ಸಾರಾಂಶ
ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಸ್ಪೀಕರ್ ಓಂ ಬಿರ್ಲಾ ಅವರು ಸದನದಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ವಿಪಕ್ಷ ನಾಯಕರ ನಿಯೋಗ ಸ್ವತಃ ಸ್ಪೀಕರ್ ಅವರನ್ನೇ ಭೇಟಿಯಾಗಿ ದೂರು ಸಲ್ಲಿಸಿದೆ. ಜೊತೆಗೆ, ಕಾಂಗ್ರೆಸ್ ನಾಯಕರಿಗೆ ಸದನದ ನಿಯಮಗಳನ್ನು ಪಾಲಿಸುವಂತೆ ನೀಡಿದ ಸೂಚನೆಯನ್ನು ರಾಜಕೀಯಗೊಳಿಸಲಾಗುತ್ತಿದೆ ಎಂದೂ ಆರೋಪಿಸಿದೆ.
ಬುಧವಾರ ರಾಹುಲ್‌ಗೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನೀಡದ ಓಂ ಬಿರ್ಲಾ ರಾಹುಲ್‌ಗೆ ಸದನದ ಘನತೆ ಕಾಪಾಡುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ವಿಪಕ್ಷಗಳ ನಿಯೋಗ ಈ ದೂರು ಸಲ್ಲಿಸಿದೆ. ದೂರು ಸಲ್ಲಿಕೆ ಬಳಿಕ ಮಾತನಾಡಿದ ಲೋಕಸಭೆಯ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೋಯ್, ‘ಆಡಳಿತ ಪಕ್ಷವು ಸದನದ ನಿಯಮಗಳನ್ನು ಉಲ್ಲಂಘಿಸಿದ ಬಗ್ಗೆ ಎಲ್ಲಾ ವಿಪಕ್ಷಗಳು ಕಳವಳ ವ್ಯಕ್ತಪಡಿಸಿವೆ.
ಸ್ಪೀಕರ್ ಅವರು 349ನೇ ನಿಯಮವನ್ನು ಪಾಲಿಸುವಂತೆ ಹೇಳಿದರು. ಆದರೆ ಯಾವ ಘಟನೆಗೆ ಸಂಬಂಧಿಸಿದಂತೆ ಹೇಳಿದರೆಂದು ತಿಳಿದಿಲ್ಲ. ಇದನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ. ವಿಪಕ್ಷ ನಾಯಕರು ಮಾತನಾಡಲು ನಿಂತಾಗ ಕಲಾಪವನ್ನು ಮುಂದೂಡಲಾದ ಬಗ್ಗೆ ದೂರು ನೀಡಲಾಗಿದೆ’ ಎಂದರು.