ಆಂಧ್ರ ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಶರ್ಮಿಳಾ ನೇಮಕ

| Published : Jan 17 2024, 01:47 AM IST / Updated: Jan 17 2024, 01:03 PM IST

ಸಾರಾಂಶ

ತೆಲುಗು ನಾಡಿನಲ್ಲಿನ್ನು ಅಣ್ಣ-ತಂಗಿ ರಾಜಕೀಯ ಫೈಟ್‌ ನಡೆಯಲಿದ್ದು, ಮುಖ್ಯಮಂತ್ರಿ ಜಗನ್ಮೋಹನ್‌ ರೆಡ್ಡಿ ಮತ್ತು ವಾರದ ಹಿಂದೆ ಕಾಂಗ್ರೆಸ್‌ ಸೇರಿದ್ದ ಜಗನ್‌ ಸೋದರಿ ಶರ್ಮಿಳಾ ನಡುವೆ ನೇರ ಹಣಾಹಣಿ ಏರ್ಪಡಲಿದೆ.

ನವದೆಹಲಿ: ಆಂಧ್ರ ಪ್ರದೇಶ ಕಾಂಗ್ರೆಸ್‌ ಘಟಕದ ನೂತನ ಅಧ್ಯಕ್ಷೆಯನ್ನಾಗಿ, ಕಳೆದ ವಾರವಷ್ಟೇ ಪಕ್ಷ ಸೇರಿದ್ದ ರಾಜ್ಯದ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಅವರ ಸೋದರಿ ಹಾಗೂ ಮಾಜಿ ಮುಖ್ಯಮಂತ್ರಿ ವೈ.ಎಸ್‌.ರಾಜಶೇಖರ್‌ ರೆಡ್ಡಿ ಅವರ ಪುತ್ರಿ ವೈ.ಎಸ್‌.ಶರ್ಮಿಳಾ ಅವರನ್ನು ಪಕ್ಷಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ನೇಮಕ ಮಾಡಿದ್ದಾರೆ.

ಈ ಮೂಲಕ ರಾಜ್ಯದಲ್ಲಿ ಜಗನ್ಮೋಹನ್‌-ಶರ್ಮಿಳಾ ಅಣ್ಣ-ತಂಗಿ ಜೋಡಿಯ ‘ರಾಜಕೀಯ ಸಮರ’ ಏರ್ಪಡಲಿದೆ. ಜಗನ್‌ ಅವರು ವೈಎಸ್ಸಾರ್‌ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾರೆ. ವೈಎಸ್ಸಾರ್‌ ಇದ್ದಾಗ ಇಬ್ಬರೂ ಕಾಂಗ್ರೆಸ್‌ನಲ್ಲಿದ್ದರು.

‘ತಕ್ಷಣ ಅನ್ವಯವಾಗುವಂತೆ ಆಂಧ್ರ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷೆಯಾಗಿ ಶರ್ಮಿಳಾ ಅವರನ್ನು ಕಾಂಗ್ರೆಸ್‌ ಅಧ್ಯಕ್ಷರು ನೇಮಿಸಿದ್ದಾರೆ’ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಶರ್ಮಿಳಾ, ‘ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‌ ಮರುನಿರ್ಮಾಣಕ್ಕೆ ನನ್ನ ಎಲ್ಲ ಶ್ರಮ ಹಾಕುವೆ’ ಎಂದಿದ್ದಾರೆ.

ಶರ್ಮಿಳಾ ಅವರು ಜ.4 ರಂದು ದೆಹಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಶರ್ಮಿಳಾ ಅವರು ವೈಎಸ್‌ಆರ್‌ ತೆಲಂಗಾಣ ಪಕ್ಷದ ಸ್ಥಾಪಕಿಯಾಗಿದ್ದರು. ತಮ್ಮ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡಿದ್ದರು.