ಸಾರಾಂಶ
ಕೋಲಂಬೊ/ನವದೆಹಲಿ: ಭಾರತ ಮತ್ತು ಶ್ರೀಲಂಕಾವನ್ನು ರಸ್ತೆ ಮತ್ತು ರೈಲ್ವೆ ಮೂಲಕ ಸಂಪರ್ಕಿಸುವ ಭೂಸಂಪರ್ಕ ಯೋಜನೆಯ ಭಾರತದ ಪ್ರಸ್ತಾವನೆಯನ್ನು ಶ್ರೀಲಂಕಾ ತಿರಸ್ಕರಿಸಿದೆ ಎಂದು ವರದಿಯಾಗಿದೆ.
ಈ ತಿಂಗಳ ಆರಂಭದಲ್ಲಿ ಶ್ರೀಲಂಕಾಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಲಂಕಾ ಅಧ್ಯಕ್ಷ ಅನುರಾ ಕುಮಾರ್ ದಿಸ್ಸಾನಾಯಕೆ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಉಭಯ ದೇಶಗಳ ಭೂಸಂಪರ್ಕದಿಂದಾಗುವ ಲಾಭಗಳ ಕುರಿತು ಮನವರಿಕೆ ಮಾಡಿಕೊಟ್ಟಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ದಿಸ್ಸಾನಾಯಕೆ ಭಾರತಕ್ಕೆ ಬಂದಾಗಲೂ ಈ ಕುರಿತು ಚರ್ಚಿಸಲಾಗಿತ್ತು. ಆದರೆ ಭಾರತದೊಂದಿಗೆ ಭೂಸಂಪರ್ಕ ಸಾಧಿಸಲು ತಾನಿನ್ನೂ ಸಿದ್ಧಗೊಂಡಿಲ್ಲ ಎಂದಿರುವ ಶ್ರೀಲಂಕಾ, ಪ್ರಸ್ತಾವವನ್ನು ತಿರಸ್ಕರಿಸಿದೆ ಎನ್ನಲಾಗಿದೆ.
2002ರಿಂದಲೂ ಪ್ರಯತ್ನ:
2002/2004ರಲ್ಲಿ ಆಗಿನ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವಧಿಯಲ್ಲಿ ಎರಡೂ ದೇಶಗಳನ್ನು ಸಂಪರ್ಕಿಸುವ ಭೂಸೇತುವೆಯ ಬಗ್ಗೆ ಮೊದಲು ಚರ್ಚಿಸಲಾಗಿತ್ತು. 2023ರಲ್ಲಿ ವಿಕ್ರಮಸಿಂಘೆ ಅಧ್ಯಕ್ಷರಾಗಿ ನವದೆಹಲಿಗೆ ಭೇಟಿ ನೀಡಿದಾಗ ಪ್ರಧಾನಿ ಮೋದಿ ನೀಡಿದ ಜಂಟಿ ಹೇಳಿಕೆಯಲ್ಲಿಯೂ ಭೂಸಂಪರ್ಕ ಯೋಜನೆ ಬಗ್ಗೆ ಉಲ್ಲೇಖಿಸಲಾಗಿದೆ.
ಕುನೋದಿಂದ ಕೆಲ ಚೀತಾ ಗಾಂಧಿ ಸಾಗರ ರಾಷ್ಟ್ರೀಯ ಉದ್ಯಾನಕ್ಕೆ ವರ್ಗ: ಸಿಎಂ
ಭೋಪಾಲ್: ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿರುವ ಚೀತಾಗಳ ಪೈಕಿ ಕೆಲವನ್ನು ಗಾಂಧಿ ಸಾಗರ ಉದ್ಯಾನಕ್ಕೆ ವರ್ಗಾಯಿಸಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಯಾದವ್, ‘ಏ.20ರಂದು ಚೀತಾ ಯೋಜನೆಯನ್ನು ಗಾಂಧಿ ಸಾಗರ ಅಭಯಾರಣ್ಯಕ್ಕೂ ವಿಸ್ತರಿಸಲಾಗುವುದು. ಇದು ವನ್ಯಜೀವಿ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕೆಲ ಚೀತಾಗಳನ್ನು ಇಲ್ಲಿಗೆ ವರ್ಗಾಯಿಸಲಾಗುವುದು’ ಎಂದಿದ್ದಾರೆ. 2 ಚೀತಾಗಳನ್ನು ಗಾಂಧಿ ಸಾಗರಕ್ಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಮಧ್ಯ ಪ್ರದೇಶದ ಕುನೋದಲ್ಲಿ ಒಟ್ಟು 26 ಚೀತಾಗಳಿದ್ದು, ಅವುಗಳಲ್ಲಿ 14 ಭಾರತದಲ್ಲಿ ಜನಿಸಿವೆ.
ಒಡಿಶಾದ ಗ್ರಹಾಂ ಸ್ಟೇನ್ಸ್ ಹತ್ಯೆ ಪ್ರಕರಣದ ದೋಷಿ ಸನ್ನಡತೆ ಹಿನ್ನೆಲೆ ರಿಲೀಸ್
ಭುವನೇಶ್ವರ: 25 ವರ್ಷಗಳ ಹಿಂದೆ ಭಾರಿ ಸುದ್ದಿಯಾಗಿದ್ದ ಆಸ್ಟ್ರೇಲಿಯಾ ಮೂಲದ ಕ್ರೈಸ್ತ ಮಿಷನರಿ ಗ್ರಹಾಂ ಸ್ಟೇನ್ಸ್ ಹತ್ಯೆ ಪ್ರಕರಣದ ಗೋಷಿ ಮಹೇಂದ್ರ ಹೆಂಬ್ರಂ 25 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಸನ್ನಡತೆ ಆಧಾರದ ಮೇಲೆ ಒಡಿಶಾ ಸರ್ಕಾರ ಇವರನ್ನು ಬಿಡುಗಡೆ ಮಾಡಿದೆ. ಮಹೇಂದ್ರ ಮತ್ತು ಧಾರಾಸಿಂಗ್ ಸೇರಿದಂತೆ ಗುಂಪೊಂದು 1999ರ ಜ.21ರಂದು ಗ್ರಹಾಂ ಸ್ಟೇನ್ಸ್ ಮತ್ತು ಅವರ 2 ಮಕ್ಕಳು ಮಲಗಿರುವಾಗ ಬೆಂಕಿ ಹಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣ ವಿಶ್ವಾದ್ಯಂತ ಭಾರಿ ಸುದ್ದಿಯಾಗಿತ್ತು.
ಬಳಿಕ ಮಹೇಂದ್ರ ಸೇರಿ 51 ಜನರನ್ನು ಪೊಲೀಸರು ಬಂಧಿಸಿದ್ದರು. ಸಿಬಿಐ ಕೋರ್ಟ್ ಧಾರಾಸಿಂಗ್ ಅವರಿಗೆ ಮರಣ ದಂಡನೆ, ಮಹೇಂದ್ರ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಬಳಿಕ ಧಾರಾಸಿಂಗ್ ಅವರ ಶಿಕ್ಷೆಯನ್ನು ಜೀವಾವಧಿಗೆ ಇಳಿಸಲಾಗಿತ್ತು. ಈ ವರ್ಷ ಸನ್ನಡತೆ ಆಧಾರದ ಮೇಲೆ ಮಹೇಂದ್ರ ಬಿಡುಗಡೆಯಾಗಿದ್ದಾರೆ. ಈ ಪ್ರಕರಣದಲ್ಲಿ ತಮ್ಮನ್ನು ಸಿಕ್ಕಿಸಲಾಗಿತ್ತು ಹೆಂಬ್ರಂ ಎಂದು ಹೇಳಿದ್ದಾರೆ.