ಸಾರಾಂಶ
ನವದೆಹಲಿ: ದಶಕಗಳ ಬಳಿಕ ಮತ್ತೆ ಕಿರುತೆರೆಗೆ ಮರಳಿರುವ ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಅಭಿನಯಿಸುತ್ತಿರುವ ‘ಕ್ಯೂಂಕಿ ಸಾಸ್ ಬೀ ಕಭಿ ಬಹು ಥಿ’ ಧಾರಾವಾಹಿಯ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ತುಳಸಿ ವಿರ್ವಾನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸ್ಮೃತಿಯ ಮೊದಲ ಲುಕ್ ಬಿಡುಗೆಯಾಗಿದೆ. ಈ ಲುಕ್‌ನಲ್ಲಿ ಸ್ಮೃತಿ ಜರಿ ಬಣ್ಣದ ಬಾರ್ಡರ್ ಇರುವ ಮರೂನ್ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದು, ಕೆಂಪು ಬಣ್ಣದ ದೊಡ್ಡ ಬಿಂದಿ, ಆಭರಣಗಳನ್ನು ಧರಿಸಿದ್ದಾರೆ. ಈ ಧಾರಾವಾಹಿ 2000-2008 ರವರೆಗೆ ಸತತ 8 ವರ್ಷ ಟೀವಿ ರೇಟಿಂಗ್‌ನಲ್ಲಿ ನಂ.1 ಸ್ಥಾನದಲ್ಲಿತ್ತು.
ರಿಯಲ್ ಎಸ್ಟೇಟ್ ಸಂಸ್ಥೆ ವಂಚನೆ: ರಾಯಭಾರಿ ಮಹೇಶ್‌ಬಾಬುಗೆ ಸಂಕಷ್ಟ
ಹೈದರಾಬಾದ್: ತೆಲುಗು ನಟ ಮಹೇಶ್ ಬಾಬು ಅವರಿಗೆ ರಿಯಲ್ ಎಸ್ಟೇಟ್ ವಂಚನೆ ಪ್ರಕರಣದಲ್ಲಿ ರಂಗಾರೆಡ್ಡಿ ಜಿಲ್ಲಾ ಗ್ರಾಹಕ ಆಯೋಗ ನೋಟಿಸ್ ನೀಡಿದೆ. ರಿಯಲ್ ಎಸ್ಟೇಟ್ ಸಂಸ್ಥೆಯೊಂದಕ್ಕೆ ಮಹೇಶ್ ಬಾಬು ರಾಯಭಾರಿಯಾಗಿದ್ದರು. ವೈದ್ಯೆಯೊಬ್ಬರು ಈ ಸಂಸ್ಥೆಗೆ 34.8 ಲಕ್ಷ ರು. ಪಾವತಿಸಿ ಪ್ಲಾಟ್ ಖರೀದಿಸಿದ್ದರು. ಆದರೆ ಹಣ ಪಾವತಿಸಿದ ಬಳಿಕ ಆ ಜಾಗಕ್ಕೆ ನಿಜವಾದ ಅನುಮೋದನೆ ಇಲ್ಲ ಎಂದು ತಿಳಿದುಬಂದಿದೆ. ಮಹೇಶ್ ಬಾಬು ಈ ಸಂಸ್ಥೆಗೆ ರಾಯಭಾರಿಯಾಗುವ ಮೂಲಕ ತನ್ನಂತೆ ಹಲವು ಗ್ರಾಹಕರ ದಿಕ್ಕು ತಪ್ಪಿಸಿದ್ದಾರೆ ಎಂದು ದೂರುದಾರೆ ಆರೋಪಿಸಿದ್ದಾರೆ. ಪ್ರಕರಣದಲ್ಲಿ ಮಹೇಶ್ ಬಾಬು ಅವರನ್ನು 3ನೇ ಪ್ರತಿವಾದಿಯಾಗಿ ಪರಿಗಣಿಸಲಾಗಿದೆ.
ಹೋಮಿಯೋಪತಿ ವೈದ್ಯರಿಗೆ ಅಲೋಪತಿ ಔಷಧ ನೀಡಲು ಅನುಮತಿ: ಐಎಂಎ ಕಿಡಿ
ಮುಂಬೈ: ಆರು ತಿಂಗಳ ಫಾರ್ಮಾ ಕೋರ್ಸ್ ಪೂರ್ಣಗೊಳಿಸಿದ ಬಳಿಕ ಹೋಮಿಯೋಪಥಿ ವೈದ್ಯರು ಅಲೋಪತಿ ಔಷಧ ಶಿಫಾರಸು ಮಾಡಲು ಅನುಮತಿಸಿರುವ ಮಹಾರಾಷ್ಟ್ರ ವೈದ್ಯಕೀಯ ಮಂಡಳಿ (ಎಂಎಂಸಿ) ಅಧಿಸೂಚನೆಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆಕ್ಷೇಪಿಸಿದೆ. ಜೂ.30ರಂದು ಎಂಎಂಸಿ, ಹೋಮಿಯೋಪಥಿ ವೈದ್ಯರು ಆಧುನಿಕ ಔಷಧಶಾಸ್ತ್ರ ಅಭ್ಯಾಸ ಮಾಡಲು ರಾಜ್ಯ ವೈದ್ಯಕೀಯ ಶಿಕ್ಷಣ ಮತ್ತು ಔಷಧ ಇಲಾಖೆಗೆ ಆಧುನಿಕ ಔಷಧಶಾಸ್ತ್ರದಲ್ಲಿ ಪ್ರಮಾಣಪತ್ರ ಕೋರ್ಸ್ (ಸಿಸಿಎಂಪಿ) ಪ್ರಾರಂಭಿಸಲು ಅನುಮತಿ ನೀಡಿದೆ ಎಂದು ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ಐಎಂಎ ಉಪಾಧ್ಯಕ್ಷ ಶಿವಕುಮಾರ್ ಉತ್ತರೆ ಪ್ರತಿಕ್ರಿಯಿಸಿದ್ದು, ‘ ಇದು ತಪ್ಪು ಮತ್ತು ನಾವು ವಿರೋಧಿಸುತ್ತೇವೆ. ಏಕೆಂದರೆ ಇದು ರೋಗಿಗಳನ್ನು ವಂಚಿಸುತ್ತದೆ. ಆಧುನಿಕ ವೈದ್ಯಕೀಯ ಪದ್ಧತಿಗಳನ್ನು ದುರ್ಬಲಗೊಳಿಸುತ್ತದೆ’ ಎಂದಿದ್ದಾರೆ.
ಇದನ್ನು ಪ್ರಶ್ನಿಸಿ ಐಎಂಎ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದೆ.
ಕ್ಲಿಪ್, ಸಣ್ಣ ಚಾಕು ಬಳಸಿ ಹೆರಿಗೆ ಮಾಡಿಸಿದ ಸೇನಾ ವೈದ್ಯಗೆ ಸೇನೆ ಮೆಚ್ಚುಗೆ
ನವದೆಹಲಿ: ಭಾನುವಾರ ಯುಪಿಯ ಝಾನ್ಸಿಯಲ್ಲಿ ಕ್ಲಿಪ್ ಮತ್ತು ಜೇಬಿನಲ್ಲಿಡಬಹುದಾದ ಸಣ್ಣ ಚಾಕುವಿನಿಂದ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿ ಎರಡು ಜೀವ ಉಳಿಸಿದ್ದ ಸೇನಾ ವೈದ್ಯ ಮೇಜರ್ ಡಾ. ರೋಹಿತ್ ಬಚ್ವಾಲಾ ಅವರ ನಡೆಯನ್ನು ಭಾರತೀಯ ಸೇನಾ ಮುಖ್ಯಸ್ಥ ಜ. ಉಪೇಂದ್ರ ದ್ವಿವೇದಿ ಶ್ಲಾಘಿಸಿದ್ದಾರೆ. ಜು.5ರಂದು ಹೈದರಾಬಾದ್‌ನಿಂದ ಝಾನ್ಸಿಯ ಮಿಲಿಟರಿಯ ಅಸ್ಪತ್ರೆಯಿಂದ ತಮ್ಮ ಊರು ಹೈದರಾಬಾದ್‌ಗೆ ಹಿಂದಿರುಗುತ್ತಿದ್ದಾಗ ರೈಲು ನಿಲ್ದಾಣದಲ್ಲಿ ಹೆರಿಗೆ ನೀವು ಕಾಣಿಸಿಕೊಂಡಿದ್ದ ಮಹಿಳೆಗೆ ಕ್ಲಿಪ್ ಮತ್ತು ಜೇಬಿನಲ್ಲಿಡಬಹುದಾದ ಸಣ್ಣ ಚಾಕುವಿನಿಂದ ಹೆರಿಗೆ ಮಾಡಿಸಿದ್ದರು. ಇದನ್ನು ಶ್ಲಾಘಿಸಿರುವ ಜ. ದ್ವಿವೇದಿ ಅವರು ರೋಹಿತ್ ಅವರ ವೃತ್ತಿಪರತೆ ಮತ್ತು ನಿಸ್ವಾರ್ಥ ಬದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸೇನೆ ಹೇಳಿಕೊಂಡಿದೆ.
ಸಂಪತ್ತು ಸೃಷ್ಟಿಗಾಗಿ ಅಂಚೆ ಇಲಾಖೆ ಹೆಚ್ಚುವರಿ ಭೂಮಿ ರಿಯಲ್ ಎಸ್ಟೇಟ್‌ಗೆ ಬಳಕೆ
ನವದೆಹಲಿ: ದೇಶದ 1.6 ಲಕ್ಷ ಅಂಚೆ ಕಚೇರಿಗಳನ್ನು ಒಳಗೊಂಡಂತೆ ಇಡೀ ವ್ಯವಸ್ಥೆಯ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಉದ್ದೇಶದಿಂದ ಅಂಚೆ ಇಲಾಖೆಯು ತನ್ನ ಆಸ್ತಿಗಳನ್ನು ರಿಯಲ್ ಎಸ್ಟೇಟ್‌ಗೆ ಬಳಸಲು ಮುಂದಾಗಿದೆ. ತನ್ನ ಒಡೆತನದಲ್ಲಿರುವ ಭೂಮಿಯಲ್ಲಿ ಕಟ್ಟಡಗಳನ್ನು ನಿರ್ಮಿಸಿ, ಅವುಗಳನ್ನು ಬಾಡಿಗೆಗೆ ನೀಡಲು ಯೋಚಿಸುತ್ತಿದೆ ಎಂದು ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾಹಿತಿ ನೀಡಿದ್ದಾರೆ.
‘ಅಂಚೆ ಇಲಾಖೆ ಪ್ರಸ್ತುತ ಸುಮಾರು 27,000 ಕೋಟಿ ರು. ವೆಚ್ಚವನ್ನು ಭರಿಸುತ್ತಿದೆ. ಆದರೆ ಕೇವಲ12,000 ಕೋಟಿ ರು. ಆದಾಯ ಗಳಿಸುತ್ತಿದೆ. ಮುಂದಿನ 5 ವರ್ಷಗಳಲ್ಲಿ ಆರ್ಥಿಕವಾಗಿ ಸುಸ್ಥಿರತೆ ಸಾಧಿಸುವ ಉದ್ದೇಶದಿಂದ, ದೇಶಾದ್ಯಂತ ಇಲಾಖೆ ಹೊಂದಿರುವ ಆಸ್ತಿಗಳನ್ನು ಗುರುತಿಸಿ, ಅಲ್ಲಿ ಕಟ್ಟಡಗಳನ್ನು ನಿರ್ಮಿಸಿ ಗುತ್ತಿಗೆಗೆ ನೀಡಲು ಮುಂದಾಗಿದೆ. ಅಂಚೆ ಇಲಾಖೆಯ ಕಾರ್ಯಚಟುವಟಿಕೆಗಳ ಜೊತೆ ಜೊತೆಗೇ, ಈ ಕಟ್ಟಡಗಳನ್ನು ವಾಣಿಜ್ಯಿಕವಾಗಿ ಲಾಭದಾಯಕವಾಗುವಂತೆ ಮಾಡಲು ಸಿದ್ಧತೆ ನಡೆಸುತ್ತಿದೆ’ ಎಂದು ತಿಳಿಸಿದ್ದಾರೆ.
ವಾಮಾಚಾರ ಶಂಕೆಯಲ್ಲಿ ಒಂದೇ ಕುಟುಂಬದ ಐವರ ಹತ್ಯೆಗೈದು ಸಜೀವ ದಹನ
ಪೂರ್ಣಿಯಾ: ಮಾಟ ಮಂತ್ರ ಮಾಡುತ್ತಿದ್ದಾರೆಂದು ಅರೋಪಿಸಿ ಜನರ ಗುಂಪು ಒಂದೇ ಕುಟುಂಬದ ಐವರನ್ನು ಹತ್ಯೆಗೈದು ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಜೀವ ದಹನ ಮಾಡಿರುವ ಆಘಾತಕಾರಿ ಘಟನೆ ಬಿಹಾರ ಪೂರ್ಣಿಯಾ ಜಿಲ್ಲೆಯಲ್ಲಿ ನಡೆದಿದೆ.ಇಲ್ಲಿನ ರಾಜಿಗಂಜ್ ಪಂಚಾಯತ್‌ನ ಮುಫಾಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ತೆಟ್ಗಾಮಾ ಗ್ರಾಮದಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ಒರಾಯನ್ ಸಮುದಾಯಕ್ಕೆ ಸೇರಿದ ಸುಮಾರು 250 ಮಂದಿಯ ಜನರ ಗುಂಪೊಂದು ಕುಟುಂಬ ಐವರಿಗೆ ವಾಮಾಚಾರ ಮಾಡುತ್ತಿದ್ದಾರೆಂದು ಆರೋಪಿಸಿ ಥಳಿಸಿದ್ದಾರೆ. ಬಳಿಕ ಪೆಟ್ರೋಲ್ ಸುರಿದು ಸಜೀವವಾಗಿ ಬೆಂಕಿ ಹಚ್ಚಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸದ್ಯ ಮೂವರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಸುಟ್ಟ ಬಟ್ಟೆಗಳು ಪತ್ತೆಯಾಗಿದ್ದು, ಸತ್ತಿರುವವರ ಶವಪತ್ತೆಗೆ ಶೋಧ ಮುಂದುವರೆಸಿದ್ದಾರೆ.
ಸೌದಿಯಲ್ಲಿ ಕಳೆದ ವರ್ಷ 345 ಮಂದಿಗೆ ಗಲ್ಲು: ಈ ವರ್ಷ ಈಗಾಗಲೇ 180
ದುಬೈ: ಅಪರಾಧ ಪ್ರಕರಣಗಳಲ್ಲಿ ಕಠಿಣಾತಿಕಠಿಣ ಕಾನೂನು ಹೊಂದಿರುವ ಸೌದಿ ಅರೇಬಿಯಾದಲ್ಲಿ ಕಳೆದ ವರ್ಷ 345 ಮಂದಿಗೆ ಗಲ್ಲು ಶಿಕ್ಷೆಯನ್ನು ಸರ್ಕಾರ ವಿಧಿಸಿದೆ. ಅದರಲ್ಲಿ ಮಾದಕ ವಸ್ತುವಿಗೆ ಸಂಬಂಧಿಸಿದ ಪ್ರಕರಣಗಳಲ್ಲೇ ಗುರಿಯಾಗಿರುವವರು ಜಾಸ್ತಿ ಎಂದು ಅಮ್ನೆಸ್ಟಿ ಅಂತಾರಾಷ್ಟ್ರೀಯ ಸಂಸ್ಥೆ ಹೇಳಿದೆ.ಕಳೆದ ವರ್ಷ 345 ಮಂದಿಯನ್ನು ಗಲ್ಲಿಗೇರಿಸಿರುವುದು ಮೂರು ದಶಕಗಳ ದಾಖಲೆಯಾಗಿದೆ. ಮತ್ತೊಂದೆಡೆ ಪ್ರಸ್ತಕ ವರ್ಷದ ಆರು ತಿಂಗಳಿನಲ್ಲಿಯೇ ಇದುವರೆಗೆ 180 ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಈ ವರ್ಷ ಕಳೆದ ವರ್ಷದ ಸಂಖ್ಯೆಯನ್ನು ಮೀರಿಸುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸೌದಿ ಅರೇಬಿಯಾದಲ್ಲಿ ಮರಣದಂಡನೆ ಹೆಚ್ಚುತ್ತಿರುವುದರ ಬಗ್ಗೆ ಅಲ್ಲಿನ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ 2024ರಲ್ಲಿ ಗಲ್ಲಿಗೆ ಗುರಿಯಾಗಿರುವವರ ಪೈಕಿ ಮೂರನೇ ಎರಡರಷ್ಟು ಮಂದಿ ಮಾರಕವಲ್ಲದ ಮಾದಕ ವಸ್ತು ಅಪರಾಧ ಪ್ರಕರಣದಲ್ಲಿಯೇ ಸೇರಿದವರಾಗಿದ್ದಾರೆ ಎಂದು ಅಮ್ನೆಸ್ಟಿ ಹೇಳಿದೆ.