ಸಾರಾಂಶ
ನವದೆಹಲಿ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ ಇಲ್ಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಶುಕ್ರವಾರ ಬೆಳಿಗ್ಗೆ ಬಿಡುಗಡೆಯಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಉದರ ನೋವಿನ ಕಾರಣ ಆರೋಗ್ಯ ತಪಾಸಣೆಗಾಗಿ ಕಾಂಗ್ರೆಸ್ ನಾಯಕಿ ಗುರುವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಮೇಲೆ ಗ್ಯಾಸ್ಟ್ರೋ ವೈದ್ಯರ ತಂಡದಿಂದ ನಿಗಾ ಇರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಅನಾರೋಗ್ಯದ ಕಾರಣ ಸೋನಿಯಾ ಇತ್ತೀಚೆಗೆ ಸಂಸತ್ ಕಲಾಪ ಹಾಗೂ ಕಾಂಗ್ರೆಸ್ ಆಂತರಿಕ ಸಭೆ ಹೊರತುಪಡಿಸಿದರೆ ಬಹಿರಂಗ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ಅದಾನಿ ಹಗರಣ ವೈಯಕ್ತಿಕವಲ್ಲ, ದೇಶದ ವಿಚಾರ: ರಾಗಾ
ರಾಯ್‌ಬರೇಲಿ: ಉದ್ಯಮಿ ಗೌತಮ್ ಅದಾನಿ ಹಗರಣದ ಕುರಿತು ಅಮೆರಿಕದ ಮಾಧ್ಯಮಗಳಲ್ಲಿ ‘ವೈಯಕ್ತಿಕ ವಿಚಾರ’ ಎಂದಿದ್ದ ಪ್ರಧಾನಿ ಮೋದಿ ಹೇಳಿಕೆಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಿಡಿ ಕಾರಿದ್ದು, ‘ಇದು ವೈಯಕ್ತಿಕ ವಿಷಯವಲ್ಲ. ದೇಶದ ವಿಷಯವಾಗಿದೆ’ ಎಂದು ತಿರುಗೇಟು ನೀಡಿದ್ದಾರೆ.ಇಲ್ಲಿನ ಲಾಲ್‌ಗಂಜ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,‘ನರೇಂದ್ರ ಮೋದಿ ಜೀ ಇದು ವೈಯಕ್ತಿಕ ವಿಚಾರವಲ್ಲ. ಇದು ದೇಶದ ವಿಚಾರ. ನಮ್ಮ ಪ್ರಧಾನಿ ಇದು ವೈಯಕ್ತಿಕ ವಿಷಯ ಮತ್ತು ನಾವು ಅದನ್ನು ಚರ್ಚಿಸುವುದಿಲ್ಲ ಎನ್ನುತ್ತಾರೆ. ಅವರು ನಿಜವಾಗಿಯೂ ಭಾರತದ ಪ್ರಧಾನಿಯಾಗಿದ್ದರೆ, ಅವರು ಈ ವಿಷಯದ ಬಗ್ಗೆ ಟ್ರಂಪ್ ಅವರಲ್ಲಿ ಕೇಳುತ್ತಿದ್ದರು. ಅವರು ಆ ಬಗ್ಗೆ ವಿಚಾರಣೆ ನಡೆಸುತ್ತಿದ್ದರು. ಅಗತ್ಯವಿದ್ದಲ್ಲಿ ಅವರನ್ನು ಅಮೆರಿಕಕ್ಕೆ ವಿಚಾರಣೆಗೆ ಕಳುಹಿಸುವುದಾಗಿ ಹೇಳುತ್ತಿದ್ದರು. ಆದರೆ ಅದರ ಬದಲು ವೈಯಕ್ತಿಕ ವಿಚಾರ ಎಂದು ಹೇಳಿದರು’ ಎಂದು ಕಿಡಿಕಾರಿದರು.
ಅಶ್ಲೀಲ ಹೇಳಿಕೆ ವಿವಾದ: ನಟಿ ರಾಖಿ ಸಾವಂತ್‌ಗೂ ಸಮನ್ಸ್
ಮುಂಬೈ: ‘ಇಂಡಿಯಾ’ಸ್ ಗಾಟ್ ಲ್ಯಾಟೆಂಟ್ ಶೋ’ನಲ್ಲಿ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ವಿವಾದಾತ್ಮಕ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.27ರಂದು ಮಹಾರಾಷ್ಟ್ರ ಸೈಬರ್ ಸೆಲ್ ಮುಂದೆ ಹಾಜರಾಗುವಂತೆ ನಟಿ ರಾಖಿ ಸಾವಂತ್‌ಗೆ ಸಮನ್ಸ್ ಜಾರಿ ಮಾಡಲಾಗಿದೆ.ಕಾರ್ಯಕ್ರಮದಲ್ಲಿ ನಟಿ ರಾಖಿ ಸಾವಂತ್ ಅತಿಥಿಯಾಗಿ ಭಾಗವಹಿಸಿದ್ದರು. ಹೀಗಾಗಿ ಅವರಿಗೆ ನೋಟಿಸ್ ನೀಡಲಾಗಿದೆ.
ಅವರೊಂದಿಗೆ, ಕಾರ್ಯಕ್ರಮದ ಭಾಗವಾಗಿದ್ದ ಯೂಟ್ಯೂಬರ್‌ಗಳಾದ ರಣವೀರ್ ಅಲಹಾಬಾದಿಯಾ ಮತ್ತು ಆಶಿಷ್ ಚಂಚಲಾನಿ ಅವರಿಗೂ ಸಮನ್ಸ್ ಜಾರಿಗೊಳಿಸಿದೆ. ಫೆ.24ರಂದು ಹೇಳಿಕೆ ದಾಖಲಿಸಲು ಸೂಚಿಸಲಾಗಿದೆ.ಇದೇ ಪ್ರಕರಣ ಸಂಬಂಧ, ಮಹಾರಾಷ್ಟ್ರ ಸೈಬರ್ ಈಗಾಗಲೇ 50 ಜನರಿಗೆ ಸಮನ್ಸ್ ಜಾರಿಗೊಳಿಸಿದೆ.
121 ಮಂದಿ ಬಲಿ ಪಡೆದಿದ್ದ ಹಾಥ್ರಸ್ ಕಾಲ್ತುಳಿತ ಕೇಸ್: ಭೋಲೆ ಬಾಬಾಗೆ ಕ್ಲೀನ್ ಚಿಟ್
ಹಾಥ್ರಸ್ (ಉ.ಪ್ರ.): ಕಳೆದ ವರ್ಷದ ಜು.2ರಂದು ಧಾರ್ಮಿಕ ಸಮಾವೇಶದ ವೇಳೆ ನಡೆದಿದ್ದ ಕಾಲ್ತುಳಿತ ದುರಂತದಲ್ಲಿ 121 ಭಕ್ತರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಿತ ಧರ್ಮಗುರು ಭೋಲೆ ಬಾಬಾಗೆ ಉತ್ತರ ಪ್ರದೇಶ ನ್ಯಾಯಾಂಗ ಸಮಿತಿಯು ಕ್ಲೀನ್‌ಚಿಟ್ ನೀಡಿದೆ. ಕಾರ್ಯಕ್ರಮದ ಆಯೋಜಕರು ಹಾಗೂ ಪೊಲೀಸರ ಪ್ರಮಾದದಿಂದ ಘಟನೆ ಸಂಭವಿಸಿತು ಎಂದು ಅದು ಹೇಳಿದೆ.ಸಿಕಂದರರಾವ್ ಅವರ ಫುಲ್ರಾಯ್ ಗ್ರಾಮದಲ್ಲಿ ಬಾಬಾರ ಪಾದಧೂಳಿ ಸಂಗ್ರಹಿಸಲು ಭಕ್ತರು ಮುಗಿಬಿದ್ದಾಗ ಕಾಲ್ತುಳಿತ ಸಂಭವಿಸಿತ್ತು. ಸ್ಥಳೀಯ ಪೊಲೀಸರು ಆಯೋಜಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಆದರೆ ಪ್ರಕರಣದಲ್ಲಿ ಭೋಲೆ ಬಾಬಾ ಎಂದು ಕರೆಯಲ್ಪಡುವ ಸೂರಜ್‌ಪಾಲ್ ವಿರುದ್ಧ ಎಫ್‌ಐಆರ್ ದಾಖಲಾಗಿರಲಿಲ್ಲ.
ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರವು ಮೂರು ಸದಸ್ಯರ ನ್ಯಾಯಾಂಗ ತನಿಖೆಯನ್ನು ನೇಮಕ ಮಾಡಿತ್ತು. ಈ ಪ್ರಕಣರಣದ ವಿಚಾರಣೆ ನಡೆಸಿದ ನ್ಯಾಯಾಂಗ ಸಮಿತಿಯು , ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಭೋಲೆ ಬಾಬಾಗೆ ಕ್ಲೀನ್‌ಚಿಟ್ ನೀಡಿದೆ.
4ನೇ ದಿನವೂ ಕುಸಿದ ಸೆನ್ಸೆಕ್ಸ್: 425 ಅಂಕ ಇಳಿಕೆ
ಮುಂಬೈ: ಭಾರತೀಯ ಷೇರು ಮಾರುಕಟ್ಟೆ ಕುಸಿತ ಮುಂದುವರೆದಿದ್ದು, 4ನೇ ದಿನವೂ ಇಳಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ. ಬಾಂಬೆ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 425 ಹಾಗೂ ರಾಷ್ಟ್ರೀಯ ಷೇರುಪೇಟೆ ನಿಫ್ಟಿ 117 ಅಂಕಗಳೊಂದಿಗೆ ಕುಸಿತ ಕಂಡಿವೆ.ಸೆನ್ಸೆಕ್ಸ್ 425 ಅಂಕಗಳ ಇಳಿಕೆಯೊಂದಿಗೆ 75,311ರಲ್ಲಿ ಅಂತ್ಯವಾಗಿದ್ದರೆ, ನಿಫ್ಟಿ 117 ಅಂಕ ಕುಸಿತದೊಂದಿಗೆ 22,795ರಲ್ಲಿ ಮುಕ್ತಾಯಗೊಂಡಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ನೀತಿಗಳು, ಆಟೋ, ಫಾರ್ಮಾ ಮತ್ತು ಬ್ಯಾಕಿಂಗ್ ಷೇರುಗಳ ಮಾರಾಟ, ವಿದೇಶಿ ನಿಧಿಯ ಹೊರ ಹೊರಿವು ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣ.