ಸೋನಿಯಾ, ರಾಹುಲ್‌ಗೆ ಕಿರುಕುಳ ಆರೋಪ : ಇ.ಡಿ. ಕಚೇರಿ ಎದುರು ಕಾಂಗ್ರೆಸ್‌ ಪ್ರತಿಭಟನೆ

| N/A | Published : Apr 17 2025, 12:54 AM IST / Updated: Apr 17 2025, 04:13 AM IST

ಸಾರಾಂಶ

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ   ಸೋನಿಯಾಗಾಂಧಿ ಮತ್ತು ರಾಹುಲ್‌ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪಪಟ್ಟಿ ಸಲ್ಲಿಸಿದ್ದನ್ನು ಖಂಡಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಶಾಂತಿನಗರದ ಇಡಿ ಕಚೇರಿ ಎದುರು   ಪ್ರತಿಭಟನೆ ನಡೆಸಿದರು.

  ಬೆಂಗಳೂರು : ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದ ನಾಯಕರಾದ ಸೋನಿಯಾಗಾಂಧಿ ಮತ್ತು ರಾಹುಲ್‌ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪಪಟ್ಟಿ ಸಲ್ಲಿಸಿದ್ದನ್ನು ಖಂಡಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಶಾಂತಿನಗರದ ಇಡಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ನೆಪದಲ್ಲಿ ಪಕ್ಷದ ನಾಯಕರಾದ ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್‌ ಸಲ್ಲಿಸಿರುವುದು ತೀವ್ರ ಖಂಡನೀಯ. ವಿರೋಧ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ಶಾ ಆಡಳಿತದ ದ್ವೇಷ ರಾಜಕಾರಣಕ್ಕೆ ಮಿತಿ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ತು ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ಉಪಯೋಗಿಸಿ ಅಧಿಕಾರ ದುರ್ಬಳಕೆ ಮಾಡುತ್ತಿದೆ. ಮೋದಿ ಸರ್ಕಾರ ಸ್ವತಂತ್ರ ಸಂಸ್ಥೆಗಳನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು ಸಿಬಿಐ, ಇ.ಡಿ., ಐಟಿ ಸೇರಿದಂತೆ ಎಲ್ಲಾ ಸಂಸ್ಥೆಗಳನ್ನು ತನ್ನ ತಾಳಕ್ಕೆ ಕುಣಿಯುವಂತೆ ಮಾಡಿಕೊಂಡಿದೆ. ಸೋನಿಯಾಗಾಂಧಿ, ರಾಹುಲ್‌ಗಾಂಧಿ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರಕ್ಕೆ ನಾಚಿಕೆ, ಮಾನ, ಮರ್ಯಾದೆ ಇಲ್ಲ. ನಮ್ಮ ನಾಯಕರನ್ನು ಹೆದರಿಸಬಹುದೆಂದು ಭಾವಿಸಿದರೆ ನಮ್ಮವರು ಆತ್ಮಸ್ಥೈರ್ಯ ಕಳೆದುಕೊಳ್ಳುವುದಿಲ್ಲ. ದ್ವೇಷದ ರಾಜಕಾರಣದ ವಿರುದ್ಧ ನಮ್ಮ ಹೋರಾಟ ನಿರಂತರ ಎಂದು ಹೇಳಿದರು.

ಯುವ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿ, ಕೇಂದ್ರ ಸರ್ಕಾರ ಅದಾನಿ ಸಂಸ್ಥೆಗೆ ಲಕ್ಷಾಂತರ ಕೋಟಿ ಲಾಭ ಬರುವ ರೀತಿಯಲ್ಲಿ ದೇಶ ಹಾಗೂ ವಿದೇಶದಲ್ಲಿ ಸಹಾಯ ಮಾಡಿ ಅದಾನಿ ಕಂಪನಿಯ ಬೆನ್ನಿಗೆ ನಿಂತಿದೆ, ಆ ಕಂಪನಿಗಳ ವಿರುದ್ಧ ಭ್ರಷ್ಟಾಚಾರದ ತನಿಖೆ ನಡೆಸಲು ಇಡಿ ಅಧಿಕಾರಿಗಳಿಗೆ ಶಕ್ತಿ ಇಲ್ಲದಂತೆ ನರೇಂದ್ರ ಮೋದಿ, ಅಮಿತ್‌ಶಾ ಮಾಡಿದ್ದಾರೆ. ಪ್ರಧಾನಿ ಹಾಗೂ ಗೃಹ ಸಚಿವರ ಕೈಗೊಂಬೆಯಾಗಿ ಇಡಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೀಳುಮಟ್ಟದ ರಾಜಕೀಯ ಮಾಡುವ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯ ಕಿಡಿಗೇಡಿಗಳನ್ನು ಎದುರಿಸುವ ಮೂಲಕ ಹೋರಾಟ ಮಾಡುವ ಕಾರ್ಯಕ್ರಮ ಈಗಾಗಲೇ ಪ್ರಾರಂಭವಾಗಿದೆ, ಬಿಜೆಪಿಯ ರಣಹೇಡಿಗಳನ್ನು ಕಾಂಗ್ರೆಸ್ ಕಾರ್ಯಕರ್ತರು ದಿಟ್ಟತನದಿಂದ ಎದುರಿಸುತ್ತೇವೆ. ಇ.ಡಿ. ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಕಾನೂನು ಅಡಿಯಲ್ಲಿ ಸೂಕ್ತ ಉತ್ತರವನ್ನು ನೀಡಲಾಗುತ್ತದೆ. ಭ್ರಷ್ಟ ಬಿಜೆಪಿಯ ನಾಯಕರು ಜೈಲು ಸೇರುವುದು ಖಚಿತ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್, ಕೆಪಿಸಿಸಿ ಉಪಾಧ್ಯಕ್ಷ ನಾರಾಯಣ ಸ್ವಾಮಿ, ವಿ.ಎಸ್.ಆರಾಧ್ಯ, ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ರಾಜ್ಯ ಅಧ್ಯಕ್ಷರಾದ ಮಂಜುನಾಥ್‌ ಗೌಡ ಪಾಲ್ಗೊಂಡಿದ್ದರು.