ಪ್ರಜ್ವಲ್‌ ವಿಡಿಯೋ ರಿಲೀಸ್‌ ಮಾಡಿದ್ದು ಹಂಗೇರಿಯಿಂದ!

| Published : May 30 2024, 12:49 AM IST / Updated: May 30 2024, 06:17 AM IST

Prajwal Revanna
ಪ್ರಜ್ವಲ್‌ ವಿಡಿಯೋ ರಿಲೀಸ್‌ ಮಾಡಿದ್ದು ಹಂಗೇರಿಯಿಂದ!
Share this Article
  • FB
  • TW
  • Linkdin
  • Email

ಸಾರಾಂಶ

ಮೊನ್ನೆಯ ಹೇಳಿಕೆ ಮೂಲ ಪತ್ತೆಹೆಚ್ಚಿದ ಎಸ್ಐಟಿ, ಜರ್ಮನಿ ಬದಲು ಹಂಗೇರಿಯಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಇರಬಹುದೆಂದು ಅನುಮಾನ ವ್ಯಕ್ತಪಡಿಸಿದೆ.

 ಬೆಂಗಳೂರು

ಅತ್ಯಾಚಾರ ಆರೋಪಿ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಇತ್ತೀಚೆಗೆ ಬಿಡುಗಡೆ ಮಾಡಿದ್ದ ವಿಡಿಯೊ ಮೂಲ ಪತ್ತೆಯಾಗಿದೆ. ಹಂಗೇರಿಯ ಬುಡಾಪೆಸ್ಟ್‌ನಿಂದ ಈ ವಿಡಿಯೊ ಬಿಡುಗಡೆಯಾಗಿರುವುದನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಪತ್ತೆಹಚ್ಚಿದೆ. ಹೀಗಾಗಿ ಅವರು ಬುಡಾಪೆಸ್ಟ್‌ನಲ್ಲಿ ಇರುವುದು ದೃಢಪಟ್ಟಿದೆ.

ಇತ್ತೀಚೆಗೆ ಅಜ್ಞಾತ ಸ್ಥಳದಿಂದ ವಿಡಿಯೊ ಬಿಡುಗಡೆ ಮಾಡಿದ್ದ ಪ್ರಜ್ವಲ್‌, ತಮ್ಮ ಮೇಲಿನ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿ ಮೇ 31ರಂದು ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಆದರೆ, ತಾವಿರುವ ಸ್ಥಳದ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಈ ವಿಡಿಯೊ ಹೊರಬಿದ್ದ ಬೆನಲ್ಲೇ ಎಸ್ಐಟಿ ತಂಡ ಮೊಬೈಲ್‌ ಐಪಿ ವಿಳಾಸದ ಜಾಡು ಹಿಡಿದು ಪರಿಶೀಲಿಸಿದಾಗ ಹಂಗೇರಿ ದೇಶದ ಬುಡಾಪೆಸ್ಟ್‌ ನಗರದಿಂದ ಈ ವಿಡಿಯೊ ಬಿಡುಗಡೆಯಾಗಿರುವುದು ಬೆಳಕಿಗೆ ಬಂದಿದೆ.

ಈ ವಿಡಿಯೊ ಬಿಡುಗಡೆ ಸ್ಥಳ ಪತ್ತೆಹಚ್ಚಿದ ಬಳಿಕ ಎಸ್ಐಟಿ ಅಧಿಕಾರಿಗಳು ಕೇಂದ್ರ ತನಿಖಾ ಸಂಸ್ಥೆಗಳ ಮುಖಾಂತರ ಇಂಟರ್‌ಪೋಲ್‌ಗೆ ಆರೋಪಿ ಪ್ರಜ್ವಲ್‌ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಇಂಟರ್‌ಪೋಲ್‌ ಪ್ರಜ್ವಲ್‌ ಚಲನವಲನದ ಮೇಲೆ ನಿಗಾವಹಿಸಿದೆ.

ಭಾರತಕ್ಕೆ ವಾಪಸ್‌ ಬರಲು ಟಿಕೆಟ್‌ ಬುಕ್‌:

ಪ್ರಜ್ವಲ್‌ ಬಿಡುಗಡೆ ಮಾಡಿದ್ದ ವಿಡಿಯೊದಲ್ಲಿ ಎಸ್ಐಟಿ ವಿಚಾರಣಗೆ ಹಾಜರಾಗುವುದಾಗಿ ತಿಳಿಸಿದ ಬೆನ್ನಲ್ಲೇ ಜರ್ಮನಿಯ ಮ್ಯೂನಿಚ್‌ ನಗರದ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ಲುಫ್ತಾನ್ಸಾ ಏರ್‌ಲೈನ್ಸ್‌ನಲ್ಲಿ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ. ಭಾರತೀಯ ಕಾಲಮಾನ ಗುರುವಾರ ಮಧ್ಯಾಹ್ನ 12.05ಕ್ಕೆ ಜರ್ಮನಿಯಿಂದ ವಿಮಾನದಲ್ಲಿ ಹೊರಟು ತಡರಾತ್ರಿ 12.30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.

ಬಂಧಿಸಲು ಎಸ್‌ಐಟಿ ಸಿದ್ಧತೆ:

ಭಾರತಕ್ಕೆ ವಾಪಸ್‌ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಎಸ್ಐಟಿ ತಂಡವೊಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾನದಲ್ಲಿ ಠಿಕಾಣಿ ಹೂಡಿದೆ. ಈಗಾಗಲೇ ಪ್ರಜ್ವಲ್‌ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿಯಾಗಿರುವುದರಿಂದ ಅವರು ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ವಲಸೆ ಅಧಿಕಾರಿಗಳು ಪ್ರಜ್ವಲ್‌ನನ್ನು ವಶಕ್ಕೆ ಪಡೆದು ಬಳಿಕ ಎಸ್‌ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಲಿದ್ದಾರೆ. ಬಳಿಕ ಎಸ್‌ಐಟಿ ಅಧಿಕಾರಿಗಳು ಆರೋಪಿಯ ಬಂಧನ ಪ್ರಕ್ರಿಯೆ ಮುಗಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ವಾಪಸ್‌ ಅನಿವಾರ್ಯ:

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ಮಾರನೇ ದಿನವೇ ಪ್ರಜ್ವಲ್‌ ರೇವಣ್ಣ ರಾಜತಾಂತ್ರಿಕ ಪಾಸ್‌ ಪೋರ್ಟ್‌ ಮೇಲೆ ಜರ್ಮನಿಗೆ ತೆರಳಿದ್ದರು. ಮೇ 31ಕ್ಕೆ ಲೋಕಸಭಾ ಅವಧಿ ಮುಕ್ತಾಯವಾಗಲಿದೆ. ಇದರ ಜತೆಗೆ ಸಂಸದರ ಅವಧಿಯೂ ಅಂತ್ಯವಾಗಲಿದೆ. ಹೀಗಾಗಿ ಪ್ರಜ್ವಲ್‌ಗೆ ಭಾರತಕ್ಕೆ ವಾಪಸ್‌ ಆಗುವುದು ಅನಿವಾರ್ಯವಾಗಿದೆ.