ವಿದೇಶಿ ಪ್ರಜೆ ಆಗಿದ್ದಾಗಲೂ ವೋಟರ್‌ ಲಿಸ್ಟಲ್ಲಿ ಸೋನಿಯಾ ಹೆಸರಿತ್ತು: ಬಿಜೆಪಿ

| N/A | Published : Aug 14 2025, 01:00 AM IST / Updated: Aug 14 2025, 04:16 AM IST

ವಿದೇಶಿ ಪ್ರಜೆ ಆಗಿದ್ದಾಗಲೂ ವೋಟರ್‌ ಲಿಸ್ಟಲ್ಲಿ ಸೋನಿಯಾ ಹೆಸರಿತ್ತು: ಬಿಜೆಪಿ
Share this Article
  • FB
  • TW
  • Linkdin
  • Email

ಸಾರಾಂಶ

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಚುನಾವಣಾ ಆಯೋಗ ಭಾರೀ ಮತಕಳವು ನಡೆಸಿವೆ ಎಂದು ಆರೋಪಿಸಿದ್ದ ಕಾಂಗ್ರೆಸ್‌ ವಿರುದ್ಧವೇ ಈಗ ಚುನಾವಣಾ ಅಕ್ರಮದಲ್ಲಿ ಭಾಗಿಯಾದ ಆರೋಪ ಕೇಳಿಬಂದಿದೆ.

ನವದೆಹಲಿ

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಚುನಾವಣಾ ಆಯೋಗ ಭಾರೀ ಮತಕಳವು ನಡೆಸಿವೆ ಎಂದು ಆರೋಪಿಸಿದ್ದ ಕಾಂಗ್ರೆಸ್‌ ವಿರುದ್ಧವೇ ಈಗ ಚುನಾವಣಾ ಅಕ್ರಮದಲ್ಲಿ ಭಾಗಿಯಾದ ಆರೋಪ ಕೇಳಿಬಂದಿದೆ. ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರು ಇನ್ನೂ ಭಾರತೀಯ ಪೌರತ್ವ ಪಡೆಯುವ ಮುನ್ನವೇ ಅಂದರೆ, ವಿದೇಶಿ ಪ್ರಜೆಯಾಗಿದ್ದಾಗಲೇ ಭಾರತದ ಚುನಾವಣಾ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿತ್ತು ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಇದರಿಂದಾಗಿ ಬಿಜೆಪಿ ಮತ್ತು ಚುನಾವಣಾ ಆಯೋಗವನ್ನು ಸಿಲುಕಿಸುವ ರಾಹುಲ್‌ ಗಾಂಧಿ ಅವರ ‘ಮತಗಳ್ಳತನ’ ಅಸ್ತ್ರವು ಅವರಿಗೇ ತಿರುಗುಬಾಣವಾಗುವ ಸಾಧ್ಯತೆ ಕಂಡುಬಂದಿದೆ.

ಜೊತೆಗೆ ಈ ಗಂಭೀರ ಆರೋಪ ಬಿಜೆಪಿ ವಿರುದ್ಧ ದೇಶವ್ಯಾಪಿ ಮತಚೋರಿ ಅಭಿಯಾನ ಆರಂಭಿಸಿದ್ದ ಕಾಂಗ್ರೆಸ್‌ಗೆ ಭಾರೀ ಇರುಸುಮುರುಸು ಉಂಟು ಮಾಡಿದೆ.

ಬಿಜೆಪಿ ಆರೋಪ ಏನು?:

ಸೋನಿಯಾ ಗಾಂಧಿ ಅವರು ಭಾರತದ ಪೌರತ್ವ ಪಡೆಯುವ ಮುನ್ನವೇ ಅವರ ಹೆಸರು ಮತದಾರರ ಚೀಟಿಗೆ ಸೇರ್ಪಡೆಯಾಗಿತ್ತು ಎಂದು ಬಿಜೆಪಿ ಮುಖಂಡ ಅಮಿತ್‌ ಮಾಳವೀಯ ಬುಧವಾರ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ದಾಖಲೆ ಸಮೇತ ಆರೋಪ ಮಾಡಿರುವ ಮಾಳವೀಯ, ‘ಸೋನಿಯಾರ ಹೆಸರು ಮೊದಲ ಬಾರಿ 1980ರಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿತ್ತು. ಅಂದರೆ ಅವರು ಭಾರತೀಯ ಪೌರತ್ವ ಪಡೆಯುವ ಮೂರು ವರ್ಷ ಮೊದಲೇ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತವಾದ ಬಳಿಕ 1982ರಲ್ಲಿ ಮತದಾರರ ಪಟ್ಟಿಯಿಂದ ಅವರ ಹೆಸರು ಕಿತ್ತುಹಾಕಲಾಯಿತು. ಆ ಬಳಿಕ 1983ರ ಜ.1ರಂದು ಸೋನಿಯಾ ಹೆಸರು ಮತ್ತೆ ಪಟ್ಟಿಯಲ್ಲಿ ಕಾಣಿಸಿಕೊಂಡಿತು. ಆದರೆ ಅವರಿಗೆ ಭಾರತೀಯ ನಾಗರಿಕತ್ವ ಸಿಕ್ಕಿದ್ದು ಏ.30, 1983ರಂದು’ ಎಂದು ಹೇಳಿದ್ದಾರೆ.

ಈ ಮೂಲಕ ಸೋನಿಯಾ ಗಾಂಧಿ ವಿದೇಶಿ ಪ್ರಜೆಯಾಗಿದ್ದಾಗಲೇ ಅಂದರೆ ಅವರು ಇನ್ನೂ ತಮ್ಮ ತಾಯ್ನಾಡು ಇಟಲಿ ಪೌರತ್ವ ಹೊಂದಿದ್ದಾಗಲೇ ಭಾರತದಲ್ಲಿ ಮತದಾನದ ಹಕ್ಕು ಪಡೆದಿದ್ದರು ಎಂಬುದು ಬಿಜೆಪಿ ಆರೋಪ.

ರಾಹುಲ್‌ ಗಾಂಧಿ ಕ್ಷೇತ್ರದಲ್ಲೂ ಮತ ಕಳ್ಳತನ : ಬಿಜೆಪಿ- ಪ್ರಿಯಾಂಕಾದ್ದು ಸೇರಿ ಆರುಕ್ಷೇತ್ರಗಳ ದಾಖಲೆ ಬಿಡುಗಡೆನವದೆಹಲಿ: ಒಂದೆಡೆ ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿನ ನಕಲಿ ಮತದಾರರ ಐಡಿ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳು ರಾಷ್ಟ್ರೀಯ ಮಟ್ಟದಲ್ಲಿ ‘ಮತಗಳ್ಳತನ’ ವಿರುದ್ಧ ಸಮರ ಸಾರಿದ್ದರೆ, ಮತ್ತೊಂದೆಡೆ ಸ್ವತಃ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರತಿಪಕ್ಷಗಳ ಆರು ಮುಖಂಡರು ಗೆದ್ದಿರುವ ಕ್ಷೇತ್ರದಲ್ಲೂ ಇಂಥದ್ದೇ ಪ್ರಕರಣಗಳು ಪತ್ತೆಯಾಗಿವೆ ಎಂದು ಬಿಜೆಪಿ ತಿರುಗೇಟು ನೀಡಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಕೇಂದ್ರದ ಮಾಜಿ ಸಚಿವ ಅನುರಾಗ್‌ ಠಾಕೂರ್ ದಾಖಲೆ ಬಿಡುಗಡೆ ಮಾಡಿದ್ದಾರೆ.

Read more Articles on