆಯಾಗಿದ್ದರು. ಇದರಲ್ಲಿ 725 ಪುರುಷರು ಮತ್ತು 284 ಮಹಿಳೆಯರು ಸೇರಿದಂತೆ ಒಟ್ಟು 1009 ಮಂದಿ ತೇರ್ಗಡೆಯಾಗಿದ್ದಾರೆ. ಟಾಪ್ 25 ಜನಲ್ಲಿ 11 ಮಹಿಳೆಯರು ಹಾಗೂ 14 ಪುರುಷರಿದ್ದಾರೆ.ತೇರ್ಗಡೆಯಾಗಿರುವ 1009 ಅಭ್ಯರ್ಥಿಗಳಲ್ಲಿ 335 ಮಂದಿ ಸಾಮಾನ್ಯ ವರ್ಗಕ್ಕೆ ಸೇರಿದವರು. ಉಳಿದಂತೆ 109 ಮಂದಿ ಆರ್ಥಿಕವಾಗಿ ಹಿಂದುಳಿದ ವಿಭಾಗ, 318 ಪರೀಕ್ಷಾರ್ಥಿಗಳು ಹಿಂದುಳಿದ ವರ್ಗ, 106 ಪರಿಶಿಷ್ಟ ಜಾತಿ, 87 ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಜೊತೆಗೆ 45 ಮಂದಿ ಅಂಗವೈಕಲ್ಯತೆ ಹೊಂದಿರುವವರು ಕೂಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.