ಸಾರಾಂಶ
ಜನಸಂಖ್ಯಾ ಆಧಾರದಲ್ಲಿ ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಯನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿರುವ ವಿಪಕ್ಷ ಡಿಎಂಕೆ, ಇದೇ ವಿಷಯವಾಗಿ ಗುರುವಾರ ಉಭಯ ಸದನಗಳಲ್ಲಿ ಗದ್ದಲ ಎಬ್ಬಿಸಿದೆ. ಪರಿಣಾಮವಾಗಿ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಗಿದೆ.
ನವದೆಹಲಿ: ಜನಸಂಖ್ಯಾ ಆಧಾರದಲ್ಲಿ ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಯನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿರುವ ವಿಪಕ್ಷ ಡಿಎಂಕೆ, ಇದೇ ವಿಷಯವಾಗಿ ಗುರುವಾರ ಉಭಯ ಸದನಗಳಲ್ಲಿ ಗದ್ದಲ ಎಬ್ಬಿಸಿದೆ. ಪರಿಣಾಮವಾಗಿ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಗಿದೆ.
ಡಿಎಂಕೆ ಸದಸ್ಯರು ‘ತಮಿಳುನಾಡು ಹೋರಾಡುತ್ತದೆ, ತಮಿಳುನಾಡು ಜಯಿಸುತ್ತದೆ’ ಎಂಬ ಕ್ಷೇತ್ರ ಮರುವಿಂಗಡಣೆ ವಿರೋಧಿ ಬರಹಗಳಿದ್ದ ಟಿ-ಶರ್ಟ್ ಧರಿಸಿದ್ದರು. ಹೀಗೆ ಮಾಡುವುದು ಸದನದ ನಿಯಮಗಳಿಗೆ ವಿರುದ್ಧ ಎಂದು ಎಚ್ಚರಿಸಿದ ಸ್ಪೀಕರ್ ಓಂ ಬಿರ್ಲಾ, ‘ಸಂಸತ್ತಿನಲ್ಲಿ ಕಾರ್ಯವಿಧಾನ ಮತ್ತು ವ್ಯವಹಾರ ನಡವಳಿಕೆಯ 349ನೇ ನಿಯಮದ ಅನುಸಾರ ಬರಹಗಳು ಅಥವಾ ಘೋಷಣೆಗಳುಳ್ಳ ಟೀ ಶರ್ಟ್ ಧರಿಸುವಂತಿಲ್ಲ. ಆದ್ದರಿಂದ ನಿಯಮಾನುಸಾರ ಬಟ್ಟೆ ಬದಲಿಸಿಕೊಂಡು ಬನ್ನಿ’ ಎಂದು ಸೂಚಿಸಿ ಕಲಾಪವನ್ನು ಮಧ್ಯಾಹ್ನದ ವರೆಗೆ ಮುಂದೂಡಿದ್ದರು.
ಮಧ್ಯಾಹ್ನವೂ ಪ್ರತಿಭಟನೆ ಮುಂದುವರೆದಾಗ, ಕಲಾಪದ ಅಧ್ಯಕ್ಷತೆ ವಹಿಸಿದ್ದ ಕೃಷ್ಣ ಪ್ರಸಾದ್ ಟೆನೆಟಿ, ‘ನಾವು ಕೃಷಿಯ ಬಗ್ಗೆ ಚರ್ಚೆ ನಡೆಸಲಿದ್ದು, ನೀವು ಅದಕ್ಕೆ ತೊಡಕುಂಟುಮಾಡುತ್ತಿದ್ದೀರಿ. ದಯವಿಟ್ಟು ಕಲಾಪವನ್ನು ಮುಂದುವರೆಸುವಲ್ಲಿ ಸಹಕರಿಸಿ’ ಎನ್ನುತ್ತಾ, ಸರಿಯಾದ ಉಡುಪು ತೊಟ್ಟು ಬರುವಂತೆ ಸೂಚಿಸಿದರು.
ಅದನ್ನು ಪ್ರತಿಭಟನಾನಿರತ ಸದಸ್ಯರು ಒಪ್ಪದಿದ್ದಾಗ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು. ಅತ್ತ ರಾಜ್ಯಸಭೆಯಲ್ಲೂ ಇದೇ ಸನ್ನಿವೇಶ ಸೃಷ್ಟಿಯಾಗಿತ್ತು. ಕಲಾಪವು ಮಧ್ಯಾಹ್ನಕ್ಕೂ ಮುನ್ನವೇ 3 ಬಾರಿ ಮುಂಡೂಕೆಯಾಗಿ, ಕೊನೆಗೆ 2 ಗಂಟೆಗೆ ದಿನದ ಮಟ್ಟಿಗೆ ಮುಂದೂಡಲ್ಪಟ್ಟಿತು.