ಜಿಎಸ್ಟಿ ತೆರಿಗೆ ಇಳಿಕೆ ಲಾಭ ಯಾವುದಕ್ಕೆ ಎಷ್ಟು?

| Published : Sep 05 2025, 01:00 AM IST

ಜಿಎಸ್ಟಿ ತೆರಿಗೆ ಇಳಿಕೆ ಲಾಭ ಯಾವುದಕ್ಕೆ ಎಷ್ಟು?
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರೀಯ ಜಿಎಸ್ಟಿ ಮಂಡಳಿ ಹಾಲಿ ಇದ್ದ ಶೇ.5, ಶೇ.12, ಶೇ.18 ಮತ್ತು ಶೇ.28ರ ಸ್ತರದ ತೆರಿಗೆ ಪದ್ಧತಿ ರದ್ದು ಮಾಡಿ ಕೇವಲ ಶೇ.5 ಮತ್ತು ಶೇ.18ರ ಸ್ತರ ಉಳಿಸಿಕೊಳ್ಳಲು ನಿರ್ಧರಿಸಿದೆ. ಹೀಗಾಗಿ ಶೇ.28 ಮತ್ತು ಶೇ.12ರ ಸ್ತರದ ವಸ್ತುಗಳನ್ನು ಶೇ.18ಕ್ಕೆ ಮತ್ತು ಶೇ.5ಕ್ಕೆ ಇಳಿಸಲಿದೆ. ಇದರಿಂದ ನಿತ್ಯ ಜೀವನದ ಬಳಕೆಯ ಬಹುತೇಕ ವಸ್ತುಗಳ ದರ ಇಳಿಕೆಯಾಗಲಿದೆ. ಅವುಗಳ ಒಂದಿಷ್ಟು ಮಾಹಿತಿ ಇಲ್ಲಿದೆ.

ಕೇಂದ್ರೀಯ ಜಿಎಸ್ಟಿ ಮಂಡಳಿ ಹಾಲಿ ಇದ್ದ ಶೇ.5, ಶೇ.12, ಶೇ.18 ಮತ್ತು ಶೇ.28ರ ಸ್ತರದ ತೆರಿಗೆ ಪದ್ಧತಿ ರದ್ದು ಮಾಡಿ ಕೇವಲ ಶೇ.5 ಮತ್ತು ಶೇ.18ರ ಸ್ತರ ಉಳಿಸಿಕೊಳ್ಳಲು ನಿರ್ಧರಿಸಿದೆ. ಹೀಗಾಗಿ ಶೇ.28 ಮತ್ತು ಶೇ.12ರ ಸ್ತರದ ವಸ್ತುಗಳನ್ನು ಶೇ.18ಕ್ಕೆ ಮತ್ತು ಶೇ.5ಕ್ಕೆ ಇಳಿಸಲಿದೆ. ಇದರಿಂದ ನಿತ್ಯ ಜೀವನದ ಬಳಕೆಯ ಬಹುತೇಕ ವಸ್ತುಗಳ ದರ ಇಳಿಕೆಯಾಗಲಿದೆ. ಅವುಗಳ ಒಂದಿಷ್ಟು ಮಾಹಿತಿ ಇಲ್ಲಿದೆ.

ಸಣ್ಣ ಕಾರು ಬೆಲೆ ಕನಿಷ್ಠ ₹45000 ಗರಿಷ್ಠ 1 ಲಕ್ಷ ರು.ವರೆಗೆ ಇಳಿಕೆ

ಜಿಎಸ್ಟಿ ತೆರಿಗೆ ಸ್ತರ ಬದಲಾವಣೆ ಹಿನ್ನೆಲೆಯಲ್ಲಿ ವಿವಿಧ ಮಾದರಿ ಕಾರುಗಳ ಬೆಲೆ 45,000 ರು.ನಿಂದ 1 ಲಕ್ಷ ರು.ವರೆಗೆ ಇಳಿಕೆಯಾಗುವ ಸಾಧ್ಯತೆ ಇದೆ. ಪ್ರಸಕ್ತ ಸಣ್ಣ ಕಾರುಗಳು ಶೇ.28ರ ತೆರಿಗೆ ಸ್ತರದಲ್ಲಿದ್ದವು. ಅದನ್ನು ಶೇ.18ಕ್ಕೆ ಇಳಿಸಿದ ಪರಿಣಾಮ ಬೆಲೆ 45000 ರು.ನಿಂದ 1 ಲಕ್ಷ ರು.ವರೆಗೂ ಕಡಿಮೆ ಆಗಲಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಣ್ಣಕಾರುಗಳ ಪಾಲು ಶೇ.30ರಷ್ಟು ಇದೆ. ಹೀಗಾಗಿ ಈ ಬೆಲೆ ಇಳಿಕೆ ಗ್ರಾಹಕರಿಗೆ ದೊಡ್ಡ ಮಟ್ಟದಲ್ಲಿ ಲಾಭ ತರಲಿದೆ.

50 ಕೇಜಿ ಸಿಮೆಂಟ್‌ ಚೀಲದ ದರ 30 ರು.ಇಳಿಕೆ ನಿರೀಕ್ಷೆ

ಜಿಎಸ್‌ಟಿ ಸ್ತರ ಬಸುಧಾರಣೆಯಿಂದ ಸಿಮೆಂಟ್‌ ಮೇಲಿನ ತೆರಿಗೆಯು ಶೇ. 28 ರಿಂದ ಶೇ.18ಕ್ಕೆ ಇಳಿಸಲಾಗಿದೆ. ಇದರಿಂದ ಪ್ರತಿ 50 ಕೇಜಿ ಸಿಮೆಂಟ್‌ ದರ 25-30 ರು. ಇಳಿಕೆಯಾಗಲಿದೆ. ಕಟ್ಟಡ ನಿರ್ಮಾಣಕ್ಕೆ ಬಳಸುವ ಇತರ ಸಾಮಾಗ್ರಿಗಳಿಗೆ ಹೋಲಿಸಿದರೆ ಸಿಮೆಂಟ್‌ಗೆ ಅತ್ಯಧಿಕ ದರದಲ್ಲಿ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಇದೀಗ ಜಿಎಸ್ಟಿ ಕಡಿತ , ಬೆಲೆ ಇಳಿಕೆಯಿಂದ ಜನಸಾಮಾನ್ಯರಿಗೆ ಬಹುದೊಡ್ಡ ರಿಲೀಫ್‌ ಸಿಕ್ಕಂತಾಗಲಿದೆ. ಅಲ್ಲದೇ ಕಟ್ಟಡ ನಿರ್ಮಾಣ ಕಾಮಗಾರಿ ಮತ್ತಷ್ಟು ವೇಗ ಪಡೆಯುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ಜೂನ್‌ನಲ್ಲಿ 50 ಕೇಜಿ ಸಿಮೆಂಟ್‌ ಚೀಲದ ದೂರ 355 ರು.ಗಳಷ್ಟಿತ್ತು. ಇದೀಗ ಬೆಲೆ ಇಳಿಕೆಯಾದರೆ 320-330ರು.ಗೆ ಲಭ್ಯವಾಗಲಿದೆ.

ವಿಮಾನದ ಟಿಕೆಟ್‌ ದರ ಮತ್ತಷ್ಟು ಏರಿಕೆ ಶಾಕ್‌

ಜಿಎಸ್ಟಿ ಪರಿಷ್ಕರಣೆಯು ಹಲವು ವಸ್ತುಗಳ ಮೇಲಿನ ಬೆಲೆಯನ್ನು ಇಳಿಕೆ ಮಾಡಿದ್ದರೆ, ಮತ್ತೊಂದಷ್ಟು ವಸ್ತುಗಳು ಮತ್ತು ಸೇವೆಗಳ ಬೆಲೆಯು ಏರಿಕೆಯಾಗಲಿವೆ. ಅವುಗಳಲ್ಲಿ ವಿಮಾನದ ಟಕೆಟ್‌ಗಳು ಸಹ ಒಂದಾಗಿದೆ. ಪ್ರಿಮಿಯಂ ಎಕಾನಮಿ ಮತ್ತು ಬಿಸಿನೆಸ್ ಕ್ಲಾಸ್‌ ಮೇಲಿನ ಜಿಎಸ್ಟಿಯು ಶೇ.12ರಿಂದ ಶೇ.18ಕ್ಕೆ ಏರಿಕೆಯಾಗಿದೆ. ಪರಿಣಾಮ ಸೆ.22ರಿಂದ ಬೆಲೆಯೂ ಏರಿಕೆಯಾಗಲಿದೆ. ಉಳಿದಂತೆ ಎಕಾನಮಿ ಟಿಕೆಟ್‌ ಮೇಲೆ ಜಿಎಸ್ಟಿಯು ಹಿಂದಿನಂತೆ ಶೇ.5ರಷ್ಟೇ ಇರಲಿದೆ.

ಬೆಣ್ಣೆ, ಫ್ರುಟ್ ಜ್ಯೂಸ್‌, ಐಸ್‌ ಕ್ರೀಂ, ಚಾಕಲೆಟ್‌ ಕೇಕ್ ಇನ್ನು ಅಗ್ಗ

ಬೆಣ್ಣೆ ಮತ್ತು ಫ್ರುಟ್‌ ಜ್ಯೂಸ್‌ ಮೇಲಿನ ಜಿಎಸ್ಟಿ ಶೇ.12ರಿಂದ ಶೇ.5ಕ್ಕೆ ಇಳಿಕೆಯಾದ ಪರಿಣಾಮ 100 ಗ್ರಾಂ ಬೆಣ್ಣೆ ಬೆಲೆ 4 ರು. ಇಳಿಕೆಯಾಗಲಿದೆ. ಫ್ರುಟ್‌ಜ್ಯೂಸ್‌ (1 ಲೀ) 8 ರು. ಕಡಿಮೆಯಾಗಲಿದೆ. ಅದೇ ರೀತಿ ಐಸ್‌ಕ್ರೀಂ ಮತ್ತು ಚಾಕಲೆಟ್‌ ಕೇಕ್‌ ಜಿಎಸ್ಟಿಯು ಶೇ.18ರಿಂದ ಶೇ.5ಕ್ಕೆ ಇಳಿಕೆಯಾದ ಪರಿಣಾಮ ಐಸ್‌ಕ್ರೀಂ (1ಲೀ) ಬೆಲೆ 33 ರು. ಹಾಗೂ ಚಾಕಲೇಟ್‌ ಕೇಕ್‌ (1ಕೇಜಿ) ಬೆಲೆ 94 ರು. ಕಡಿಮೆಯಾಗಲಿದೆ.

ಮೂವಿ ಟಿಕೆಟ್‌, ಹೋಟೆಲ್ ರೂಂ ಅಗ್ಗ

ಇವುಗಳ ಜಿಎಸ್ಟಿಯು ಶೇ.12ರಿಂದ ಶೇ.5ಕ್ಕೆ ಇಳಿಕೆಯಾಗಿರುವ ಪರಿಣಾಮ ಟಿಕೆಟ್‌ ಬೆಲೆ 19 ರು. ಇಳಿಯಲಿದೆ. ಅದೇ ರೀತಿ ಒಂದು ರಾತ್ರಿಗೆ 7500 ರು.ಗಿಂತ ಕಡಿಮೆ ಇರುವ ಹೋಟೆಲ್‌ ರೂಂ ಬೆಲೆಯು 469 ರು. ಕಡಿಮೆಯಾಗಲಿದೆ.

ಟೀವಿ, ಏಸಿ ಸಹ ಅಗ್ಗ

ಟೀವಿ, ಏಸಿ ಸೇರಿ ಶೇ.28ರಷ್ಟು ಜಿಎಸ್ಟಿ ಹೊಂದಿದ್ದ ವಸ್ತುಗಳ ಮೇಲಿನ ತೆರಿಗೆಯು ಶೇ.18ಕ್ಕೆ ಕುಸಿಯಲಿದೆ. ಹೀಗಾಗಿ ಅವುಗಳ ಬೆಲೆಯೂ ಕಡಿಮೆಯಾಗಲಿದೆ. 43 ಇಂಚಿನ ಟೀವಿ ಬೆಲೆಯು 2422 ರು., ಏಸಿ ಬೆಲೆಯು 3516 ರು., ಡಿಶ್‌ವಾಶರ್‌ ಬೆಲೆಯು 2000 ರು. ಕಡಿಮೆಯಾಗಿದೆ.

ಬೈಕ್ ಕಾರ್‌ಗಳು ಸೋವಿ

350 ಸಿಸಿಗಿಂತ ಕಡಿಮೆ ಇರುವ ದ್ವಿಚಕ್ರ ವಾಹನಗಳು, 1200 ಸಿಸಿ ಮೇಲ್ಪಟ್ಟ ಪೆಟ್ರೋಲ್‌ ಮತ್ತು 1500 ಸಿಸಿ ಮೇಲ್ಪಟ್ಟ ಡೀಸೆಲ್ ಕಾರುಗಳು ಹೊರತು ಮಿಕ್ಕ ಕಾರುಗಳ ಜಿಎಸ್ಟಿಯು ಶೇ.28ರಿಂದ ಶೇ.18ಕ್ಕೆ ಇಳಿಕೆಯಾಗಲಿದೆ. ಪರಿಣಾಮ ಹೀರೋ ಸ್ಪೆಂಡರ್‌ಪ್ಲಸ್‌ ಬೈಕ್‌ 6181 ರು. ಕಡಿಮೆಯಾಗಲಿದೆ. ಬಜಾಜ್‌ ಪಲ್ಸರ್‌ ಎನ್‌160 10,000 ರು. ಇಳಿಯಲಿದೆ.

==

ವಿಮೆ ತೆರಿಗೆ ರದ್ದು ಯಾರಿಗೆ ಅನ್ವಯ?

ನವದೆಹಲಿ: ಜಿಎಸ್‌ಟಿ ಸ್ತರ ಬದಲಾವಣೆ ಅನ್ವಯ ಶೇ.18ರಷ್ಟು ತೆರಿಗೆ ವ್ಯಾಪ್ತಿಯಲ್ಲಿದ್ದ ಆರೋಗ್ಯ, ಜೀವ ವಿಮೆ ಇನ್ನು ಶೂನ್ಯ ವಿಮೆಗೆ ಒಳಪಡಲಿವೆ. ಹೀಗಿರುವಾಗ, ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ವಿಮೆ ಮೇಲಿನ ಶೂನ್ಯ ಜಿಎಸ್‌ಟಿ ಯಾರಿಗೆ, ಯಾವಾಗ, ಹೇಗೆ ಅನ್ವಯವಾಗಲಿದೆ ಎಂಬ ಬಗ್ಗೆ ಮಾಹಿತಿ ನೀಡಿದೆ. ಹೊಸ ಜಿಎಸ್‌ಟಿ ಜಾರಿಯ ಬಳಿಕವೇ ಪ್ರೀಮಿಯಂ ಕಟ್ಟಲು ಹೊರಟಿರುವವರು ತಿಳಿದುಕೊಳ್ಳಲೇಬೇಕಾದ ಕೆಲ ಅಂಶಗಳು ಇಲ್ಲಿವೆ.ಪ್ರಶ್ನೆ: ಹೊಸ ಜಿಎಸ್‌ಟಿ ಜಾರಿಗೆ ಮುನ್ನ ಪ್ರೀಮಿಯಂ ಪಾವತಿಸಿದರೆ ಮರುಪಾವತಿ ಸಿಗುವುದೇ?ಉತ್ತರ: ಇಲ್ಲ. ಈಗಾಗಲೇ ಜಿಎಸ್‌ಟಿ ಸಹಿತ ಪ್ರೀಮಿಯಂ ಕಟ್ಟಿದ್ದರೆ, ವಹಿವಾಟಿನ ವೇಳೆ ಕಡಿತವಾದ ತೆರಿಗೆ ಹಣ ಮರುಪಾವತಿ ಆಗದು. ಈಗಿನ ಪಾಲಿಸಿಗಳು ಯಾವುದೇ ಬದಲಾವಣೆಯಿಲ್ಲದೆ ಹಾಗೆಯೇ ಇರಲಿವೆ.

ಪ್ರಶ್ನೆ: ಈಗಿನ ಪಾಲಿಸಿಯಲ್ಲಿ ಏನಾದರೂ ಬದಲಾಗಲಿದೆಯೇ?

ಉತ್ತರ: ಇಲ್ಲ. ನಿಮ್ಮ ಪಾಲಿಸಿಯ ಅವಧಿ, ಮೊತ್ತ, ಲಾಭಗಳು ಯಾವುದೇ ಬದಲಾವಣೆಯಿಲ್ಲದೆ ಮುಂದುವರೆಯಲಿದೆ.ಪ್ರಶ್ನೆ: ಶೂನ್ಯ ಸ್ತರದ ಲಾಭ ಲಭಿಸುವುದು ಯಾವಾಗ?ಉತ್ತರ: ಈ ವರ್ಷದ ಸೆ.22ರ ಬಳಿಕ ನವೀಕರಣವಾಗಲಿರುವ ವಿಮೆಗಳು ಶೂನ್ಯ ಸ್ತರಕ್ಕೆ ಒಳಪಡಲಿವೆ.

ಪ್ರಶ್ನೆ: ತೆರಿಗೆ ಶೂನ್ಯವಾದ ಬಳಿಕವೂ ಪ್ರೀಮಿಯಂ ಮೊತ್ತ ಮೊದಲಿನಂತೆಯೇ ಇರುವುದೇ?

ಉತ್ತರ: ಇಲ್ಲ. ಸೆ.22ರ ಬಳಿಕ ವಿಮೆಯ ಮೇಲೆ ಯಾವುದೇ ಜಿಎಸ್‌ಟಿ ಅನ್ವಯವಾಗದಿದ್ದರೂ, ಕಟ್ಟಬೇಕಾದ ಪ್ರೀಮಿಯಂ ಶುಲ್ಕದಲ್ಲಿ ಕೊಂಚ ಏರಿಕೆಯಾಗಲಿದೆ. ಕಾರಣ, ಪ್ರೀಮಿಯಂ ಮೊತ್ತದ ಮೇಲೆ ಶೇ.1-4ರಷ್ಟು ನಿರ್ವಹಣಾ ಶುಲ್ಕ ವಿಧಿಸಲಾಗುವುದು. ಆದರೆ ಇದು ಜಿಎಸ್‌ಟಿಗಿಂತ ಕಡಿಮೆಯೇ ಇರಲಿರುವುದರಿಂದ, ವಿಮಾದಾರರಿಗೆ ಹೊರೆಯಾಗದು.