ಜ್ಞಾನೋದಯ ಕುರಿತ ಸದ್ಗುರು ಪುಸ್ತಕ ಬಿಡುಗಡೆ

| Published : Dec 18 2024, 12:48 AM IST

ಸಾರಾಂಶ

ಈಶ ಫೌಂಡೇಶನ್‌ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ಅವರ ‘ಎನ್‌ಲೈಟ್‌ಮೆಂಟ್‌: ಅ ನ್ಯೂ ಬಿಗಿನಿಂಗ್‌’ ಎಂಬ ಆಧ್ಯಾತ್ಮಿಕ ಪುಸ್ತಕ ಸೋಮವಾರ ಬಿಡುಗಡೆ ಆಗಿದೆ. ಪೆಂಗ್ವಿನ್‌ ಆನಂದ ಪ್ರಕಟಿಸಿರುವ ಈ ಪುಸ್ತಕವು ಬುದ್ಧಿ ಹಾಗೂ ಬುದ್ಧಿವಂತಿಕೆಯ ಮೇಲೆ ಬೆಳಕು ಚೆಲ್ಲಿದೆ.

ನವದೆಹಲಿ: ಈಶ ಫೌಂಡೇಶನ್‌ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ಅವರ ‘ಎನ್‌ಲೈಟ್‌ಮೆಂಟ್‌: ಅ ನ್ಯೂ ಬಿಗಿನಿಂಗ್‌’ ಎಂಬ ಆಧ್ಯಾತ್ಮಿಕ ಪುಸ್ತಕ ಸೋಮವಾರ ಬಿಡುಗಡೆ ಆಗಿದೆ. ಪೆಂಗ್ವಿನ್‌ ಆನಂದ ಪ್ರಕಟಿಸಿರುವ ಈ ಪುಸ್ತಕವು ಬುದ್ಧಿ ಹಾಗೂ ಬುದ್ಧಿವಂತಿಕೆಯ ಮೇಲೆ ಬೆಳಕು ಚೆಲ್ಲಿದೆ. ಜತೆಗೆ, ಪುರಾಣಗಳಿಗೆ ಸವಾಲೆಸೆದಿದ್ದು ಹಲವು ಪ್ರಶ್ನೆಗಳಿಗೆ ಉತ್ತರ ಒದಗಿಸಿದೆ.

ಪುಸ್ತಕದ ಕುರಿತು ಮಾತನಾಡಿರುವ ಸದ್ಗುರು, ‘ಜ್ಞಾನೋದಯ ಕುರಿತ ಅತಿ ಕಠಿಣ ವಿಷಯವೆಂದರೆ, ಅದು ಅತಿ ಸರಳವಾಗಿದೆ. ಆದ್ದರಿಂದಲೇ ಜನ ಇದರಿಂದ ವಂಚಿತರಾಗುತ್ತಾರೆ. ಜ್ಞಾನೋದಯವು ಚಂದ್ರನ ಮೇಲೆಲ್ಲಾದರೂ ಇದ್ದಿದ್ದರೆ ಜನ ಇಷ್ಟು ಹೊತ್ತಿಗೆ ಅದನ್ನು ಪಡೆಯುತ್ತಿದ್ದರು. ಅದು ನಮ್ಮ ಅಂತರಂಗದಲ್ಲಿಯೇ ಇದೆ. ಆದರೆ ನಮ್ಮ ಗಮನವೆಲ್ಲಾ ಹೊರಗಿನ ಪ್ರಪಂಚದ ಮೇಲೆಯೇ ಇದೆ. ಇದೇ ಸಮಸ್ಯೆ’ ಎಂದರು.

ಈ ಪುಸ್ತಕವು ಸದ್ಗುರು ಅವರ ಪ್ರವಚನಗಳ ಸಂಗ್ರಹವಾಗಿದ್ದು, ಜ್ಞಾನೋದಯವು ನೈಸರ್ಗಿಕ ಕ್ರಿಯೆಯಾಗಿದೆ ಎಂಬುದನ್ನು ಪ್ರತಿಪಾದಿಸುತ್ತದೆ.

ಟಿಪ್ಪು ಜಯಂತಿಗೆ ಅನುಮತಿ: ಹೈಕೋರ್ಟ್‌ಗೆ ಮಹಾ ಸರ್ಕಾರ ಮಾಹಿತಿ

ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ ಟಿಪ್ಪು ಜಯಂತಿ ಆಚರಿಸಲು ಈಗಾಗಲೇ ಅನುಮತಿ ನೀಡಲಾಗಿದೆ ಎಂದು ಪೊಲೀಸರು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.ಮೆರವಣಿಗೆಗೆ ಪೊಲೀಸರು ಅನುಮತಿ ಹಾಗೂ ನಿರಾಪೇಕ್ಷಣೆ ಪತ್ರ ನೀಡುತ್ತಿಲ್ಲ ಎಂದು ಎಐಎಂಐಎಂ ಪಕ್ಷ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠ, ‘ಸ್ಥಳದ ಕಾನೂನು ಸುವ್ಯವಸ್ಥೆಯ ಸ್ಥಿತಿಗತಿ ಕೋರ್ಟಿಗಿಂತ ಪೊಲೀಸರಿಗೆ ಚೆನ್ನಾಗಿ ತಿಳಿದಿರುತ್ತದೆ. ಹಾಗಂದ ಮಾತ್ರಕ್ಕೆ ಪೊಲೀಸರು ವಿನಾಕಾರಣ ಅನುಮತಿ ನಿರಾಕರಿಸುವಂತಿಲ್ಲ. ಮೆರವಣಿಗೆ ಮಾಡುವಂಥದ್ದು ಎಲ್ಲರ ಹಕ್ಕು. ಭಿತ್ತಿ ಪತ್ರ ಅಳವಡಿಕೆ ವಿಚಾರವಾಗಿ ಪೊಲೀಸರು ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದು ಹೇಳಿತು.

ಇದಕ್ಕೆ ಉತ್ತರಿಸಿದ ಪಬ್ಲಿಕ್‌ ಪ್ರಾಸಿಕ್ಯೂಟರ್‌, ನಿಗದಿ ಮಾರ್ಗದಲ್ಲಿ ಮೆರವಣಿಗೆ ಸಾಗಲು ಈಗಾಗಲೇ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.