ನ್ಯಾಷನಲ್‌ ಹೆರಾಲ್ಡ್‌ : ₹2000 ಕೋಟಿ ವಶಕ್ಕೆ ಸೋನಿಯಾ, ರಾಹುಲ್‌ ಸಂಚು - ಬಿಜೆಪಿ ಆರೋಪ

| N/A | Published : Apr 19 2025, 12:34 AM IST / Updated: Apr 19 2025, 06:21 AM IST

ಸಾರಾಂಶ

‘ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಮೇಲೆ ನಯಾಪೈಸೆ ಹೂಡಿಕೆ ಮಾಡದ ಸೋನಿಯಾ ಮತ್ತು ರಾಹುಲ್‌ ಗಾಂಧಿ, ಅದನ್ನು ಎಟಿಎಂನಂತೆ ಬಳಸಿ, ಅದರ 2 ಸಾವಿರ ಕೋಟಿ ರು. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲು ಯತ್ನಿಸಿದರು’ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಬಿಜೆಪಿ ಆರೋಪ ಮಾಡಿದೆ.

ನವದೆಹಲಿ: ‘ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಮೇಲೆ ನಯಾಪೈಸೆ ಹೂಡಿಕೆ ಮಾಡದ ಸೋನಿಯಾ ಮತ್ತು ರಾಹುಲ್‌ ಗಾಂಧಿ, ಅದನ್ನು ಎಟಿಎಂನಂತೆ ಬಳಸಿ, ಅದರ 2 ಸಾವಿರ ಕೋಟಿ ರು. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲು ಯತ್ನಿಸಿದರು’ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಬಿಜೆಪಿ ಆರೋಪ ಮಾಡಿದೆ.

ಮಾಜಿ ಕೇಂದ್ರ ಸಚಿವ ಅನುರಾಗ್‌ ಠಾಕುರ್‌ ಮಾತನಾಡಿ, ‘ಕಾಂಗ್ರೆಸ್‌ ಪಕ್ಷದಿಂದ 50 ಲಕ್ಷ ರು. ಸಾಲ ಪಡೆದಿದ್ದ ಯಂಗ್‌ ಇಂಡಿಯಾ ಕಂಪನಿಯಲ್ಲಿ ಸೋನಿಯಾ ಮತ್ತು ರಾಹುಲ್‌ ಶೇ.76ರಷ್ಟು ಪಾಲು ಹೊಂದಿದ್ದಾರೆ. ಆ ಕಂಪನಿಯು, ಕಾಂಗ್ರೆಸ್‌ಗೆ ನೀಡಬೇಕಿದ್ದ 90 ಕೋಟಿ ರು.ಗೆ ಬದಲಾಗಿ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿ.ಯನ್ನು ಯಂಗ್‌ ಇಂಡಿಯಾ ತನ್ನ ಸ್ವಾಧೀನಪಡಿಸಿಕೊಂಡಿತು. ರಾಜಕೀಯ ಪಕ್ಷಗಳು ಹೀಗೆ ಸಾಲ ಕೊಡಬಹುದೇ ಎಂದು ಪ್ರಶ್ನಿಸಿದರು.

ಇದೇ ವೇಳೆ, ಜಾರಿ ನಿರ್ದೇಶನಾಲಯದ ಕ್ರಮವನ್ನು ರಾಜಕೀಯ ಪ್ರೇರಿತ ಎಂಬ ಕಾಂಗ್ರೆಸ್‌ ಆರೋಪಕ್ಕೆ ತಿರುಗೇಟು ನೀಡಿದ ಅವರು, ‘ಧೈರ್ಯವಿದ್ದರೆ, ತಮ್ಮ ವಿರುದ್ಧದ ಪ್ರಕರಣದಲ್ಲಿ ತ್ವರಿತ ವಿಚಾರಣೆಯನ್ನು ಕೋರಿ ನ್ಯಾಯಾಲಯಕ್ಕೆ ಮನವಿ ಮಾಡಿ’ ಎಂದು ಸವಾಲೆಸೆದಿದ್ದಾರೆ. ಜೊತೆಗೆ, ‘ಕೋರ್ಟ್‌ ಅವರು ಬರಿ ಜಾಮೀನು ನೀಡಿದೆ. ಇಡಿ ತನಿಖೆಯಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡಿಲ್ಲ’ ಎಂದರು.