ಪ್ರೌಢಾವಸ್ಥೆಗೆ (ಋತುಮತಿ ಆದ) ತಲುಪಿದ ಕನ್ಯೆಯೊಬ್ಬಳು ಮೌನವಾಗಿದ್ದರೆ ಅದನ್ನು ಮದುವೆಗೆ ಸಮ್ಮತಿ ಎಂದು ಪರಿಗಣಿಸಬಹುದು ಎಂಬ ಹೊಸ ವಿವಾದಾತ್ಮಕ ಕಾನೂನನ್ನು ಅಫ್ಘಾನಿಸ್ಥಾನದ ತಾಲಿಬಾನ್ ಸರ್ಕಾರ ಜಾರಿಗೆ ತಂದಿದೆ. ಇದು ಬಾಲ್ಯವಿವಾಹವನ್ನು ಕಾನೂನುಬದ್ಧಗೊಳಿಸುತ್ತದೆ. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದೆ.

- ಹುಡುಗಿಯ ಮೌನ ಮದುವೆಗೆ ಸಮ್ಮತಿ ಎಂದರ್ಥ-ಬಾಲ್ಯವಿವಾಹಕ್ಕೆ ತಂದೆ, ತಾತನಿಗೆ ಸರ್ವಾಧಿಕಾರ

- ತಾಲಿಬಾನ್‌ ಉಗ್ರರಿಂದ ಹೊಸ ಕಾನೂನು

- ಆದರೆ ಪ್ರೌಢ ಹುಡುಗನ ಮೌನ ಸಮ್ಮತಿ ಎಂದರ್ಥವಲ್ಲ

-ತಾಲಿಬಾನ್‌ ಕಾನೂನಿಗೆ ಜಾಗತಿಕವಾಗಿ ವಿರೋಧ

ಕಾಬೂಲ್‌: ಪ್ರೌಢಾವಸ್ಥೆಗೆ (ಋತುಮತಿ ಆದ) ತಲುಪಿದ ಕನ್ಯೆಯೊಬ್ಬಳು ಮೌನವಾಗಿದ್ದರೆ ಅದನ್ನು ಮದುವೆಗೆ ಸಮ್ಮತಿ ಎಂದು ಪರಿಗಣಿಸಬಹುದು ಎಂಬ ಹೊಸ ವಿವಾದಾತ್ಮಕ ಕಾನೂನನ್ನು ಅಫ್ಘಾನಿಸ್ಥಾನದ ತಾಲಿಬಾನ್ ಸರ್ಕಾರ ಜಾರಿಗೆ ತಂದಿದೆ. ಇದು ಬಾಲ್ಯವಿವಾಹವನ್ನು ಕಾನೂನುಬದ್ಧಗೊಳಿಸುತ್ತದೆ. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದೆ.

‘ಸಂಗಾತಿಗಳ ನಡುವಿನ ಬೇರ್ಪಡಿಕೆಯ ನಿಯಮಗಳು’ ಎಂಬ 31 ಅನುಚ್ಛೇದಗಳ ಈ ಕಾನೂನನ್ನು ತಾಲಿಬಾನ್ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂದ್ಜಾದ ಅನುಮೋದಿಸಿದ್ದಾರೆ. ಇದನ್ನು ಮೇ ಮಧ್ಯದಲ್ಲಿ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ.ಇದರನ್ವಯ ಪ್ರೌಢಾವಸ್ಥೆ ತಲುಪಿದ ನಂತರ ಕನ್ಯೆ ಮೌನವಾಗಿದ್ದರೆ ಅದನ್ನು ಮದುವೆಗೆ ಸಮ್ಮತಿ ಎಂದು ಪರಿಗಣಿಸಬಹುದು. ಆದರೆ ಹುಡುಗ ಅಥವಾ ಈಗಾಗಲೇ ಮದುವೆಯಾಗಿದ್ದ ಮಹಿಳೆಯ ಮೌನವನ್ನು ಸಮ್ಮತಿ ಎಂದು ಭಾವಿಸಲಾಗುವುದಿಲ್ಲ. ಹಲವು ವಿವಾದಾತ್ಮಕ ನಿಯಮಗಳು: ಬಾಲ್ಯವಿವಾಹವಾದವರು ಪ್ರೌಢಾವಸ್ಥೆಗೆ ಬಂದ ನಂತರ ವಿವಾಹ ರದ್ದುಪಡಿಸುವ ಅವಕಾಶವನ್ನು (ಖಿಯಾರ್ ಅಲ್ ಬುಲೂಘ್) ಕಾನೂನು ಉಲ್ಲೇಖಿಸಿದೆ.

ತಂದೆ ಅಥವಾ ಅಜ್ಜನನ್ನು ಹೊರತುಪಡಿಸಿ ಬೇರೆ ಸಂಬಂಧಿಕರು ಬಾಲಕಿಯ ಮದುವೆ ನಿಶ್ಚಯಿಸಿದರೂ, ಮದುವೆಯಾಗುವ ವ್ಯಕ್ತಿ ಸಾಮಾಜಿಕವಾಗಿ ಹೊಂದಿಕೊಳ್ಳುವಂತಹವನಾಗಿದ್ದರೆ ಆ ಮದುವೆ ಮಾನ್ಯವಾಗುತ್ತದೆ. ನಂತರ ಬಾಲಕಿ ತಾಲಿಬಾನ್ ಕೋರ್ಟ್‌ ಮೂಲಕ ವಿವಾಹ ರದ್ದುಪಡಿಸಲು ಕೇಳಬಹುದು. ತಂದೆ ಮತ್ತು ತಾತ ಬಾಲ್ಯ ವಿವಾಹ ನಡೆಸಲು ವಿಶಾಲ ಅಧಿಕಾರ ಹೊಂದಿದ್ದಾರೆ. ಆದರೆ ಅವರು ದುರ್ಬಳಕೆ ಮಾಡಿಕೊಂಡರೆ, ಮಾನಸಿಕ ಅಸ್ವಸ್ಥತೆ ಹೊಂದಿದ್ದರೆ ಅಥವಾ ನೈತಿಕವಾಗಿ ಕುಸಿದಿದ್ದ ಸಂದರ್ಭಗಳಲ್ಲಿ ಮದುವೆ ರದ್ದುಪಡಿಸಬಹುದು. ಈ ಕಾನೂನು ವ್ಯಭಿಚಾರ ಆರೋಪ, ಧರ್ಮ ಬದಲಾವಣೆ, ಗಂಡನ ದೀರ್ಘಕಾಲದ ಅನುಪಸ್ಥಿತಿ ಇತ್ಯಾದಿ ವಿಷಯಗಳಲ್ಲೂ ತಾಲಿಬಾನ್ ನ್ಯಾಯಾಧೀಶರು ಹಸ್ತಕ್ಷೇಪಿಸುವ ಅಧಿಕಾರ ನೀಡುತ್ತದೆ.ತಾಲಿಬಾನ್ 2021ರ ಆಗಸ್ಟ್‌ನಲ್ಲಿ ಅಧಿಕಾರಕ್ಕೆ ಬಂದ ನಂತರ ಹುಡುಗಿಯರಿಗೆ 6ನೇ ತರಗತಿಯ ನಂತರ ಶಿಕ್ಷಣ ನಿಷೇಧ, ಮಹಿಳೆಯರಿಗೆ ವಿಶ್ವವಿದ್ಯಾಲಯ ನಿಷೇಧ, ಉದ್ಯೋಗ, ಪ್ರಯಾಣ ಮತ್ತು ಸಾರ್ವಜನಿಕ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿದೆ.