ವಿಪ್ ಉಲ್ಲಂಘಿಸಿದ 7 ಸದಸ್ಯರನ್ನು ಅನರ್ಹಗೊಳಿಸುವಂತೆ ಮುಖ್ಯಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಜೆಡಿಎಸ್ ದೂರು

| N/A | Published : Mar 28 2025, 01:17 AM IST / Updated: Mar 28 2025, 03:52 AM IST

ವಿಪ್ ಉಲ್ಲಂಘಿಸಿದ 7 ಸದಸ್ಯರನ್ನು ಅನರ್ಹಗೊಳಿಸುವಂತೆ ಮುಖ್ಯಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಜೆಡಿಎಸ್ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಪಕ್ಷದ 7 ಸದಸ್ಯರನ್ನು ಅನರ್ಹಗೊಳಿಸುವಂತೆ ಗುರುವಾರ ಮುಖ್ಯಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ವಿಜಯಪುರ: ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರಿಲ್ಲದೆ, 1 ವರ್ಷ ಉಪವಿಭಾಗಾಧಿಕಾರಿ ಆಡಳಿತಾಧಿಕಾರಿಯಾಗಿ ಆಡಳಿತ ನಡೆಸಿದ್ದರು. ಮಾ.10 ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾಯಿತರಾದವರು ಆಡಳಿತ ವ್ಯವಸ್ಥೆಯನ್ನು ಚಾಲ್ತಿಗೆ ತರಲು ಸಿದ್ಧತೆ ನಡೆಸುತ್ತಿರುವ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಪಕ್ಷದ 7 ಸದಸ್ಯರನ್ನು ಅನರ್ಹಗೊಳಿಸುವಂತೆ ಗುರುವಾರ ಮುಖ್ಯಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಪಟ್ಟಣದಲ್ಲಿ ೨೩ ಮಂದಿ ಪುರಸಭೆ ಸದಸ್ಯರಿದ್ದು ಇವರ ಪೈಕಿ ೧೩ ಜೆಡಿಎಸ್ ಸದಸ್ಯರು ಚುನಾಯಿತರಾಗಿದ್ದಾರೆ. ಮಾ.೧೦ ರಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ವಿಮಲಾಬಸವರಾಜ್, ಉಪಾಧ್ಯಕ್ಷ ಸ್ಥಾನಕ್ಕೆ ತಾಜುನ್ನಿಸಾ ಮಹಬೂಬ್ ಪಾಷಾಗೆ ೧೩ ಸದಸ್ಯರೂ ಮತ ನೀಡುವಂತೆ ವಿಪ್ ಜಾರಿಗೊಳಿಸಿದ್ದರೂ, ೭ ಸದಸ್ಯರು ವಿಪ್ ಉಲ್ಲಂಘನೆ ಮಾಡಿ ಪಕ್ಷದ ವಿರುದ್ಧ ಮತ ಚಲಾಯಿಸಿದ್ದಾರೆ. ಆದ್ದರಿಂದ ಜೆಡಿಎಸ್ ಸದಸ್ಯರಾದ ಸಿ.ನಾರಾಯಣಸ್ವಾಮಿ ವಾರ್ಡ್-೧, ರಾಜೇಶ್ವರಿ ಭಾಸ್ಕರ್ ವಾರ್ಡ್-೨, ಆರ್.ಕವಿತಾಮುನಿಆಂಜಿನಪ್ಪ ವಾರ್ಡ್-೧೩, ರಾಧಮ್ಮಪ್ರಕಾಶ್ ವಾರ್ಡ್-೧೪, ತಾಜುನ್ನಿಸಾ ಮಹಬೂಬ್ ಪಾಷಾ ವಾರ್ಡ್-೧೫, ಬೈರೇಗೌಡ. ಎಂ ವಾರ್ಡ್-೧೭, ರವಿ ವಾರ್ಡ್-೧೯ ಇವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ಜೆಡಿಎಸ್ ಪಕ್ಷದಿಂದ ಬಿ.ಫಾರಂ ತೆಗೆದುಕೊಂಡು ಪಕ್ಷದ ಚಿಹ್ನೆಯಡಿ ಚುನಾಯಿತರಾಗಿರುವ ಸದಸ್ಯರು, ಪಕ್ಷದ ಸೂಚನೆಗಳನ್ನು ಪಾಲಿಸುವುದು ಧರ್ಮ. ಆದರೆ, ೭ ಸದಸ್ಯರು ನೇರವಾಗಿ ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದಾರೆ. ನಾವು ಎರಡು ಬಾರಿ ಸಭೆ ನಡೆಸಿ, ಸ್ಪಷ್ಟವಾಗಿ ನಿರ್ದೇಶನ ನೀಡಿದ್ದರೂ ಪಕ್ಷದ ಎಚ್ಚರಿಕೆಯನ್ನು ಪರಿಗಣಿಸಿಲ್ಲ ಎಂದು ಆರೋಪಿದರು.

ಜೆಡಿಎಸ್ ಪಕ್ಷದಲ್ಲಿ ಎರಡು ಬಣಗಳಾಗಿದ್ದರೂ ಯಾಕೆ ಒಂದುಗೂಡಿಸುವಂತಹ ಪ್ರಯತ್ನವಾಗಲಿಲ್ಲ ಎನ್ನುವ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ತಾಲೂಕು ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯನ್ನು ಅಂಗೀಕರಿಸುವ ಪ್ರಕ್ರಿಯೆ ತಡವಾದ್ದರಿಂದ ಒಂದುಗೂಡಿಸಲು ವಿಳಂಬವಾಯಿತು. ಆದರೂ ಎಲ್ಲಾ ಸದಸ್ಯರು ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಸೂಚನೆ ನೀಡಲಾಗಿತ್ತು ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ತಾಲೂಕು ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ ಮಾತನಾಡಿ, ಪಕ್ಷದ ವತಿಯಿಂದ ಮಾಜಿ ಶಾಸಕರು, ತಾಲೂಕು ಅಧ್ಯಕ್ಷರು, ಜಿಲ್ಲಾಧ್ಯಕ್ಷರು ಸೇರಿದಂತೆ ಎಲ್ಲಾ ಪುರಸಭೆ ಸದಸ್ಯರೊಂದಿಗೆ ಚರ್ಚೆ ನಡೆಸಿದ್ದೆವು. ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವಂತೆ ಸೂಚನೆಯನ್ನೂ ನೀಡಿದ್ದೇವು. ಆದರೂ ಸದಸ್ಯರು ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಜಿ.ಆರ್.ಸಂತೋಷ್ ದೂರು ಪತ್ರವನ್ನು ಸ್ವೀಕರಿಸಿ, ಸದರಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ರವಾನೆ ಮಾಡಲಾಗುತ್ತದೆ ಎಂದು ಹೇಳಿದರು.

ಈ ವೇಳೆ ಪುರಸಭೆ ಸದಸ್ಯರಾದ ಎಂ.ಕೇಶವಪ್ಪ, ಶ್ರೀರಾಮಣ್ಣ, ಮುಖಂಡ ಎಸ್.ಆರ್.ಎಸ್. ಬಸವರಾಜ್, ಮರವೇ ಎನ್.ನಾರಾಯಣಸ್ವಾಮಿ, ಮಂಜುನಾಥ್, ಆಸೀಪ್, ಭುಜೇಂದ್ರಪ್ಪ, ಹಾಜರಿದ್ದರು.

ಅನರ್ಹತೆ ಆತಂಕ:

ನೆರೆಯ ಚಿಕ್ಕಬಳ್ಳಾಪುರದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ, ಪಕ್ಷದ ವಿರುದ್ಧವಾಗಿ ಮತ ಚಲಾಯಿಸಿದ್ದ ಕಾಂಗ್ರೆಸ್ ಸದಸ್ಯರು ಇತ್ತೀಚೆಗೆ ಅನರ್ಹಗೊಂಡಿದ್ದು, ಇದೇ ರೀತಿ ಇಲ್ಲಿನ ಸದಸ್ಯರೂ ಅನರ್ಹಗೊಳ್ಳಲಿದ್ದಾರೆ ಎನ್ನುವ ವಿಶ್ವಾಸದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ದೂರು ಸಲ್ಲಿಸಿದ್ದಾರೆ.

ವಿಪ್ ಉಲ್ಲಂಘಿಸಿ ಮತ ಚಲಾಯಿಸಿದ್ದಾರೆ ಎನ್ನಲಾಗುತ್ತಿರುವ ಜೆಡಿಎಸ್‌ನ ೭ ಸದಸ್ಯರು ಅನರ್ಹತೆಯ ಆತಂಕ ಎದುರಿಸುತ್ತಿದ್ದಾರೆ. ಆದರೂ ಪಕ್ಷದಿಂದ ನೀಡಿರುವ ವಿಪ್ ಉಲ್ಲಂಘನೆ ಮಾಡಿಲ್ಲ. ನಾವು ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಗೆ ಮತ ಹಾಕಿದ್ದೇವೆ. ನಮ್ಮನ್ನು ಹೇಗೆ ಅನರ್ಹಗೊಳಿಸುತ್ತಾರೆ ಎನ್ನುವ ವಿಶ್ವಾಸವನ್ನೂ ಇಟ್ಟುಕೊಂಡಿದ್ದಾರೆ. (ಫೋಟೋ ಕ್ಯಾಪ್ಷನ್‌)

ವಿಜಯಪುರ ಪುರಸಭೆಯಲ್ಲಿ ವಿಪ್ ಉಲ್ಲಂಘನೆ ಮಾಡಿರುವ ಜೆಡಿಎಸ್ ಪುರಸಭೆ ಸದಸ್ಯರನ್ನು ಅನರ್ಹಗೊಳಿಸುವಂತೆ ಮುಖ್ಯಾಧಿಕಾರಿ ಜಿ.ಆರ್.ಸಂತೋಷ್ ಅವರ ಮೂಲಕ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರು.