ಸಾರಾಂಶ
ನವದೆಹಲಿ: ಆ್ಯಕ್ಸಿಯೋಂ-4ರ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್)ಗೆ ತೆರಳಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸ್ಥಿತಿಯಲ್ಲಿ ಸಂಭವಿಸುವ ನಿಶ್ಶಕ್ತಿಯ ಬಗ್ಗೆ ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಂಡಿದ್ದಾರೆ.
ಈ ಬಗ್ಗೆ ಆ್ಯಕ್ಸಿಯೋಂ ಸ್ಪೇಸ್ ಹೇಳಿಕೆ ಬಿಡುಗಡೆ ಮಾಡಿದ್ದು, ‘ಶುಕ್ಲಾ ಅವರು ಲೈಫ್ ಸೈನ್ಸಸ್ ಗ್ಲೋವ್‌ಬಾಕ್ಸ್(ನಿಯಂತ್ರಿತ ಪರಿಸರದಲ್ಲಿ ಜೀವ ವಿಜ್ಞಾನ ಸಂಶೋಧನೆ ನಡೆಸಲು ಐಎಸ್‌ಎಸ್‌ನಲ್ಲಿರುವ ವ್ಯವಸ್ಥೆ)ನಲ್ಲಿ, ಮಾಂಸಖಂಡದಲ್ಲಿ ನಷ್ಟ ಮತ್ತು ನಿಶ್ಶಕ್ತಿಗೆ ನಿರ್ವಾತ ಹೇಗೆ ಕಾರಣವಾಗುತ್ತದೆ ಎಂಬುದನ್ನು ಸಂಶೋಧಿಸುತ್ತಿದ್ದಾರೆ’ ಎಂದು ತಿಳಿಸಿದೆ.
ಶುಕ್ಲಾ ಅವರ ಈ ಸಂಶೋಧನೆಯು, ಭೂಮಿಯ ಮೇಲಿರುವವರಲ್ಲೂ ವಯಸ್ಸಾಗುವಿಕೆ ಅಥವಾ ಇನ್ಯಾವುದೇ ಕಾರಣದಿಂದ ಸ್ನಾಯುಗಳ ಶಕ್ತಿ ಕ್ಷೀಣಿಸದರೆ, ಅದಕ್ಕೆ ಸೂಕ್ತ ಔಷಧಿ ಕಂಡುಹಿಡಿಯಲು ಉಪಯುಕ್ತ ಎನ್ನಲಾಗಿದೆ. ಅಂತೆಯೇ, ಗಗನಯಾತ್ರಿಗಳ ತಂಡವು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆಯೂ ಕೆಲಸ ಮಾಡುತ್ತಿದ್ದು, ಇದರಿಂದ ಅನೇಕ ಮಾನಸಿಕ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಸುಲಭವಾಗುತ್ತದೆ.