ಸಾರಾಂಶ
ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ಐಎಸ್‌ಎಸ್) 18 ದಿನ ತಂಗಿದ್ದ ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಹಾಗೂ ಇತರೆ ಮೂವರು ಗಗನಯಾತ್ರಿಗಳು ಭಾರತೀಯ ಕಾಲಮಾನ ಸೋಮವಾರ ಸಂಜೆ 4.35ಕ್ಕೆ ಭೂಮಿಯತ್ತ ಪ್ರಯಾಣ ಆರಂಭಿಸಲಿದ್ದಾರೆ.
ನವದೆಹಲಿ: ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ಐಎಸ್‌ಎಸ್) 18 ದಿನ ತಂಗಿದ್ದ ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಹಾಗೂ ಇತರೆ ಮೂವರು ಗಗನಯಾತ್ರಿಗಳು ಭಾರತೀಯ ಕಾಲಮಾನ ಸೋಮವಾರ ಸಂಜೆ 4.35ಕ್ಕೆ ಭೂಮಿಯತ್ತ ಪ್ರಯಾಣ ಆರಂಭಿಸಲಿದ್ದಾರೆ.
ಯೋಜನೆಯನುಸಾರ, ಗಗನಯಾತ್ರಿಗಳು ಸೋಮವಾರ ಮಧ್ಯಾಹ್ನ 2.25ಕ್ಕೆ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಪ್ರವೇಶಿಸಿ, 4.35ಕ್ಕೆ ಯಾನ ಶುರು ಮಾಡುತ್ತಾರೆ. ಭಾರತೀಯ ಕಾಲಮಾನ ಮಂಗಳವಾರ ಮಧ್ಯಾಹ್ನ 3ಕ್ಕೆ ಅವರು ಅಮೆರಿಕದ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಸ್ಪ್ಲಾಷ್ ಲ್ಯಾಂಡ್ ಆಗಲಿದ್ದಾರೆ.
ಈ ಹಿನ್ನಲೆಯಲ್ಲಿ, ನಿರ್ಗಮಿಸಲಿರುವ ಅಂತರಿಕ್ಷಯಾನಿಗಳನ್ನು ಭಾನುವಾರ ಐಎಸ್‌ಎಸ್‌ನಲ್ಲಿ ಔಪಚಾರಿಕವಾಗಿ ಬೀಳ್ಕೊಡಲಾಯಿತು.
ಭೂಮಿಗೆ ಆಗಮಿಸಿದ ಬಳಿಕ, ದೇಹವನ್ನು ಪುನಃ ಇಲ್ಲಿನ ವಾತಾವರಣಕ್ಕೆ ಹೊಂದಿಸಲು 1 ವಾರ ಶುಕ್ಲಾ ಪುನಶ್ಚೇತನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾರತ ‘ಸಾರೇ ಜಹಾಂ ಸೆ ಅಚ್ಛಾ’: ಶುಭಾಂಶು - ಬೀಳ್ಕೊಡುಗೆ ವೇಳೆ ಶರ್ಮಾ ರೀತಿ ನುಡಿ
ನವದೆಹಲಿ: ‘ಮೇಲಿನಿಂದ ನೋಡಿದಾಗ ಇಂದು ಸಹ ಭಾರತ ಸಾರೆ ಜಹಾ ಸೆ ಅಚ್ಛಾ(ಎಲ್ಲಾ ದೇಶಗಳಿಗಿಂತ ಉತ್ತಮ) ಆಗಿದೆ’ ಎಂದು ಶುಭಾಂಶು ಶುಕ್ಲಾ ಹೇಳಿದ್ದಾರೆ. ಈ ಮೂಲಕ, 1984ರಲ್ಲಿ ಭಾಹ್ಯಾಕಾಶಕ್ಕೆ ಹೋಗಿದ್ದ ಮೊದಲ ಭಾರತೀಯ ರಾಕೇಶ್ ಶರ್ಮಾ ಆಡಿದ್ದ ಮಾತುಗಳನ್ನು ಪುನರುಚ್ಚರಿಸಿದ್ದಾರೆ.
ಭಾನುವಾರ ಅಂತರಿಕ್ಷದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಶುಕ್ಲಾ, ‘ಈ ಪ್ರಯಾಣವು ಅದ್ಭುತವಾಗಿತ್ತು. ನನಗೆಲ್ಲಾ ಮಾಂತ್ರಿಕವಾಗಿ ಕಾಣುತ್ತಿದೆ. ಬಾಹ್ಯಾಕಾಶದಿಂದ ಭಾರತವು ಮಹತ್ವಾಕಾಂಕ್ಷೆ, ನಿರ್ಭಯತೆ, ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದ ತುಂಬಿದಂತೆ ಕಾಣುತ್ತಿದೆ’ ಎಂದು ಸಂತಸದಿಂದ ನುಡಿದಿದ್ದಾರೆ.