ಸಾರಾಂಶ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ‘ಬಡಪಾಯಿ ಮಹಿಳೆ’ ಎಂದು ಕರೆದ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಜಾರಿಗೆ ಅವಕಾಶ ಕೋರಿ ಬಿಜೆಪಿಯ ಬುಡಕಟ್ಟು ಸಮುದಾಯದ ಸಂಸದರು ರಾಜ್ಯಸಭೆಯ ಸಭಾಧ್ಯಕ್ಷರಿಗೆ ನೋಟಿಸ್ ಸಲ್ಲಿಸಿದ್ದಾರೆ
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ‘ಬಡಪಾಯಿ ಮಹಿಳೆ’ ಎಂದು ಕರೆದ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಜಾರಿಗೆ ಅವಕಾಶ ಕೋರಿ ಬಿಜೆಪಿಯ ಬುಡಕಟ್ಟು ಸಮುದಾಯದ ಸಂಸದರು ರಾಜ್ಯಸಭೆಯ ಸಭಾಧ್ಯಕ್ಷರಿಗೆ ನೋಟಿಸ್ ಸಲ್ಲಿಸಿದ್ದಾರೆ. ಜೊತೆಗೆ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಮಾಡಿದ ಭಾಷಣವನ್ನು ‘ಕೇಂದ್ರ ಸರ್ಕಾರದ ಲವ್ ಲೆಟರ್’ ಎಂದ ಸಂಸದ ಪಪ್ಪು ಯಾದವ್ ವಿರುದ್ಧವೂ ಕ್ರಮಕ್ಕೆ ಕೋರಲಾಗಿದೆ.
ಬಿಜೆಪಿಯ ರಾಜ್ಯಸಭಾ ಸದಸ್ಯ ಸುಮೇರ್ ಸಿಂಗ್ ಸೋಲಂಕಿ ಅವರನ್ನೊಳಗೊಂಡ ಸಂಸದರ ನಿಯೋಗ, ಸೋಮವಾರ ರಾಜ್ಯಸಭೆಯ ಸಭಾಧ್ಯಕ್ಷ ಜಗದೀಪ್ ಧನಕರ್ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿತು.
ಮನವಿಯಲ್ಲಿ, ‘ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತ ಸೋನಿಯಾ ಹೇಳಿಕೆ ರಾಷ್ಟ್ರಪತಿ ಭವನದ ಘನತೆಯನ್ನು ತಗ್ಗಿಸಿದೆ. ಈ ಹೇಳಿಕೆ ಸೋನಿಯಾ ಗಾಂಧಿ ಅವರ ಬುಡಕಟ್ಟು ವಿರೋಧಿ ಮನಸ್ಥಿತಿ ಮತ್ತು ಬಡ ಬುಡಕಟ್ಟು ಸಮುದಾಯದ ಜನರ ಹೋರಾಟ ಮತ್ತು ಸೂಕ್ಷ್ಮತೆಯನ್ನು ಅವರಿನ್ನೂ ಅರ್ಥ ಮಾಡಿಕೊಂಡಿಲ್ಲ ಎಂಬುದನ್ನು ತೋರಿಸುತ್ತದೆ’ ಎಂದು ಹೇಳಿದೆ.
ಜೊತೆಗೆ, ‘ಯಾರ ವಿರುದ್ಧವೂ ಅವಮಾನಕಾರಿ ಪದ ಬಳಸಬಾರದು ಎಂಬ ಸಂಸತ್ತಿನ ನೀತಿ ಮತ್ತು ಕಾರ್ಯವಿಧಾನಗಳ ಪಾವಿತ್ರ್ಯತೆಯ ಉಲ್ಲಂಘನೆಯೂ ಆಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತುಕ್ರಮ ಕೈಗೊಳ್ಳಬೇಕು. ಜೊತೆಗೆ ಇದು ಭಾರತದ ರಾಷ್ಟ್ರಪತಿಗಳಿಗೆ ಸಂಬಂಧಿಸಿದ ಮತ್ತು ಸಂಸತ್ತಿನ ಆವರಣದೊಳಗೆ ನಡೆದಿರುವುದರಿಂದ ಮಹತ್ವ ಪಡೆದುಕೊಳ್ಳುತ್ತದೆ. ಸಂಸತ್ ಸದಸ್ಯರು ತಮ್ಮ ನಡವಳಿಕೆ ಮತ್ತು ಜವಾಬ್ದಾರಿಗಳ ಬಗ್ಗೆ ಜಾಗೃತರಾಗುವಂತೆ ಮಾಡುವುದು ಇದರ ಉದ್ದೇಶವಾಗಿದೆ’ ಎಂದೂ ತಿಳಿಸಲಾಗಿದೆ.
ಸೋನಿಯಾ ವಿರುದ್ಧ ಹಕ್ಕುಚ್ಯುತಿಗೆ ನೋಟಿಸ್ ನೀಡಿದಂತೆ, ‘ರಾಷ್ಟ್ರಪತಿಗಳು ಸ್ಟ್ಯಾಂಪ್ ಇದ್ದಂತೆ. ಅವರು ಸರ್ಕಾರದ ಪ್ರೇಮಪತ್ರ ಓದುತ್ತಾರೆ’ ಎಂದಿದ್ದ ಬಿಹಾರದ ಸಂಸದ ಪಪ್ಪು ಯಾದವ್ ಅವರ ವಿರುದ್ಧ ಕ್ರಮಕ್ಕೂ ಮನವಿ ಮಾಡಲಾಗಿದೆ.
ಹೇಳಿಕೆ ವಿವಾದ:
ಬಜೆಟ್ ಅಧಿವೇಶನದ ಮೊದಲ ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿ ತೆರಳಿದರು. ಇದಾದ ಬಳಿಕ ವಿರಾಮದ ಸಮಯದಲ್ಲಿ ಸದನದಿಂದ ಹೊರಗೆ ಬಂದ ಸಂಸದೆ ಸೋನಿಯಾ ಗಾಂಧಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಭಾಷಣದ ಅಂತ್ಯದಲ್ಲಿ ಅವರು ತೀವ್ರವಾಗಿ ಬಳಲಿದ್ದರು... ಬಡಪಾಯಿ ಮಹಿಳೆ ಭಾಷಣ ಮಾಡಲೇ ಕಷ್ಟಪಟ್ಟರು’ ಎಂದು ಪ್ರತಿಕ್ರಿಯಿಸಿದರು. ಈ ವೇಳೆ ಪಕ್ಕದಲ್ಲೇ ಇದ್ದ ರಾಹುಲ್ ಗಾಂಧಿ ಕೂಡ ಇದಕ್ಕೆ ದನಿಗೂಡಿಸಿ, ಭಾಷಣ ನೀರಸವಾಗಿತ್ತು. ಹೇಳಿದ್ದನ್ನೇ ಹೇಳಿದರು’ ಎಂದು ಹೇಳಿದ್ದರು.