ಇಡ್ಲಿ ಟೀಕಿಸಿದವಗೆ ಸಚಿನ್‌ ಶತಕ ಉದಾಹರಿಸಿ ತರೂರ್‌ ಟಾಂಗ್‌!

| N/A | Published : Sep 29 2025, 03:02 AM IST

ಸಾರಾಂಶ

‘ಕೇರಳದಲ್ಲಿ ಉಪಹಾರಕ್ಕೆ ಇಡ್ಲಿ, ತಪ್ಪಿದರೆ ದೋಸೆಯಷ್ಟೇ ಏಕೆ ಸಿಗುತ್ತದೆ? ಬೇರೆ ಏನೂ ಇರುವುದಿಲ್ಲವೇ?’ ಎಂದು ಎಕ್ಸ್‌ನಲ್ಲಿ ಮಾಡಲಾದ ಪೋಸ್ಟ್‌ಗೆ ಒಬ್ಬರು ಉತ್ತರಿಸಿ, ‘ದೋಸೆ ಬಗ್ಗೆ ಎರಡು ಮಾತಿಲ್ಲ. ಆದರೆ ಇಡ್ಲಿ ಮಾತ್ರ ಬೇಯಿಸಿದ ವಿಷಾದದಂತೆ’ ಎಂದು ವ್ಯಂಗ್ಯವಾಡಿದ್ದಾರೆ.

 ನವದೆಹಲಿ: ‘ಕೇರಳದಲ್ಲಿ ಉಪಹಾರಕ್ಕೆ ಇಡ್ಲಿ, ತಪ್ಪಿದರೆ ದೋಸೆಯಷ್ಟೇ ಏಕೆ ಸಿಗುತ್ತದೆ? ಬೇರೆ ಏನೂ ಇರುವುದಿಲ್ಲವೇ?’ ಎಂದು ಎಕ್ಸ್‌ನಲ್ಲಿ ಮಾಡಲಾದ ಪೋಸ್ಟ್‌ಗೆ ಒಬ್ಬರು ಉತ್ತರಿಸಿ, ‘ದೋಸೆ ಬಗ್ಗೆ ಎರಡು ಮಾತಿಲ್ಲ. ಆದರೆ ಇಡ್ಲಿ ಮಾತ್ರ ಬೇಯಿಸಿದ ವಿಷಾದದಂತೆ’ ಎಂದು ವ್ಯಂಗ್ಯವಾಡಿದ್ದಾರೆ.  

ಆಗ ಇಡ್ಲಿಯ ಮಾನರಕ್ಷಣೆಗೆ ಸ್ವತಃ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಧಾವಿಸಿ, ತಕ್ಕ ತಿರುಗೇಟು ನೀಡಿದ್ದಾರೆ. ಇಡ್ಲಿಯನ್ನು ಟೀಕಿಸಿದವರಿಗೆ ಪ್ರತ್ಯುತ್ತರವಾಗಿ ತಾವೇ ಇಡ್ಲಿ ತಯಾರಿಸುತ್ತಿರುವಂತಿರುವ ಎಐ ಫೋಟೋ ಹಂಚಿಕೊಂಡಿರುವ ತರೂರ್‌ ಅದನ್ನು ತಮ್ಮ ಎಂದಿನ ಶೈಲಿಯಲ್ಲಿ ಕಾವ್ಯಾತ್ಮಕವಾಗಿ ವರ್ಣಿಸಿದ್ದಾರೆ. ‘ಪಾಪದ ಜನ, ಎಂದೂ ಒಳ್ಳೆ ಇಡ್ಲಿಯ ರುಚಿಯನ್ನೇ ನೋಡಿರಲಿಕ್ಕಿಲ್ಲ. ಉತ್ತಮ ಇಡ್ಲಿಯೆಂದರೆ ಅದು ಮೋಡದಂತೆ, ಪಿಸುಮಾತಿನಂತೆ, ಮಾನವ ನಾಗರಿಕತೆಯ ಪರಿಪೂರ್ಣತೆಯ ಕನಸಿನಂತೆ ಇರುತ್ತದೆ. ಇದೊಂದು ಭವ್ಯ ಸೃಷ್ಟಿ. ಸೂಕ್ಷ್ಮವಾದ, ತೂಕವಿಲ್ಲದ ಅಕ್ಕಿ ಮತ್ತು ಬೇಳೆ ಹಬೆಯಲ್ಲಿ ಬೆಂದು, ನಾಲಿಗೆಯ ಮೇಲಿಟ್ಟರೆ ಅಲ್ಲೇ ಕರಗಿ ಅಲೌಕಿಕ ಅನುಭವ ನೀಡುತ್ತದೆ. ಸರಿಯಾದ ಜೋಡಿಯಿದ್ದರೆ ಅದು ಸಂಗೀತ ಸಂಯೋಜಕ ಬೀಥೋವನ್‌ನ ಸ್ವರಮೇಳದ ರೀತಿ, ಟ್ಯಾಗೋರರ ಸಂಗೀತದಂತೆ, ಹುಸೇನ್‌ರ ವರ್ಣಚಿತ್ರದಂತೆ, ತೆಂಡುಲ್ಕರ್‌ ಸಿಡಿಸಿದ ಶತಕದಂತೆ ಅದ್ಭುತವಾಗಿರುತ್ತದೆ. 

ಇಂತಹ ಇಡ್ಲಿಯನ್ನು ವಿಷಾದ ಎಂದು ಕರೆಯುವುದೆಂದರೆ, ನೀವು ಆತ್ಮಹೀನರು, ಆಹಾರವನ್ನು ಆಸ್ವಾದಿಸಲು ಅರಿಯದವರು, ದಕ್ಷಿಣ ಭಾರತದ ಅತ್ಯದ್ಭುತ ಸಾಧನೆಯನ್ನು ಹೊಗಳಲು ಆಗದವರು. ನಿಮ್ಮನ್ನು ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತದೆ’ ಎಂದು ತರೂರ್‌ ಸುದೀರ್ಘ ಪೋಸ್ಟ್‌ ಮಾಡಿದ್ದಾರೆ.

Read more Articles on